







ಒಂದು ಬೇಡಿಕೆ ಸರ್ಕಾರದ ಕಡತಗಳಲ್ಲಿ ಎಷ್ಟು ವರ್ಷ ಸುತ್ತಬಹುದು? ತುಳುನಾಡಿನ ಜನರ ಪಾಲಿಗೆ ಈ ಪ್ರಶ್ನೆಗೆ ಉತ್ತರ – ಸರಿ ಸುಮಾರು ಐದೂವರೆ ದಶಕ.


ಹೌದು, 2026ರ ಸೆಪ್ಟೆಂಬರ್ 18 ರಂದು ಆ ಕಾಯುವಿಕೆಗೆ ಒಂದು ತಿರುವು ಸಿಕ್ಕಿತು. ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಒಂದನ್ನು ಕೈಗೊಳ್ಳಲಾಯಿತು., ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ತುಳುವನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ಸಲುವಾಗಿ ಸಂಪುಟ ಅನುಮೋದನೆ ನೀಡಿತು. ಕರಾವಳಿ ಜಿಲ್ಲೆಯೊಂದರ ಕೇಂದ್ರಸ್ಥಾನದಲ್ಲಿ ಸಂಪುಟ ಸಭೆ ನಡೆದಿದ್ದೇ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು ಎಂಬುದೂ ಈ ದಿನಕ್ಕೆ ಒಂದು ಸಾಂಕೇತಿಕ ಮಹತ್ವ ತಂದುಕೊಟ್ಟಿತು.



ಆದರೆ, ಈ ಒಂದು ದಿನದ ಘೋಷಣೆಯ ಹಿಂದೆ ಒಂದು ಉದ್ದದ ಇತಿಹಾಸವೇ ಇದೆ. ರಾಜಕೀಯ ಭರವಸೆಗಳಿಂದ ಆರಂಭವಾಗಿ, ತಜ್ಞರ ಸಮಿತಿ, ಕಾನೂನು ಇಲಾಖೆಯ ಪರಿಶೀಲನೆ, ಬೇರೆ ರಾಜ್ಯದ ಮಾದರಿಯ ಅಧ್ಯಯನದ ಮೂಲಕ ಹಾದುಬಂದ ಕಥೆ. ಅದನ್ನು ಅರ್ಥಮಾಡಿಕೊಳ್ಳದೆ ಸೆಪ್ಟೆಂಬರ್ 18ರ ನಿರ್ಧಾರವನ್ನು ಸಂಪೂರ್ಣವಾಗಿ ಗ್ರಹಿಸುವುದು ಕಷ್ಟ.
1971ರಿಂದಲೇ ಆರಂಭವಾದ ಹೋರಾಟ ಇದು. ಸಂಕ್ಷಿಪ್ತವಾಗಿ ಇತಿಹಾಸದ ಹೆಜ್ಜೆ ಗುರುತು ಗಮನಿಸೋಣ.
ತುಳು ಮಾನ್ಯತೆಯ ಸಂಕ್ಷಿಪ್ತ ಸಮಯ ಪಥ (1971-2026)
1971 – ಎಸ್.ಆರ್. ಹೆಗ್ಡೆ ಅವರಿಂದ ತುಳುವಿಗೆ ಮಾನ್ಯತೆ ಕೋರಿ ಮೊದಲ ಮನವಿ ಪತ್ರ (ಮೆಮೊರಾಂಡಮ್).
1974 – ತುಳು ಸಮ್ಮೇಳನದಲ್ಲಿ ಭಾಷೆಯ ಮಾನ್ಯತೆ ಮತ್ತು ಅಭಿವೃದ್ಧಿಗಾಗಿ ನಿರ್ಣಯ ಅಂಗೀಕಾರ.
1994 – ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆ.
2001 – ತುಳುವನ್ನು ಸಂವಿಧಾನದ ಎಂಟನೇ ಪರಿಶಿಷ್ಟಕ್ಕೆ ಸೇರಿಸಲು ಕರ್ನಾಟಕ ಸಚಿವ ಸಂಪುಟದ ಶಿಫಾರಸು.
2002 – ವಿಷಯ ಸಂಸತ್ತಿನಲ್ಲಿ ಪ್ರಸ್ತಾಪ.
2003- ರಾಷ್ಟ್ರೀಯ ಸಮಾವೇಶ ಆಯೋಜನೆ.
2008 – ಯಡಿಯೂರಪ್ಪ ಅವಧಿಯಲ್ಲಿ ಎಂಟನೇ ಪರಿಶಿಷ್ಟ ಸೇರ್ಪಡೆಗೆ ರಾಜಕೀಯ ಒತ್ತಡ ಮುಂದುವರಿಕೆ.
2016 – ಡಾ. ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಿಯೋಗ ದೆಹಲಿಗೆ.
2021 – #TuluOfficialinKA_KL ಸಾಮಾಜಿಕ ಜಾಲತಾಣ ಅಭಿಯಾನ (ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ಸ್ಥಾನಕ್ಕಾಗಿ).
2023 – ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ಸಮಿತಿ ರಚನೆ.
2026 – ರಾಜ್ಯ ಮಟ್ಟದ ಆಡಳಿತದಲ್ಲಿ ತುಳುವಿನ ಬಳಕೆ ಕುರಿತ ಪರಿಶೀಲನೆ ಆರಂಭ.
ಸೆಪ್ಟೆಂಬರ್ 18, 2026 – ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತ ಉದ್ದೇಶಕ್ಕಾಗಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯ ಮಾಡುವ ನಿರ್ಧಾರ.
ಮೂರು ಹಂತಗಳು
1971-1994: ಸಾಂಸ್ಕೃತಿಕ ಸಂಘಟನೆ (ಬರಹಗಾರರು, ಸಂಸ್ಥೆಗಳು)
2001-2016: ಸಾಂವಿಧಾನಿಕ ಮತ್ತು ರಾಜಕೀಯ ಹೋರಾಟ
2021-2026: ಡಿಜಿಟಲ್ ಜನಾಂದೋಲನ ಮತ್ತು ಆಡಳಿತಾತ್ಮಕ ಮಾನ್ಯತೆ
ಇವಿಷ್ಟು ಪ್ರಮುಖ ಹೆಜ್ಜೆ ಗುರುತುಗಳು. ಈಗ ಪ್ರಮುಖ ನಿರ್ಣಾಯವೆನಿಸುವ ಮೂರು ಹಂತಗಳ ಕಡೆಗೆ ಗಮನಹರಿಸೋಣ.
ಹಂತ 1: 2008ರ ರಾಜಕೀಯ ಭರವಸೆ
“ಇತ್ತೀಚಿನ ಇತಿಹಾಸ” ಆರಂಭವಾಗುವುದು 2008ನೇ ಇಸವಿಯಿಂದ. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ, ತುಳುವಿಗೆ ಅಧಿಕೃತ ಮಾನ್ಯತೆ ನೀಡುವ ಮತ್ತು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಭರವಸೆ ವ್ಯಕ್ತವಾಗಿತ್ತು ಎಂದು ಸಮಕಾಲೀನ ವರದಿಗಳು ದಾಖಲಿಸಿವೆ. ಆದರೆ ಆ ಪ್ರಯತ್ನ ಅಂತಿಮ ಪ್ರಕ್ರಿಯೆಯಾಗಿ ರೂಪುಗೊಳ್ಳಲಿಲ್ಲ. ಇದನ್ನು ಅಂತಿಮ ಅಧಿಕೃತ ಹೆಜ್ಜೆ ಎನ್ನುವುದಕ್ಕಿಂತ, ಬೇಡಿಕೆಗೆ ಮೊದಲ ರಾಜಕೀಯ ಸ್ಪಂದನೆ ಎಂದು ಕರೆಯುವುದೇ ಸೂಕ್ತ. ಆ ಬಳಿಕ 2021ರ ಸಾಮಾಜಿಕ ಜಾಲತಾಣ ಅಭಿಯಾನದವರೆಗೆ ಬೇಡಿಕೆ ಹಂತ ಹಂತವಾಗಿ ಜೀವಂತವಾಗಿಯೇ ಇತ್ತು.
ಹಂತ 2: ಆಳ್ವ ಸಮಿತಿ: ಮೊದಲ ಅಧಿಕೃತ ಅಧ್ಯಯನ (2023)
ಬೇಡಿಕೆಗೆ ಸ್ಪಷ್ಟ ಸರ್ಕಾರಿ ರೂಪ ಸಿಕ್ಕಿದ್ದು 2023ರಲ್ಲಿ. ಆಗಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವಧಿಯಲ್ಲಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾಡುವ ಸಾಧ್ಯತೆ ಪರಿಶೀಲಿಸಲು ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆಯ ತಜ್ಞರ ಸಮಿತಿ ರಚನೆಯಾಯಿತು. ಸಮಿತಿ ತುಳುವಿನ ಇತಿಹಾಸ, ತಿಗಳಾರಿ ಲಿಪಿ, ಸಾಹಿತ್ಯ ಪರಂಪರೆ, ಶಾಸನಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಆಳವಾಗಿ ಅಧ್ಯಯನ ಮಾಡಿ, ಫೆಬ್ರವರಿ 14, 2023ರಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿತು. ತಮಿಳು-ಕನ್ನಡಗಳಷ್ಟೇ ಪ್ರಾಚೀನವಾದ, ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿರುವ ಭಾಷೆ ಎಂಬ ಆಧಾರದ ಮೇಲೆ ತುಳು ಈ ಮಾನ್ಯತೆಗೆ ಅರ್ಹ ಎಂಬುದು ಸಮಿತಿಯ ನಿಲುವಾಗಿತ್ತು.
ಆದರೆ ವರದಿ ಸಲ್ಲಿಕೆಯಾದ ಮಾತ್ರಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಭಾಷೆಯನ್ನು ಆಡಳಿತಾತ್ಮಕವಾಗಿ ಬಳಸಲು ಅನುಮತಿ ನೀಡುವುದು ಕೇವಲ ಸಾಂಸ್ಕೃತಿಕ ವಿಚಾರವಾಗಿರಲಿಲ್ಲ- ಅದರ ಹಿಂದೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಶ್ನೆಗಳೂ ಇದ್ದವು.
ಹಂತ 3: ಕಾನೂನು ಪರಿಶೀಲನೆ ಮತ್ತು ಆಂದ್ರ ಮಾದರಿಯ ಅಧ್ಯಯನ
ಸರ್ಕಾರ ಈ ವಿಚಾರವನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಒಪ್ಪಿಸಿತು. ಇಲಾಖೆಯ ಪ್ರಕಾರ, ಸಂವಿಧಾನದ ಅನುಚ್ಚೇದ 345 ರಾಜ್ಯ ಸರ್ಕಾರಗಳಿಗೆ ತಮ್ಮ ರಾಜ್ಯದ ಅಧಿಕೃತ ಭಾಷೆ(ಗಳ)ಯನ್ನು ಕಾನೂನಿನ ಮೂಲಕ ನಿರ್ದಿಷ್ಟಪಡಿಸುವ ಅವಕಾಶ ನೀಡುತ್ತದೆ. ಇದೇ ಹಂತದಲ್ಲಿ ಸರ್ಕಾರ ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು; ಪ್ರಕ್ರಿಯೆ ನಿಧಾನವಾಗಿ ಮುಂದುವರಿಯಿತು.
ಬಳಿಕ ಸರ್ಕಾರ, ಆಂಧ್ರಪ್ರದೇಶದಲ್ಲಿ ಉರ್ದುವಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಯನ್ನು ಅಧ್ಯಯನ ಮಾಡಲು ಪ್ರತ್ಯೇಕ ತಜ್ಞರ ತಂಡ ರಚಿಸಿತು. ಭಾಷೆಯ ಸ್ಥಾನಮಾನವಷ್ಟೇ ಅಲ್ಲದೆ, ಅದನ್ನು ಆಡಳಿತದಲ್ಲಿ ಹೇಗೆ ಬಳಸಲಾಗುತ್ತದೆ, ಯಾವ ನೀತಿ-ಆಡಳಿತಾತ್ಮಕ ವ್ಯವಸ್ಥೆ ಅಗತ್ಯ ಎಂಬುದನ್ನೂ ಪರಿಶೀಲಿಸಲಾಯಿತು. 2026ರ ಜೂನ್ನಲ್ಲಿ ಈ ಸಮಿತಿಯ ವರದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಕೆಯಾಗಿತ್ತು.
ಕಾನೂನು ಇಲಾಖೆಯ ಅಂತಿಮ ಸಮ್ಮತಿ ಸಿಕ್ಕ ಬಳಿಕವಷ್ಟೇ, ಸೆಪ್ಟೆಂಬರ್ 18ರ ಮಂಗಳೂರು ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಯಿತು.
ಒಟ್ಟಾರೆ ಇತ್ತೀಚಿನ ಈ ಪ್ರಕ್ರಿಯೆಯನ್ನು ಹೀಗೆ ಸಂಕ್ಷಿಪ್ತವಾಗಿ ಕಾಣಬಹುದು:
ರಾಜಕೀಯ ಭರವಸೆ (2008). ತಜ್ಞರ ಅಧ್ಯಯನ (ಆಳ್ವ ಸಮಿತಿ, 2023), ಕಾನೂನು ಪರಿಶೀಲನೆ. ಅಂಧ್ರ ಮಾದರಿ ಅಧ್ಯಯನ (2026). ಸಂಪುಟ ನಿರ್ಧಾರ ( ಸೆಪ್ಟೆಂಬರ್ 18, 2026).
“ಹೆಚ್ಚುವರಿ ಆಡಳಿತ ಭಾಷೆ” ಎಂದರೆ ಏನು ಮತ್ತು ಏನಲ್ಲ?
ಹೆಚ್ಚುವರಿ ಆಡಳಿತ ಭಾಷೆ ವಿಚಾರವಾಗಿ ಒಂದು ಸ್ಪಷ್ಟನೆ ಅಗತ್ಯ, ಏಕೆಂದರೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗೊಂದಲ ಕಾಣಿಸುತ್ತಿದೆ. ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ಕೆಲವು ಕ್ಷೇತ್ರಗಳಲ್ಲಿ ತುಳುವಿನ ಬಳಕೆಗೆ ಅಧಿಕೃತ ಚೌಕಟ್ಟು ರೂಪಿಸುವ ರಾಜ್ಯ ಸರ್ಕಾರದ ನಿರ್ಧಾರ. ಇದರ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಡಳಿತಗಳಿಗೆ ವಹಿಸಲಾಗಿದೆ.
ಆದರೆ ಇದು
ಶಾಸ್ತ್ರೀಯ ಭಾಷೆಯ ಸ್ಥಾನಮಾನವಲ್ಲ: ಆ ಮಾನ್ಯತೆ ಕೇಂದ್ರ ಸರ್ಕಾರದ ವ್ಯಾಪ್ತಿಯದ್ದು, ತುಳುವಿಗೆ ಇನ್ನೂ ಸಿಕ್ಕಿಲ್ಲ.
ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯೂ ಅಲ್ಲ : ಪ್ರಸ್ತುತ ಆ ಪಟ್ಟಿಯಲ್ಲಿ 22 ಭಾಷೆಗಳಿದ್ದು, ತುಳು ಇನ್ನೂ ಸೇರಿಲ್ಲ. ಇದೂ ಕೇಂದ್ರದ ವ್ಯಾಪ್ತಿಯ ವಿಷಯ.
ಕನ್ನಡದ ಸ್ಥಾನವನ್ನು ಬದಲಿಸುವುದಿಲ್ಲ: ಕರ್ನಾಟಕದ ಏಕೈಕ ಅಧಿಕೃತ ಭಾಷೆ ಕನ್ನಡವೇ ಆಗಿ ಮುಂದುವರಿಯುತ್ತದೆ; ತುಳು ಅದರ ಜೊತೆಗೆ, ಆ ಎರಡು ಜಿಲ್ಲೆಗಳಿಗೆ ಸೀಮಿತವಾದ ಹೆಚ್ಚುವರಿ ಭಾಷೆ.
ಈ ವ್ಯತ್ಯಾಸಗಳನ್ನು ಸ್ಪಷ್ಟಪಡಿಸದೆ ಹೋದರೆ, “ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿತು” ಎಂಬಂತಹ ತಪ್ಪು ಗ್ರಹಿಕೆ ಹರಡುವ ಅಪಾಯವಿದೆ.
ಮುಂದೇನು?
ಸಂಪುಟದ ಅನುಮೋದನೆ ಒಂದು ಮೈಲಿಗಲ್ಲಷ್ಟೆ; ಸರ್ಕಾರಿ ಆದೇಶ, ಅಧಿಸೂಚನೆ ಮತ್ತು ಅನುಷ್ಠಾನ ನಿಯಮಾವಳಿ ಹೊರಡಿಸುವ ಕೆಲಸ ಇನ್ನೂ ಬಾಕಿಯಿದೆ. ಜಿಲ್ಲಾಡಳಿತಗಳು ಇದನ್ನು ಕಚೇರಿ ಮಟ್ಟದಲ್ಲಿ ಹೇಗೆ ಜಾರಿಗೊಳಿಸುತ್ತವೆ. ಯಾವ ಲಿಪಿ ಬಳಸಲಾಗುತ್ತದೆ, ಸಿಬ್ಬಂದಿಗೆ ತರಬೇತಿ ಹೇಗೆ ಎಂಬುದು ಮುಂದಿನ ಹಂತದ ಪ್ರಶ್ನೆಗಳು. ಇವನ್ನು ಮುಂದಿನ ಲೇಖನದಲ್ಲಿ ಅರ್ಥಮಾಡಿಕೊಳ್ಳೋಣ.











