ಅ.8ರಂದು ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಸರಾಫ್ ಮುಳಿಯ ಶ್ಯಾಮ ಭಟ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿ ನಮನ

0

ಪುತ್ತೂರು: ಕನ್ನಡ ಸಾಹಿತ್ಯ, ನಾಡು-ನುಡಿ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ವಿದ್ವಾಂಸ ದಿ.ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ಹಾಗೂ ಪ್ರಸಿದ್ಧ ಉದ್ಯಮಿ, ಸಾಹಿತ್ಯ-ಸಾಂಸ್ಕೃತಿಕ ಪೋಷಕ ದಿ. ಸರಾಫ್ ಮುಳಿಯ ಶ್ಯಾಮ ಭಟ್ ಅವರ ಅಗಲಿಕೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಟೋಬರ್ 8ರಂದು ಸಂಜೆ 4:30ಕ್ಕೆ ಪುತ್ತೂರಿನ ಅನುರಾಗ ವಠಾರದಲ್ಲಿ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಾ ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದು, ಮೂರು ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆಯಾಗಿದ್ದರು. ಹೊರನಾಡು ಚೆನೈನಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪುತ್ತೂರು ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ನೀಡಿದ ಮಾರ್ಗದರ್ಶನ ಹಾಗೂ ಸಾಹಿತ್ಯಿಕ ಕೊಡುಗೆಗಳು ಪುತ್ತೂರಿನ ಸಾಹಿತ್ಯ ವಲಯದಲ್ಲಿ ಸದಾ ಸ್ಮರಣೀಯ. ಅವರಿಗೆ ವಿವೇಕಾನಂದ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ್ ಅವರು ನುಡಿ ನಮನ ಸಲ್ಲಿಸಲಿದ್ದಾರೆ.

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮಾಲೀಕರಾಗಿದ್ದ ಸರಾಫ್ ಮುಳಿಯ ಶ್ಯಾಮ ಭಟ್ ಅವರು ಕರಾವಳಿಯ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಉದ್ಯಮ ಕ್ಷೇತ್ರದ ಸಾಧನೆಯ ಜೊತೆಗೆ ನಾಡು-ನುಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ- ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೂ ಅವರು ನಿರಂತರ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದ್ದರು. ಸ್ಥಳೀಯ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸದಾ ಬೆಂಬಲ ನೀಡುತ್ತಿದ್ದ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಬಿ ಐತಪ್ಪ ನಾಯ್ಕ್ ಅವರು ನುಡಿ ನಮನ ಸಲ್ಲಿಸಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಗಲಿದ ಈ ಮಹನೀಯರಿಗೆ ಗೌರವ ಸಲ್ಲಿಸುವಂತೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here