







ಪುತ್ತೂರು: ಸುಳ್ಯದ ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ ಬೃಹತ್ ಗಾಂಧಿ ನಡಿಗೆ ಹಾಗೂ ಸುದ್ದಿ ಬಿಡುಗಡೆ ಮಾಲಕರು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಡಾ.ಯು.ಪಿ. ಶಿವಾನಂದರಿಗೆ ರಾಜ್ಯ ಮಟ್ಟದ ‘ಗಾಂಧಿ ಸ್ಮೃತಿ’ ಪ್ರಶಸ್ತಿ ಪ್ರದಾನ ಸಮಾರಂಭ ಅ.2 ರಂದು ಸುಳ್ಯದಲ್ಲಿ ನಡೆಯಿತು.


ಬೃಹತ್ ಗಾಂಧಿ ನಡಿಗೆ :
ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ಪುತ್ಥಳಿ ಬಳಿಯಿಂದ ಬೃಹತ್ ಗಾಂಧಿ ನಡಿಗೆ ಆರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈಯವರು ಗಾಂಧಿಜಿ ಪುತ್ಥಳಿಗೆ ಹಾರಾರ್ಪಣೆಗೈದರು. ಬಳಿಕ ಸುಳ್ಯ ಪುರಸಭೆಯ ಮಾಜಿ ಸದಸ್ಯ ಹಾಗೂ ಹಿರಿಯರಾದ ಕಂಜಳ ನಾವೂರು ರಾಷ್ಟ್ರಧ್ವಜ ಬೀಸುವುದರ ಮೂಲಕ ಗಾಂಧಿನಡಿಗೆಗೆ ಚಾಲನೆ ನೀಡಿದರು.




ಬಳಿಕ ಎನ್.ಎಂ.ಸಿ. ಹಾಗೂ ಸುಳ್ಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಇದ್ದ ಗಾಂಽನಡಿಗೆ , ವೇದಿಕೆಯ ಪ್ರಧಾನ ಸಂಚಾಲಕರಾದ ಹರೀಶ್ ಬಂಟ್ವಾಳ್ ನೇತೃತ್ವದಲ್ಲಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಬಾಳೆಮಕ್ಕಿ ಶ್ರೀಹರಿ ಕಾಂಪ್ಲೆಕ್ಸ್ ಬಳಿಗೆ ತಲುಪಿತು. ಮೆರವಣಿಗೆಯಲ್ಲಿ ಭಾಗವಹಿಸಿದವರು ಗಾಂಧಿ ಟೋಪಿ ತೊಟ್ಟು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಸಾಗಿದರು.
ರಂಗ ಮಯೂರಿಯಲ್ಲಿ ಗಾಂಧಿ ಚಿಂತನ ಮತ್ತು ಪ್ರಶಸ್ತಿ ಪ್ರದಾನ :
ಬಳಿಕ ಗಾಂಧಿ ಚಿಂತನ ಹಾಗೂ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯದ ರಂಗಮಯೂರಿ ಸಭಾಂಗಣದಲ್ಲಿ ನಡೆಯಿತು. ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿ ಚಿಂತನೆಯ ಕುರಿತು ಮಾತನಾಡಿದ ಚಿಂತನ ವೇದಿಕೆಯ ಸಂಸ್ಥಾಪಕ ಸಂಚಾಲಕ ಡಾ.ಸುಂದರ ಕೇನಾಜೆಯವರು “ಗಾಂಧಿಯಂತಹ ಚಾರಿತ್ರಿಕ ವ್ಯಕ್ತಿಯನ್ನು ಅನುಮಾನದಿಂದ ನೋಡುವಂತಹ ಪ್ರಯತ್ನ ನಮ್ಮ ದೇಶದಲ್ಲೆ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅದು ನೋವು ಮತ್ತು ಆತಂಕ ತರುವಂತಾದ್ದು, ಗಾಂಧಿಜಿ ಚಾರಿತ್ರಿಕ ವ್ಯಕ್ತಿ. ನಮ್ಮ ಹಿರಿಯರ ನಡುವೆ ಓಡಾಡಿದವರು. ಆಗ ಬದುಕಿದ್ದವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಬದುಕಿದವರು. ಸಾಮಾಜಿಕ ಬದಲಾವಣೆಗಾಗಿ ಖಚಿತವಾದ ದೃಷ್ಡಿಕೋನದಿಂದ, ಆತ್ಮವಿಶ್ವಾಸದ ಹಠಮಾರಿತನದಿಂದ ವಾಸ್ತವದ ನೆಲೆಯಲ್ಲಿ ಆದರ್ಶವನ್ನು ಸ್ವೀಕರಿಸಿ ನಡೆದವರು. ಆದ್ದರಿಂದ ಗಾಂಧಿ ಯಾವತ್ತಿಗೂ ಪ್ರಸ್ತುತವೆ. ಜಗತ್ತಿನಲ್ಲಿ ಹಿಂಸೆ ಇಲ್ಲದೇ ಯುದ್ಧ ಗೆಲ್ಲಬಹುದೆಂದು ತೋರಿಸಿದವರು ಬುದ್ಧ ಮತ್ತು ಗಾಂಧಿ ಮಾತ್ರ” ಎಂದರು. ಬಳಿಕ ಡಾ.ಯು.ಪಿ.ಶಿವಾನಂದರಿಗೆ ಖಾದಿ ಶಾಲು ಹೊದಿಸಿ, ಖಾದಿ ಹಾರ ತೊಡಿಸಿ, ಗಾಂಧಿ ಸ್ಮರಣಿಕೆ ಹಾಗೂ 10 ಸಾವಿರ ರೂ. ನಗದು ಒಳಗೊಂಡ ‘ಗಾಂಧಿ ಸ್ಮೃತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಶಿವಾನಂದರ ಚಿಂತನೆ ಮತ್ತು ಸೇವೆ ಗಾಂಧಿ ಪ್ರಶಸ್ತಿಗೆ ಅರ್ಹವಾದುದು : ಕೆ.ಸೀತಾರಾಮ ರೈ:
ಕಳೆದ ವರ್ಷದ ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತ ರಾಗಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರುರವರು ಡಾ.ಶಿವಾನಂದರಿಗೆ ಪ್ರಶಸ್ತಿ ಪ್ರದಾನಗೈದರು.
ಬಳಿಕ ಮಾತನಾಡಿದ ಸೀತಾರಾಮ ರೈಯವರು, ಸತ್ಯ, ಅಹಿಂಸೆ, ಸರಳತೆ, ಸೇವೆ ಮತ್ತು ಮಾನವೀಯತೆಯ ಮಹತ್ವವನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿಯನ್ನು ಸ್ಮರಿಸುವ ಅರ್ಥಪೂರ್ಣ ದಿನದಂದು ಡಾ. ಯು.ಪಿ.ಶಿವಾನಂದರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸುವುದು ನಿಜಕ್ಕೂ ಹೆಮ್ಮೆಯ ವಿಷಯ. ಗಾಂಧಿಜಿಯನ್ನು ನೆನೆಪಿಸಿಕೊಳ್ಳುವುದು ಒಂದು ದಿನದ ಆಚರಣೆಯಾಗಬಾರದು. ಗಾಂಧಿಜಿಯವರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಗೌರವ. ಸಮಾಜದ ನೋವಿಗೆ ಸ್ಪಂದಿಸುವುದು, ಸತ್ಯದ ಪರವಾಗಿ ನಿಲ್ಲುವುದು, ಜನರಲ್ಲಿ ಜಾಗೃತಿ ಮೂಡಿಸುವುದೇ ನಿಜವಾದ ಗಾಂಧಿ ಚಿಂತನೆ. ಈ ದೃಷ್ಟಿಯಿಂದ ನೋಡಿದಾಗ ಡಾ. ಶಿವಾನಂದರ ದೀರ್ಘ ಕಾಲದ ಸೇವೆ ಮತ್ತು ಚಿಂತನೆ ನಿಜಕ್ಕೂ ಗೌರವಕ್ಕೆ ಅರ್ಹವಾಗಿದೆ. ವೈದ್ಯರಾಗಿ ಜನರ ಆರೋಗ್ಯದ ಕಾಳಜಿ ವಹಿಸಿದ ಅವರು. ಪತ್ರಕರ್ತರಾಗಿ ಸಮಾಜದ ಸಮಸ್ಯೆಗಳಿಗೆ ಧ್ವನಿಯಾದವರು, ಗಾಂಧಿವಾದಿಯಾಗಿ ಗಾಂಽಜಿಯವರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದವರು”ಎಂದು ಹೇಳಿದರು.
ಡಾ.ಶಿವಾನಂದರು ಸಾಧಕ -ಭಾಗೀರಥಿ ಮುರುಳ್ಯ :
ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಗಾಂಧಿಜಿಯವರ ಸತ್ಯ, ಬಡವರ ಪರ ಕಾಳಜಿ, ಅಹಿಂಸಾತ್ಮಕ ಹೋರಾಟ ನಮಗೆಲ್ಲರಿಗೂ ಜೀವನ ಪಾಠ. ಡಾ.ಯು.ಪಿ.ಶಿವಾನಂದರು ನಮ್ಮ ತಾಲೂಕಿನ ಸಾಧಕ. ಸುದ್ದಿ ಬಿಡುಗಡೆ ಪತ್ರಿಕೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಓದುವ ಪತ್ರಿಕೆ. ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡುವುದರಿಂದ ವಾರವಿಡೀ ನೋಡುವಂತೆ ಮಾಡುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ದೇಶ ಆಗಬೇಕೆಂದು ಜಾಗೃತಿ ನಡೆಯುತ್ತಿದೆ. ಆದರೆ ಎಷ್ಟರ ಮಟ್ಟಿಗೆ ನಿರ್ಮೂಲನೆ ಆಗಬಹುದು ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕಾಗಿ ಕಠಿಣ ಕಾನೂನು ಬರಬೇಕಾದೀತೇನೋ. ಆದರೆ ನಾವು ನಮ್ಮ ಪ್ರಯತ್ನ ನಿರಂತರ ಮಾಡೋಣ ” ಎಂದು ಅವರು ಹೇಳಿದರು.
ಡಾ. ಶಿವಾನಂದರು ಹಠವಾದಿ-ಭರತ್ ಮುಂಡೋಡಿ:
ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಡಾ.ಶಿವಾನಂದರು ಹಠವಾದಿ. ಅದು ಅವರ ಹುಟ್ಟು ಗುಣ. ಹಿಡಿದ ಕೆಲಸ ಆಗುವವರೆಗೆ ಮುಂದೆ ಹೋಗುತ್ತಾರೆ. ಒಂದು ಹೆಜ್ಜೆಯಿಂದ ಆರಂಭಗೊಂಡ ಪತ್ರಿಕೆಯನ್ನು ಮೈಲುದ್ದ ಬೆಳೆಸಿದವರು. ಅಂತಹ ಶ್ರಮ ಜೀವಿ. ಅವರಲ್ಲಿರುವ ಚಿಂತನೆಯನ್ನು ಜನರಿಗೆ ತಲುಪಿಸುವ ವ್ಯಕ್ತಿ. ಆಕರ್ಷಣೆಯ ವ್ಯಕ್ತಿಯಾಗಿ ಬದುಕುವುದಕ್ಕಿಂತ ಆದರ್ಶದ ವ್ಯಕ್ತಿಯಾಗಿ ಬದುಕು ಎಂಬ ನಾಣ್ಣುಡಿ ಶಿವಾನಂದರಿಗೆ ಹೇಳಿ ಮಾಡಿಸಿದಂತಿದೆ. ಗಾಂಧಿಜಿಯವರ ತತ್ವದಡಿಯಲ್ಲಿ ಕೆಲಸ ಮಾಡಿದ ಇವರಿಗೆ ಅರ್ಹವಾಗಿಯೇ ಪ್ರಶಸ್ತಿ ಸಂದಿದೆ” ಎಂದು ಹೇಳಿದರು.

ಗಾಂಧಿ ಚಿಂತನೆಗೆ ವಿಶ್ವಾದ್ಯಂತ ಮನ್ನಣೆಯಿದೆ- ಡಾ.ಶಿವಾನಂದ್:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಯು.ಪಿ.ಶಿವಾನಂದರು, ಗಾಂಧಿಜಿಯವರು ದೇಶ ಸುತ್ತಿದವರು. ಅವರ ಸರಳತೆ ಮತ್ತು ಜನರ ಜತೆ ಬೆಳೆಯುವ ಗುಣದಿಂದಾಗಿ ಜನರು ಅವರನ್ನು ಸ್ವೀಕರಿಸುವಂತಾಯಿತು. ನನಗೆ ಬಂದ ಎಲ್ಲ ಪ್ರಶಸ್ತಿಗಿಂತ ಗಾಂಧಿ ಸ್ಮೃತಿ ಪ್ರಶಸ್ತಿ ಶ್ರೇಷ್ಠವಾದುದು. ಅದೂ ನನ್ನ ಜನರ ಎದುರು ಸ್ವೀಕರಿಸಿದ್ದು ಮತ್ತಷ್ಟು ಖುಷಿ ಕೊಟ್ಟಿದೆ ಎಂದು ಹೇಳಿದರು. ನನ್ನ ಬದುಕೇ ನನ್ನ ಸಂದೇಶ – ಬೇರೆಯವರು ಏನಾಗಬೇಕೆಂದು ನೀನು ಬಯಸುತ್ತೀಯ… ಅದನ್ನು ಮೊದಲು ನೀನು ಮಾಡು ಎಂದು ಗಾಂಧಿಜಿ ಹೇಳುತ್ತಿದ್ದರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಗಾಂಧಿಜಿಯವರ ಚಿಂತನೆ ನಮ್ಮ ದೇಶದಲ್ಲಿ ದೂರವಾಗುತ್ತಿರುವುದು ನಿಜ. ಆದರೆ ಇಂಗ್ಲೆಂಡ್ ಸಹಿತ ಪ್ರಪಂಚದ ಇತರ ದೇಶಗಳಲ್ಲಿ ಗಾಂಧಿ ಚಿಂತನೆಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಅವರ ಬಗ್ಗೆ ಮತ್ತು ಅವರ ಚಿಂತನೆಗಳ ಬಗ್ಗೆ ಭಾರೀ ಗೌರವ ಇದೆ. ಜಗತ್ತು ನಾಶವಾಗದೇ ಇರಬೇಕಾದರೆ ಗಾಂಧಿ ಚಿಂತನೆ ಅಗತ್ಯ ಎಂದು ಮನವರಿಕೆಯಾಗುವ ದಿನ ಬಂದಿದೆ ಎಂದು ಡಾ.ಶಿವಾನಂದರು ಹೇಳಿದರು. ನಾನು ಪತ್ರಿಕೆಯಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಗಾಂಧಿಸ್ಮೃತಿ ಪ್ರಶಸ್ತಿ ನೀಡಿದ್ದೀರಿ. ಇದು ನನ್ನ ಸುದ್ದಿ ಬಳಗಕ್ಕೆ ಸಲ್ಲಬೇಕು. ಇಲ್ಲಿ ನಗದು ರೂಪದಲ್ಲಿ ನೀಡಲಾದ ರೂ.10 ಸಾವಿರವನ್ನು ಲೋಕೇಶ್ ಊರುಬೈಲು ನೇತೃತ್ವದಲ್ಲಿ ನಾಡದು ನಡೆಯುವ ಮಕ್ಕಳ ಹಬ್ಬಕ್ಕೆ ನೀಡುತ್ತೇನೆ ಎಂದು ಡಾ.ಶಿವಾನಂದರು ಘೋಷಿಸಿದರು.
ಹಿರಿಯರಾದ ಕಂಜಳ ನಾವೂರು, ಸಂಚಾಲಕರುಗಳಾದ ಶರೀಫ್ ಕಂಠಿ, ದುರ್ಗಾಕುಮಾರ್ ನಾಯರ್ಕೆರೆ ವೇದಿಕೆಯಲ್ಲಿ ಇದ್ದರು.
ಜಿಲ್ಲೆಯಲ್ಲಿ ಗಾಂಧಿಭವನ ಆಗಲಿ:
ಪ್ರತೀ ಜಿಲ್ಲೆಗಳಲ್ಲಿ ಗಾಂಧಿ ತತ್ವ ಪ್ರಚಾರಕ್ಕಾಗಿ ಗಾಂಧಿಭವನ ನಿರ್ಮಿಸಬೇಕೆಂಬ ಯೋಜನೆ ವಾರ್ತಾ ಇಲಾಖೆಯಲ್ಲಿ ಇದೆ. ಆದರೆ ನಮ್ಮ ದ.ಕ.ಜಿಲ್ಲೆಯಲ್ಲಿ ಅದು ಇಲ್ಲ. ಜಿಲ್ಲೆಗೆ ಗಾಂಧಿತತ್ವ ಅಗತ್ಯ ಬೇಕಾಗಿದೆ. ಆದ್ದರಿಂದ ಗಾಂಧಿತತ್ವದ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಗಾಂಽ ಭವನ ನಿರ್ಮಾಣವಾಗಬೇಕು. ಸರಕಾರ ಈ ಕುರಿತು ಚಿಂತಿಸಬೇಕು ಎಂದು ಸಭಾಧ್ಯಕ್ಷತೆಯಿಂದ ಮಾತನಾಡಿದ ಹರೀಶ್ ಬಂಟ್ವಾಳ್ ಹೇಳಿದರು.
ಸಂಚಾಲಕರಲ್ಲೊಬ್ಬರಾದ ಗಾಯಕರಾದ ಕೆ.ಆರ್.ಗೋಪಾಲಕೃಷ್ಣ ಹಾಗೂ ಶ್ರೀಮತಿ ಸತ್ಯವತಿ ದ.ರಾ.ಬೇಂದ್ರೆ, ಕುಲಕರ್ಣಿ ಮತ್ತು ಗೋಪಾಲಕೃಷ್ಣ ಅಡಿಗರು ಬರೆದ ಗಾಂಧಿಗೀತೆಗಳನ್ನು ಹಾಡಿದರು. ಸಂಚಾಲಕ ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು. ಸಂಚಾಲಕಿ ಚಂದ್ರಾವತಿ ಬಡ್ಡಡ್ಕ ಸನ್ಮಾನಿತರನ್ನು ಪರಿಚಯಿಸಿದರು. ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರತಿಜ್ಞೆ ಬೋಧನೆ ಮಾಡಿದರು.
ಗಾಂಽಚಿಂತನ ವೇದಿಕೆಯ ಸಂಚಾಲಕ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಶಂಕರ್ ಪೆರಾಜೆ ವಂದಿಸಿದರು. ಸಂಚಾಲಕರುಗಳಾದ ಶರೀ- ಕಂಠಿ ಮತ್ತು ದುರ್ಗಾಕುಮಾರ್ ನಾಯರ್ ಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರು
ವಿಶೇಷ ಆಹ್ವಾನಿತರುಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯಅಣ್ಣಾ ವಿನಯಚಂದ್ರ, ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್, ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ತಾ.ಪಂ. ಇ.ಒ. ರಾಜಣ್ಣ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕಳಂಜ ವಿಶ್ವನಾಥ ರೈ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ, ಪಿ.ಎಸ್.ಗಂಗಾಧರ್, ಡಾ.ನಿತಿನ್ ಪ್ರಭು, ಎಸ್.ಎಂ.ಬಾಪೂಸಾಹೇಬ್, ಪ್ರೊ.ಬಾಲಚಂದ್ರ ಗೌಡ, ಡಾ.ಪ್ರಭಾಕರ ಶಿಶಿಲ, ಎಸ್.ಸಂಶುದ್ದೀನ್, ಸತೀಶ್ ಕೊಂಗಾಜೆ, ಚಿತ್ರಲೇಖ ಎನ್.ಎಸ್.ಎಸ್., ಕಿಶೋರ್ ಕುಮಾರ್ ಬಿ.ಡಿ.ಎನ್.ಎಸ್.ಎಸ್., ರಾಮಕೃಷ್ಣ ಭಟ್ ಚೂಂತಾರು, ದಯಾನಂದ ಪಾತಿಕಲ್ಲು, ಪವನ್ ಪಲ್ಲತ್ತಡ್ಕ, ಶ್ರೀಮತಿ ಪುಷ್ಪಾ ದೇವಿಪ್ರಸಾದ್, ಲತಾ ಮಧುಸೂಧನ್, ವಿನೋದ್ ಲಸ್ರಾದೊ, ಶರೀಫ್ ಜಟ್ಟಿಪಳ್ಳ, ಯಶ್ವಿತ್ ಕಾಳಂಮನೆ, ಲೋಕೇಶ್ ಊರುಬೈಲು, ಲಕ್ಷ್ಮೀಶ ದೇವರಕಳಿಯ, ಎಂ.ಡಿ.ವಿಜಯ ಕುಮಾರ್, ದೊಡ್ಡಣ್ಣ ಬರೆಮೇಲು ಮೊದಲಾದವರು ಭಾಗವಹಿಸಿದ್ದರು.
ಸಹಭಾಗಿತ್ವ ನೀಡಿದವರು
ಎನ್.ಎಂ.ಸಿ. ಎನ್.ಎಸ್.ಎಸ್. ಘಟಕ, ಸರಕಾರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕ , ಸುದ್ದಿ ಬಿಡುಗಡೆ ಸುಳ್ಯ, ರಂಗಮಯೂರಿ ಸುಳ್ಯ, ಪ್ರೆಸ್ ಕ್ಲಬ್ ಸುಳ್ಯ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ, ಕ.ಸಾ.ಪ ಸುಳ್ಯ, ಯುವಜನ ಸಂಯುಕ್ತ ಮಂಡಳಿ , ತಾಲೂಕು ಮಹಿಳಾ ಒಕ್ಕೂಟ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ, ರೋಟರಿ ಕ್ಲಬ್ ಸುಳ್ಯ , ರೋಟರಿ ಸಿಟಿ ಸುಳ್ಯ , ಲಯನ್ಸ್ ಕ್ಲಬ್ ಸುಳ್ಯ, ಜೈಭಾರತ್ ಯುವಕ ಮಂಡಲ ಗಾಂಧಿನಗರ, ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್, ಸಹರಾ ಸ್ಪೋಟ್ಸ ಕ್ಲಬ್ ಗಾಂಧಿನಗರ , ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ಸುಳ್ಯ, ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಗಾಂಧಿ ರಾಯಲ್ಸ್, ಜೇಸಿಐ ಸುಳ್ಯ ಪಯಸ್ವಿನಿ, ಜೇಸಿಐ ಸುಳ್ಯ ಸಿಟಿ ಮತ್ತಿತರ ಸಂಘಸಂಸ್ಥೆಗಳು










