ʼಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸ ಜೀರ್ಣೋದ್ಧಾರ ಸಮಿತಿ ರಚಿಸಿʼ – ʼನಾಗನ ಗುಡಿ, ಅಯ್ಯಪ್ಪ ಗುಡಿ ಹಾಗೂ ನವಗ್ರಹ ಗುಡಿಗಳ ಧ್ವಂಸʼ – ವಿಹಿಂಪ ಸುದ್ದಿಗೋಷ್ಠಿ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಸೀಮೆಯ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕಡೆಗಣಿಸಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ. ಹೀಗಾಗಿ ಈಗಿರುವ ಜೀರ್ಣೋದ್ಧಾರ ಸಮಿತಿಯನ್ನು ವಿಸರ್ಜಿಸಿ ಭಕ್ತರ ಸಭೆ ನಡೆಸಿ, ಭಕ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡು ಭಕ್ತರ ಸಮ್ಮುಖದಲ್ಲಿ ನಿಯಮಾನುಸಾರ ಹೊಸ ಜೀರ್ಣೋದ್ಧಾರ ಸಮಿತಿ ರಚಿಸುವಂತೆ ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.


ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸಮಸ್ತ ಹಿಂದು ಸಮಾಜಕ್ಕೆ ಸೇರಿದ ದೇವಸ್ಥಾನವಾಗಿದೆ. ಇಡೀ ಹಿಂದೂ ಸಮಾಜವನ್ನು ಒಟ್ಟು ಸೇರಿಸಿಕೊಂಡು, ರಾಜಕೀಯ ರಹಿತವಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವಿಶ್ವಹಿಂದು ಪರಿಷತ್ ಪೂರ್ಣ ಸಹಕಾರ, ಬೆಂಬಲ ನೀಡಲಿದೆ. ಆದರೆ ಇಲ್ಲಿ ನಿಯಮಾನುಸಾರ ಭಕ್ತರ ಸಭೆ ನಡೆಸದೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ/ಅಭಿವೃದ್ಧಿ ಸಮಿತಿ ರಚಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.


ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ ದೇವಸ್ಥಾನದ ಮುಂಭಾಗದಲ್ಲಿದ್ದ ಹಲವಾರು ವರ್ಷಗಳಿಂದ ಆರಾಧನೆ ನಡೆಯುತ್ತಿದ್ದ ನಾಗನ ಗುಡಿ, ಅಯ್ಯಪ್ಪ ಗುಡಿ ಹಾಗೂ ನವಗ್ರಹ ಗುಡಿಗಳನ್ನು ಧ್ವಂಸ ಮಾಡಲಾಗಿದೆ. ಆಗಮ ಪಂಡಿತರ, ಇಲಾಖೆಯ ಇಂಜಿನಿಯರ್ ವರದಿ ಹಾಗೂ ಇಲಾಖೆಯ ಅನುಮತಿಯಿಲ್ಲದೇ ಈ ಗುಡಿಗಳನ್ನು ಏಕಾಏಕಿ ಧ್ವಂಸ ಮಾಡಿದ್ದಾರೆ. ಸೂಕ್ತ ಜಾಗದಲ್ಲಿ ಗುಡಿ ನಿರ್ಮಿಸಿದ ಬಳಿಕ ತೆರವುಗೊಳಿಸಬೇಕಾಗಿತ್ತು. ಇದ್ಯಾವುದು ಇಲ್ಲದೇ ತೆರವುಗೊಳಿಸಿದ್ದಾರೆ. ಅಯ್ಯಪ್ಪ ದೇವರನ್ನು ಖಾಸಗಿ ಶಾರದಾ ಭಜನಾ ಮಂದಿರದಲ್ಲಿ ಇರಿಸಲಾಗಿದ್ದು ಪ್ರತಿದಿನ ಮೂರು ಹೊತ್ತು ಪೂಜೆ, ನೈವೇದ್ಯ ಸಮರ್ಪಣೆ ಇಲ್ಲದಂತೆ ಮಾಡಿರುವುದು ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದೆ. ಅತೀ ಶೀಘ್ರವಾಗಿ ಆಗಮಾನುಸಾರ ಅಯ್ಯಪ್ಪ ದೇವರಿಗೆ ಗುಡಿ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಬೇಕು. ದೇವಸ್ಥಾನದ ಪ್ರತಿ ಕೆಲಸದಲ್ಲಿಯೂ ರಾಜಕೀಯ ಒತ್ತಡ ಎದ್ದು ಕಾಣುತ್ತಿದೆ. ವ್ಯವಸ್ಥಾಪನಾ ಸಮಿತಿಗೆ ಅಭಿವೃದ್ಧಿ ಸಂಪೂರ್ಣ ಹಕ್ಕಿದೆ. ಆದರೂ ಪ್ರತಿ ವಿಚಾರದಲ್ಲಿಯೂ ನಿಯಂತ್ರಣವಾಗುತ್ತಿರುವುದು ಎದ್ದು ಕಾಣುತ್ತದೆ ಎಂದು ಆರೋಪಿಸಿದರು.


ದೇವಸ್ಥಾನದ ಐತಿಹಾಸಿಕ ಪವಿತ್ರ ಪುಷ್ಕರಿಣಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳದೇ ಇದ್ದು ಅಪೂರ್ಣಗೊಂಡಿರುವ ಪುಷ್ಕರಿಣಿಯಲ್ಲಿ ಜಾತ್ರಾ ಸಮಯದಲ್ಲಿ ದೇವರಿಗೆ ಕೆರೆ ಉತ್ಸವವನ್ನು ನಡೆಸಿರುವುದು ಆಗಮ ಶಾಸ್ತ್ರಕ್ಕೆ ವಿರುದ್ಧವಾಗಿದೆ. ಈ ಕೆರೆಯನ್ನು ವ್ಯವಸ್ಥಾಪನಾ ಸಮಿತಿ ಪೂರ್ಣಗೊಳಿಸಬೇಕು. ದೇವಸ್ಥಾನದಲ್ಲಿ ಮೊದಲು ಆಗಬೇಕಾಗಿರುವ ಅವಶ್ಯಕ ಕಾರ್ಯಗಳನ್ನು, ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಆದ್ಯತೆಯಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು.


ಮಹಾಲಿಂಗೇಶ್ವರ ದೇವಸ್ಥಾನನಕ್ಕೆ ಈಗಾಗಲೇ ಹಲವಾರು ಕಡೆಗಳಿಂದ ರಸ್ತೆ ಸಂಪರ್ಕಗಳಿವೆ. ಸಂಪರ್ಕಕ್ಕೆ ಯಾವುದೇ ಸಮಸ್ಯೆಯಿಲ್ಲ. ಅನಿವಾರ್ಯವಾಗಿದ್ದರೆ ರಸ್ತೆ ಮಾಡಬೇಕು. ಹಾಗಿದ್ದರೂ ವ್ಯವಸ್ಥಾಪನಾ ಸಮಿತಿಯವರು ಶಾಸಕರ ಒತ್ತಡಕ್ಕೆ ಮಣಿದು ದೇವಸ್ಥಾನದ ಜಮೀನಿನಲ್ಲಿ ಭಕ್ತರ ಆಕ್ಷೇಪಕ್ಕೆ ವಿರುದ್ಧವಾಗಿ ಮಾತ್ರವಲ್ಲದೇ ಇಲಾಖೆಯ ಅನುಮತಿಯೂ ಇಲ್ಲದೆ ಸುಮಾರು 30 ಅಡಿ ಅಗಲದ, 1 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ದೇವಸ್ಥಾನದ ಜಮೀನಿನಲ್ಲಿ ಹೊಸದಾಗಿ ಸಾರ್ವಜನಿಕ ರಸ್ತೆ ನಿರ್ಮಾಣಗೊಂಡರೆ ಅದರಲ್ಲಿ ಸಂಚರಿಸುವ ಯಾರೋಬ್ಬರನ್ನೂ ಪ್ರಶ್ನಿಸುವಂತಿಲ್ಲ. ಈ ರಸ್ತೆಯು ರಸ್ತೆಯು ಕೆರೆಯ ಪಕ್ಕದಿಂದ ಹಾದುಹೋಗುತ್ತಿದ್ದು ಕೆರೆಯ ಪಾವಿತ್ರ್ಯತೆ, ದೇವಸ್ಥಾನದ ಹಿತಾಶಕ್ತಿ, ಪಾವಿತ್ರ್ಯತೆಗೆ ದಕ್ಕೆ ಉಂಟಾಗಲಿದ್ದು ಅದಕ್ಕೆ ವ್ಯವಸ್ಥಾಪನಾ ಸಮಿತಿಯವರು ಇದಕ್ಕೆ ಅವಕಾಶ ಮಾಡಿಕೊಡಬಾರದು. ಅಲ್ಲಿರುವ ಮನೆಗಳಿಗೆ ಮೂಲಭೂತ ಸೌಲಭ್ಯಗಳಿಗೆ ಪೂರಕವಾಗಿ ರಸ್ತೆ ನಿರ್ಮಿಸಿಕೊಡುವುದಕ್ಕೆ ನಮ್ಮ ಬೆಂಬಲವಿದೆ. ಇದಕ್ಕಾಗಿ ಒಂದು ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸಬೇಕಾದ ಆವಶ್ಯಕತೆಯಿಲ್ಲ. ಬಸ್ ನಿಲ್ದಾಣದ ಬಳಿಯಿಂದ ಕೇವಲ ನೂರು ಮೀಟರ್ ರಸ್ತೆ ನಿರ್ಮಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವಕಾಶದ್ದು ಅದನ್ನು ಮಾಡಬೇಕು. ದೇವಸ್ಥಾನದ ಜಾಗವನ್ನು ದೇವಸ್ಥಾನದ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು. ರಸ್ತೆ ನಿರ್ಮಾಣದ ಒಂದೇ ಉದ್ದೇಶ ಇಟ್ಟುಕೊಂಡಿ ಅಯ್ಯಪ್ಪ, ನವಗ್ರಹ ಹಾಗೂ ನಾಗನ ಗುಡಿಗಳನ್ನು ಧ್ವಂಸ ಮಾಡಲಾಗಿದೆ. ಸಭಾ ಭವನ ತೆರವುಗೊಳಿಸುವ ಯೋಜನೆಯಲ್ಲಿದ್ದಾರೆ. ಇರುವ ಕಟ್ಟಡಗಳನ್ನು ಉಳಿಸಿಕೊಂಡು ಅಭಿವೃದ್ದಿ ಮಾಡಬೇಕೇ ಹೊರತು ಇರುವ ಕಟ್ಟಡಗಳನ್ನು ತೆರವು ಮಾಡುವುದಲ್ಲ. ದೇವಸ್ಥಾನದ ಹಿತಾಶಕ್ತಿಗೆ ದಕ್ಕೆಯಾಗುವುದು, ಆಡಳಿತ ಮಂಡಳಿ ಭಕ್ತರ ಇಚ್ಚೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವುದು, ಭಕ್ತರ, ಧಾರ್ಮಿಕ ಭಾವನೆ, ನಂಬಿಕೆಗಳಿಗೆ ದಕ್ಕೆ ಉಂಟಾಗುವಂತ ಸಂದರ್ಭ ಬಂದಾಗ ಆಡಳಿತದ ಕಾರ್ಯವೈಖರಿ ವಿರುದ್ಧ ವಿಶ್ವಹಿಂದು ಪರಿಷತ್ ಧ್ವನಿಎತ್ತಲಿದೆ. ಅಗತ್ಯ ಬಿದ್ದರೆ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.


ವಿಶ್ವಹಿಂದು ಪರಿಷತ್ ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ ಮಾತನಾಡಿ ಭಕ್ತರ ಸಭೆಯೆಂದರೆ ಅವರಿಗೆ ಬೇಕಾದರನ್ನು ಮಾತ್ರ ಕರೆಯುವುದಲ್ಲ. ಹಿಂದಿನ ಸಮಿತಿಯವರನ್ನು ಸೇರಿಸಿಕೊಳ್ಳಬೇಕು. ಈಗಿನ ಜೀರ್ಣೋದ್ಧಾರ ಸಮಿತಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು, ಸದಸ್ಯರ‍್ಯಾರು ಇಲ್ಲ. ಅಲ್ಲದೆ ಕಳೆದ ಜೀರ್ಣೋದ್ಧಾರದ ಅವಧಿಯಲ್ಲಿ ಬಹಳಷ್ಟು ಸಂಘ ಸಂಸ್ಥೆಗಳ ಮೂಲಕ ಕರಸೇವೆಗಳು ನಡೆದಿದ್ದು, ಅಂತಹ ಮಾಡಿದ ಸಂಘಟನೆಯ ಮುಖಂಡರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಶ್ವಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ನಗರ ಸಂಚಾಲಕ ಚೇತನ್ ಹಾಗೂ ಸೇವಾ ಪ್ರಮುಖ್ ಹರೀಶ್ ದೋಳ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here