







ಎರಡು ತಿಂಗಳ ರಜೆಯ ನಂತರ ಮತ್ತೆ ಕಾಲೇಜಿಗೆ ಹೋಗಬೇಕು ಎಂದು ಕೇಳಿದಾಗ, ಇಲ್ಲೇ ಮನೆಯಲ್ಲಿ ಆರಾಮವಾಗಿ ಇರಬಹುದಲ್ಲ.. ಎಂಬ ಒಂದು ಸಣ್ಣ ಆಲೋಚನೆ ಮನಸ್ಸಿನಲ್ಲಿ ಮೂಡಿದ್ದು ನಿಜ. ಆದರೆ ವಾಸ್ತವ ಅಷ್ಟು ಸರಳವಾಗಿರಲಿಲ್ಲ. ನನ್ನ ಜೀವನದಲ್ಲಿಯೇ ಮತ್ತೊಂದು ಹೊಸ ಅಧ್ಯಾಯದ ಆರಂಭವಾಗಿತ್ತು.
ಅಂದು ಬೆಳಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮುಂದೆ ನಿಂತು, ನನ್ನ ಈ ಹೊಸ ಜೀವನದ ಅಧ್ಯಯನದ ಪಯಣದಲ್ಲಿ ನಿನ್ನ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದು ಮನಸಾರೆ ಪ್ರಾರ್ಥಿಸುತ್ತಿದ್ದಾಗ, ಕೆಳಗಿನಿಂದ ನನ್ನ ಗೆಳತಿಯ ಧ್ವನಿ ಕೇಳಿಸಿತು.
ಬಾ… ಮೊದಲೇ ಹೊತ್ತಾಗಿದೆ!ಎಂದು ಅವಳು ಕರೆದಳು.
ಆಯ್ತು, ಬರುತ್ತೀನಿ! ಎಂದು ಹೇಳುತ್ತಾ, ಹೊಸ ಕನಸುಗಳು ಮತ್ತು ಹೊಸ ನಿರೀಕ್ಷೆಗಳನ್ನು ಹೊತ್ತು ಕಾಲೇಜಿನ ಕಡೆಗೆ ಹೆಜ್ಜೆ ಹಾಕಿದೆ.
ಅಂದಹಾಗೆ, ನಾನು ಕಲಿಯುತ್ತಿರುವ ಕಾಲೇಜು ಎಸ್.ಡಿ.ಎಂ.ಕಾಲೇಜು, ಉಜಿರೆ. ಉಜಿರೆ ಎಂಬ ಊರು ನನಗೆ ಒಂದು ರೀತಿಯಲ್ಲಿ ವಿಶೇಷವೂ, ವಿಚಿತ್ರವೂ ಗೊತ್ತಿಲ್ಲಾ ಆದ್ರೆ ಇಲ್ಲಿ ಒಂದೋ ಜೋರಾದ ಬಿಸಿಲು, ಇಲ್ಲವೇ ಜೋರಾದ ಮಳೆ ಆದರೆ ಚಳಿಗಾಲ ಎಂಬ ಪದಕ್ಕೆ ಮಾತ್ರ ಇಲ್ಲಿ ಅಷ್ಟೊಂದು ಜಾಗವಿಲ್ಲ ಅನಿಸುತ್ತದೆ.
ನನ್ನ ಮೊದಲ ಕಾಲೇಜು ದಿನವೂ ಅದಕ್ಕೆ ಹೊರತಾಗಿರಲಿಲ್ಲ. ವರುಣದೇವರ ಆಶೀರ್ವಾದದೊಂದಿಗೆ, ಗೆಳತಿಯರ ಜೊತೆ ಸ್ವಲ್ಪ ಒದ್ದೆಯಾಗುತ್ತಾ, ಯುಜಿ ಕಾಲೇಜಿನಲ್ಲಿರುವ ಇಂದ್ರಪ್ರಸ್ಥ ಸಭಾಂಗಣದ ಕಡೆಗೆ ನಮ್ಮ ಹೆಜ್ಜೆಗಳು ಸಾಗಿದವು.
ಅಲ್ಲಿ ಕಾಲಿಟ್ಟ ಕ್ಷಣವೇ ನನ್ನ ಕಣ್ಣಿಗೆ ಬಿದ್ದದ್ದು ಹೊಸ ವಿದ್ಯಾರ್ಥಿಗಳ ಮುಖದಲ್ಲಿದ್ದ ಆತ್ಮವಿಶ್ವಾಸ. ಅವರ ಪಿಳಿಪಿಳಿ ಕಣ್ಣುಗಳಲ್ಲಿ ಹೊಸ ಕನಸುಗಳಿದ್ದವು. ಅಕ್ಕಪಕ್ಕ ನೋಡಿದಾಗ, ಅಪರಿಚಿತರ ಮುಖದಲ್ಲೂ ಕಾಣುತ್ತಿದ್ದ ಆ ಸಣ್ಣ ಮಂದಹಾಸವೇ ನಮ್ಮ ನಡುವಿನ ಮೊದಲ ಪರಿಚಯಕ್ಕೆ ಕಾರಣವಾಯಿತು. ಒಂದು ನಗು ಎಷ್ಟು ಸುಂದರವಾದ ಸಂಬಂಧಕ್ಕೆ ಆರಂಭವಾಗಬಹುದು ಎಂಬುದನ್ನು ಅಂದು ಅರಿತುಕೊಂಡೆ.


ಹೀಗೆ ಸುಂದರವಾಗಿ ಕಾರ್ಯಕ್ರಮ ಮುಗಿಸಿ ಪಿ.ಜಿ. ಕಾಲೇಜಿನ ಕಡೆಗೆ ಹೆಜ್ಜೆ ಹಾಕಿದಾಗ, ಅಲ್ಲಿ ನಮಗಾಗಿ ಮತ್ತೊಂದು ಅದ್ಭುತ ಸ್ವಾಗತ ಕಾದಿತ್ತು.
ದೊಡ್ಡದಾದ ಸುಂದರ ದ್ವಾರದಂತೆ ಅಲಂಕರಿಸಿದ್ದ ಪ್ರವೇಶದ್ವಾರ, ಕೆಂಪು ಬಣ್ಣದ ಬಟ್ಟೆಯ ಮೇಲೆ ಹೂಗಳ ರಾಶಿ… ಅದರ ಪಕ್ಕದಲ್ಲಿ ನಿಂತಿದ್ದ ನಮ್ಮ ಸೀನಿಯರ್ಸ್ಗಳ ಮುಖದಲ್ಲಿನ ಆತ್ಮೀಯ ಸ್ವಾಗತದ ನಗು ಇವೆಲ್ಲವೂ ಮನಸ್ಸಿಗೆ ಮತ್ತಷ್ಟು ಸಂತೋಷವನ್ನು ನೀಡಿತು.
ಮುಂದಕ್ಕೆ ಹೆಜ್ಜೆ ಹಾಕುತ್ತಾ, ಕಾಲೇಜು ಇಷ್ಟೊಂದು ದೊಡ್ಡದಾ? ಎಂದು ತಲೆಯೆತ್ತಿ ನೋಡುತ್ತಿದ್ದಾಗಲೇ, ಮೇಲಿನಿಂದ ಗುಲಾಬಿ ಹೂಗಳ ವರ್ಷಧಾರೆ ನಮ್ಮನ್ನು ಆವರಿಸಿತು. ಆ ಕ್ಷಣದಲ್ಲಿ ನನಗೆ ನಿಜವಾಗಿಯೂ ಇದು ಕೇವಲ ಸ್ವಾಗತವಲ್ಲ, ಸಾಕ್ಷಾತ್ ದೇವರ ಅನುಗ್ರಹವೇ ನಮ್ಮ ಮೇಲೆ ಸುರಿಯುತ್ತಿದೆ ಎಂಬ ಭಾವನೆ ಮೂಡಿತು.
ಮೊದಲ ದಿನವೇ ಕಾಲೇಜು ನಮಗೆ ಇಂತಹ ಅದ್ಭುತವಾದ ಅಚ್ಚರಿಯನ್ನು ನೀಡಿತ್ತು.
ನಂತರ ಕ್ಲಾಸ್ರೂಮ್ನಲ್ಲಿ ಕುಳಿತು ಅಕ್ಕಪಕ್ಕ ನೋಡಿದಾಗ ಮತ್ತೊಂದು ವಿಶೇಷ ಅನುಭವವಾಯಿತು. ನಮ್ಮ ಸುತ್ತಲೂ ಇದ್ದ ಪ್ರತಿಯೊಬ್ಬರೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದವರು. ಬೇರೆ ಬೇರೆ ಊರುಗಳು, ಬೇರೆ ಬೇರೆ ಭಾಷಾ ಶೈಲಿಗಳು, ಬೇರೆ ಬೇರೆ ಸಂಸ್ಕೃತಿಗಳು, ಆದರೆ ಒಂದೇ ಕನಸು—ಹೊಸ ಜ್ಞಾನವನ್ನು ಪಡೆಯುವುದು ಮತ್ತು ಹೊಸ ಬದುಕನ್ನು ಕಟ್ಟಿಕೊಳ್ಳುವುದು.ಆ ಕ್ಷಣದಲ್ಲಿ ನಮ್ಮ ತರಗತಿಯೇ ಒಂದು ಚಿಕ್ಕ ಮಿನಿ ಕರ್ನಾಟಕದಂತೆ ಭಾಸವಾಯಿತು.
ಹೀಗೆ, ಭಯ, ಕುತೂಹಲ, ಸಂತೋಷ, ಅಪರಿಚಿತ ಮುಖಗಳು, ಹೊಸ ಸ್ನೇಹಗಳು ಮತ್ತು ಸಾವಿರಾರು ಕನಸುಗಳ ನಡುವೆ ನನ್ನ ಕಾಲೇಜಿನ ಮೊದಲ ದಿನ ಆರಂಭವಾಯಿತು.
ಅಂದು ಕಾಲೇಜಿಗೆ ನಾನು ಕೇವಲ ಹೊಸ ವಿದ್ಯಾರ್ಥಿಯಾಗಿ ಕಾಲಿಟ್ಟಿದ್ದೆ. ಆದರೆ ಆ ದಿನದ ಅಂತ್ಯಕ್ಕೆ, ನನ್ನ ಜೀವನದ ಹೊಸ ಅಧ್ಯಾಯದ ಮೊದಲ ಪುಟವನ್ನು ಬರೆದಿದ್ದೆ.




SDM PG Center ujire










