









ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2025-26ನೇ ಸಾಲಿನಲ್ಲಿ ನಿವೃತ್ತರಾದ ಸುಮಾರು 24 ಮಂದಿ ಶಿಕ್ಷಕರಿಗೆ ಭಾರತೀಯ ಜೀವ ವಿಮಾ ನಿಗಮ (LIC), ಪುತ್ತೂರು ಶಾಖೆಯ ಉನ್ನತಿ ತಂಡದ ವತಿಯಿಂದ ಸನ್ಮಾನ ಕಾರ್ಯಕ್ರಮ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.



ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಕಡಬ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ರುತ್ ಕ್ಯಾಸ್ಟಲಿನೋ ಮಾತನಾಡಿ ನಹಿ ಜ್ಞಾನೇನ ಸದೃಶಮ್ ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಹಲವು ಮಕ್ಕಳಿಗೆ ಹಲವು ವರ್ಷಗಳ ಕಾಲ ಜ್ಞಾನದ ಧಾರೆ ಎರೆದು, ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿ ನಿವೃತ್ತರಾದ ಶಿಕ್ಷಕರನ್ನು(LIC )ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ಭಾರತೀಯ ಜೀವ ವಿಮಾ ನಿಗಮದ ಪುತ್ತೂರು ಶಾಖೆಯ ಉಪಪ್ರಬಂಧಕ ಕೃಪಾಲ್ ಬಿ. ಹೆಚ್. ನಿವೃತ್ತಿಯ ನಂತರದ ಜೀವನದಲ್ಲಿ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಜೀವನಪರ್ಯಂತ ಪಿಂಚಣಿ ದೊರೆಯುವಂತಹ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕ, ಅಂಕಣಕಾರ ಹಾಗೂ ಕವಿ ಟಿ. ನಾರಾಯಣ ಭಟ್ಟ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಜನರ ಬದುಕಿಗೆ ಭದ್ರತೆ ಒದಗಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು. (LIC)ಅಡಿಯಲ್ಲಿ ತೊಡಗಿಸುವ ಹಣವು ವೈಯಕ್ತಿಕ ಭದ್ರತೆಯ ಜೊತೆಗೆ ದೇಶದ ಆರ್ಥಿಕ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ನಿವೃತ್ತಿಯ ಸಂದರ್ಭದಲ್ಲಿ ದೊರೆಯುವ ಹಣವನ್ನು ಸೂಕ್ತವಾಗಿ ಆಲೋಚಿಸಿ, ಎಲ್ಲಿ, ಹೇಗೆ ಹಾಗೂ ಯಾರ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಒಳಿತು ಎಂಬುದರ ಕುರಿತು ಅವರು ಮಾರ್ಗದರ್ಶನ ನೀಡಿದರು. ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ (LIC)ಇಂದು ವಿಶ್ರಾಂತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸನ್ಮಾನಿತರ ಪರವಾಗಿ ಶ್ರೀಧರ ಭಟ್ ಮಾತನಾಡಿ (LIC) ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸದಾಯಕ ವಿಚಾರ. ಪ್ರತಿವರ್ಷ ವಿಶ್ರಾಂತ ಶಿಕ್ಷಕರನ್ನು ಒಂದೆಡೆ ಸೇರಿಸಿ ಗೌರವಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಸೀತಾರಾಮ ಕೆ.ಜಿ. ಮಾತನಾಡಿ (LIC) ಪುತ್ತೂರು ಶಾಖೆಯ ವತಿಯಿಂದ ವಿಶ್ರಾಂತ ಶಿಕ್ಷಕರಿಗೆ ನಡೆದ ಗೌರವಾರ್ಪಣೆಯು ಶಿಷ್ಟಾಚಾರಬದ್ಧವಾಗಿ, ಕ್ರಮಬದ್ಧವಾಗಿ, ಸ್ಮರಣೀಯ ಹಾಗೂ ಸರಳವಾದ ಆಚರಣೆಯಾಗಿ ಮೂಡಿಬಂದಿದೆ ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣರವರು ಪ್ರಾಸ್ತಾವಿಕ ಮಾತನಾಡಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅವರನ್ನು ಗುರಿ ತಲುಪಿಸುವ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಿದ ಶಿಕ್ಷಕರು ಇದೀಗ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಅಂತಹ ಮಹನೀಯರನ್ನು ಗೌರವಿಸುವ ಅವಕಾಶ ದೊರೆತಿರುವುದು ನಮ್ಮ ಸುಯೋಗ ಎಂದು ಹೇಳಿದರು. ಜೀವ ವಿಮಾ ಪ್ರತಿನಿಧಿ ನಾರಾಯಣ ಗೌಡ ಸ್ವಾಗತಿಸಿದರು. ಪ್ರತಿನಿಧಿ ರಮೇಶ್ ರಾವ್ ವಂದಿಸಿದರು. ಮಾಸ್ಟರ್ ಶ್ರೀಹರ್ಷ ಪ್ರಾರ್ಥನೆ ನೆರವೇರಿಸಿದರು. ನಿವೃತ್ತ ಮುಖ್ಯಶಿಕ್ಷಕಿ, ಪ್ರಸ್ತುತ (LIC) ಪ್ರತಿನಿಧಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ಯಶೋದಾ ಕೆ.ಎಸ್. ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಕೆ.ಎಸ್. ಹಾಗೂ ನಿವೃತ್ತ ಮುಖ್ಯಶಿಕ್ಷಕಿ ದೇವಕಿ ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರತಿನಿಧಿಗಳಾದ ಜ್ಯೋತ್ನಾ ವಿದ್ಯಾ, ಪ್ರಸಾದ ಬೈಪಡಿತ್ತಾಯ, ಸಂಧ್ಯಾ ಬಿ.ಜಿ., ರಾಘವೇಂದ್ರ, ಆನಂದ ಇ., ಗೀತಾ ಸೇರಿದಂತೆ ಇತರ ಪ್ರತಿನಿಧಿಗಳು ಸಹಕರಿಸಿದರು.
ವಿಶ್ರಾಂತ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಗೌರವಾರ್ಪಣೆ
ಪುತ್ತೂರು ಹಾಗೂ ಕಡಬ ತಾಲೂಕಿನ ವಿಶ್ರಾಂತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾದ ಶ್ರೀಧರ ಭಟ್, ಸೀತಾರಾಮ ಭಟ್, ಗೀತಾ ಕುಮಾರಿ, ಕಾರ್ತ್ಯಾಯಿನಿ, ಕೆ. ಸೀತಾರಾಮ ಕೆ.ಜಿ. ದಾಮೋದರ, ಕೆ. ರಮೇಶ್ ಮಯ್ಯ, ಬಿ.ಗ್ರೆಟ್ಟಾ ಮಸ್ಕರೇನಸ್, ಬಾಲಕೃಷ್ಣ, ಮೋನಪ್ಪ ಎಂ.ನಾರಾಯಣ ನಾಯ್ಕ, ವಸಂತಿ ಬಿ.ಎಂ. ವಸಂತ ಮೂಲ್ಯ, ಗಂಗಾಧರ ನಾಯ್ಕ, ಶಿವಾನಂದಪ್ಪ, ಟಿ. ಜಯಂತಿ ಪಿ.ಎನ್. ನರೇಂದ್ರ ಭಟ್, ರಾಜಶೇಖರಪ್ಪ ಆರ್. ತುಳಸಿ ಹೆಚ್. ಶಕುಂತಳಾ ಕೆ. ರಾಮಚಂದ್ರಪ್ಪ, ಕೆ.ಸತೀಶ್ ಭಟ್, ಪದ್ಮಯ್ಯ ಗೌಡ ಹಾಗೂ ಎ. ಲಕ್ಷ್ಮಣ ಗೌಡರವರನ್ನು ಸನ್ಮಾನಿಸಿ ಗೌರವಿಸಲಾಯಿತು.










