







ಪ್ರತಿ ವರ್ಷ ಅ.7ರಂದು ಪ್ರಪಂಚದಾದ್ಯಂತ ‘ವಿಶ್ವ ಹತ್ತಿ ದಿನ’ ವನ್ನು ಆಚರಿಸಲಾಗುತ್ತದೆ. ಹತ್ತಿಯು ಕೇವಲ ಒಂದು ಬೆಳೆಯಲ್ಲ. ಅದು ಜಾಗತಿಕ ಮಟ್ಟದಲ್ಲಿ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ, ವಿಶ್ವದ ಅರ್ಥವ್ಯವಸ್ಥೆಗೆ ಬಲ ನೀಡುತ್ತಿರುವ ಶ್ರೇಷ್ಠ ನೈಸರ್ಗಿಕ ನಾರು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ದಿನನಿತ್ಯದ ಉಡುಪಿನಿಂದ ಹಿಡಿದು ಪ್ರಮುಖ ಕೈಗಾರಿಕೆಗಳವರೆಗೆ ಹತ್ತಿಯ ಪಾತ್ರ ಮಹತ್ವದ್ದಾಗಿದೆ.


2019ರಲ್ಲಿ ‘ಕಾಟನ್-4’ ಎಂದೇ ಕರೆಯಲ್ಪಡುವ ಪಶ್ಚಿಮ ಆಫ್ರಿಕಾದ ಬೆನಿನ್, ಬುರ್ಕಿನಾ ಫಾಸೊ, ಚಾಡ್ ಮತ್ತು ಮಾಲಿ ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಗೆ ಈ ದಿನಾಚರಣೆ bagge ಪ್ರಸ್ತಾಪಿಸಿದವು. ವಿಶ್ವಸಂಸ್ಥೆಯು ಅಧಿಕೃತವಾಗಿ ಅ.7ರಂದು ವಿಶ್ವ ಹತ್ತಿ ದಿನವನ್ನಾಗಿ ಘೋಷಿಸಿತು.



ಹತ್ತಿ ಬೆಳೆಯುವ ರೈತರ ಶ್ರಮವನ್ನು ಗುರುತಿಸುವುದು ಮತ್ತು ಗೌರವಿಸುವುದು. ಹತ್ತಿ ನಾರಿನ ನೈಸರ್ಗಿಕ, ಪರಿಸರ ಸ್ನೇಹಿ ಮತ್ತು ಬಾಳಿಕೆ ಬರುವ ಗುಣಗಳ ಬಗ್ಗೆ ಜಾಗೃತಿ ಮೂಡಿಸುವುದು. ಸುಸ್ಥಿರ ಹಾಗೂ ಪರಿಸರ ಸ್ನೇಹಿ ಹತ್ತಿ ಕೃಷಿಗೆ ಪ್ರೋತ್ಸಾಹ ನೀಡುವುದು. ಇದರ ಮುಖ್ಯ ಉದ್ದೇಶ.
ಭಾರತದಲ್ಲಿ ಹತ್ತಿಗೆ ಅತ್ಯಂತ ಸುದೀರ್ಘ ಹಾಗೂ ಶ್ರೀಮಂತ ಇತಿಹಾಸವಿದೆ. ಹತ್ತಿಯನ್ನು ಭಾರತದಲ್ಲಿ ಬಿಳಿ ಚಿನ್ನ ಎಂದೇ ಕರೆಯಲಾಗುತ್ತದೆ. ಸುಮಾರು 5000 ವರ್ಷಗಳಿಗಿಂತಲೂ ಮುಂಚೆಯೇ ಭಾರತದಲ್ಲಿ ಹತ್ತಿ ಬೆಳೆದು, ಅದರಿಂದ ನೂಲು ತೆಗೆದು ಬಟ್ಟೆ ತಯಾರಿಸಲಾಗುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. “ಕಸ್ತೂರಿ ಕಾಟನ್” ಎಂದೇ ಹೆಸರುವಾಸಿಯಾದ ಅತ್ಯುತ್ಕೃಷ್ಟ ಗುಣಮಟ್ಟದ ಹತ್ತಿಯನ್ನು ಭಾರತ ಉತ್ಪಾದಿಸುತ್ತದೆ. ಪ್ರಸ್ತುತ ಭಾರತವು ವಿಶ್ವದ ಅತಿ ದೊಡ್ಡ ಹತ್ತಿ ಉತ್ಪಾದಕ ಹಾಗೂ ಬಳಕೆದಾರ ದೇಶಗಳಲ್ಲಿ ಒಂದಾಗಿದೆ. ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳು ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ.
ಹತ್ತಿ ಬೆಳೆಯು ಭಾರತೀಯ ಕೃಷಿ ಮತ್ತು ಉದ್ಯಮ ರಂಗಕ್ಕೆ ಬೆನ್ನೆಲುಬಾಗಿದೆ. ದೇಶದ ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳು ಹತ್ತಿ ಕೃಷಿಯನ್ನೇ ನೆಚ್ಚಿಕೊಂಡಿವೆ. ಭಾರತದ ಬೃಹತ್ ಜವಳಿ ಕೈಗಾರಿಕೆಗೆ ಬೇಕಾಗುವ ಪ್ರಮುಖ ಕಚ್ಚಾವಸ್ತು ಹತ್ತಿ. ನೂಲುವಿಕೆ, ನೇಯ್ಗೆ, ಬಟ್ಟೆ ಹೊಲಿಯುವಿಕೆ ಮತ್ತು ರಫ್ತು ಕ್ಷೇತ್ರಗಳಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ. ಹತ್ತಿ ಬೀಜಗಳಿಂದ ಖಾದ್ಯ ತೈಲ ಮತ್ತು ಹಿಂಡಿಯನ್ನು ತಯಾರಿಸಲಾಗುತ್ತದೆ.
ಇಂದಿನ ಪ್ಲಾಸ್ಟಿಕ್ ಹಾಗೂ ಕೃತಕ ನಾರುಗಳ ಯುಗದಲ್ಲಿ, ಪರಿಸರಕ್ಕೆ ಯಾವುದೇ ಹಾನಿ ಮಾಡದ, ಸುಲಭವಾಗಿ ಮಣ್ಣಿನಲ್ಲಿ ಕರಗುವ ಹತ್ತಿ ಬಟ್ಟೆಗಳ ಬಳಕೆ ಹೆಚ್ಚಾಗಬೇಕಿದೆ. ಹತ್ತಿ ಕೃಷಿಯಲ್ಲಿ ನೀರಿನ ಸೂಕ್ತ ಬಳಕೆ, ಜೈವಿಕ ಗೊಬ್ಬರಗಳ ಬಳಕೆ ಮತ್ತು ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ವಿಶ್ವ ಹತ್ತಿ ದಿನವು ಕೇವಲ ಹತ್ತಿ ನಾರಿನ ಸಂಭ್ರಮಾಚರಣೆಯಲ್ಲ, ಬದಲಿಗೆ ಬಿಸಿಲು, ಮಳೆ ಎನ್ನದೇ ಗದ್ದೆಯಲ್ಲಿ ಬೆವರು ಹರಿಸಿ ‘ಬಿಳಿ ಚಿನ್ನ’ವನ್ನು ಬೆಳೆಯುವ ಭಾರತೀಯ ರೈತನ ಶ್ರಮಕ್ಕೆ ಸಲ್ಲಿಸುವ ಗೌರವವಾಗಿದೆ. ನೈಸರ್ಗಿಕ ಹಾಗೂ ಸುಸ್ಥಿರ ಉಡುಪುಗಳನ್ನು ಬಳಸುವ ಮೂಲಕ ಹತ್ತಿ ಕೃಷಿ ಮತ್ತು ನಮ್ಮ ದೇಶದ ಜವಳಿ ರಂಗವನ್ನು ಪ್ರೋತ್ಸಾಹಿಸ ಬೇಕಾಗಿದೆ.










