







ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತಿನ 2026-27ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆ ಹಾಗೂ ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ನಡೆದ ವಿವಿಧ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಅ.8ರಂದು ಬೆಳಗ್ಗೆ ಶಿರಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.


ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು ಇಲ್ಲಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಅಧ್ಯಕ್ಷತೆ ವಹಿಸಿದ್ದರು. ಐಇಸಿ ತಾಲೂಕು ಸಂಯೋಜಕಿ ನಮಿತಾ ಅವರು, ವಿಬಿ ಜಿ ರಾಮ್ಜಿ ಯೋಜನೆಯ ಉದ್ದೇಶ, ಯೋಜನೆಯ ಅನುಷ್ಠಾನದ ಕುರಿತಂತೆ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕ ಮನೋಜ್ಕುಮಾರ್ ಅವರು ಯೋಜನೆ ಕುರಿತು ಮಾಹಿತಿ ನೀಡಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಜಯಮಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೆಚ್ಚವಾಗಿರುವ ಅನುದಾನದ ವಿವರ ನೀಡಿದರು.



ವಿನಾಯಿತಿಗೆ ಮನವಿ;
ವಿಬಿ ಜಿ ರಾಮ್ಜಿ ಯೋಜನೆಯಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಫಲಾನುಭವಿಯು ಎನ್ಎಂಎಂಎಸ್ ಆಪ್ ಮೂಲಕ ಫೇಸ್ ಸ್ಕ್ಯಾನ್ ಮಾಡಿ ಹಾಜರಾತಿ ಹಾಕಬೇಕಾಗುತ್ತದೆ. ಆದರೆ ಶಿರಾಡಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಇದು ಕಷ್ಟವಾಗಿದೆ. ಆದ್ದರಿಂದ ಈ ರೀತಿ ಹಾಜರಾತಿ ಮಾಡುವುದರಿಂದ ವಿನಾಯಿತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು. ಉಳಿದಂತೆ ವಿವಿಧ ವಿಚಾರಗಳನ್ನು ಫಲಾನುಭವಿಗಳು ಪ್ರಸ್ತಾಪಿಸಿದರು.
ಆಡಳಿತಾಧಿಕಾರಿ ಚೆಲುವರಂಗಪ್ಪ ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಸವಿತಾ,ಪ್ರಣಮ್ಯ, ಪ್ರತಿಭಾ, ಗ್ರಾ.ಪಂ.ಸಿಬ್ಬಂದಿಗಳಾದ ಏಲಿಯಾಸ್ ಕೆ.ಸಿ., ಸ್ಮಿತಾಮನೋಜ್, ರಮ್ಯ, ವಿಜಯ ಅವರು ಸಹಕರಿಸಿದರು.
40.71 ಲಕ್ಷ ರೂ.ಖರ್ಚು;
ಶಿರಾಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಎ.1,2025ರಿಂದ ಮಾ.31, 2026ರ ತನಕ 86 ಕಾಮಗಾರಿ ನಿರ್ವಹಿಸಲಾಗಿದ್ದು ಇದಕ್ಕೆ 36,78,830 ರೂ.ಕೂಲಿ ಹಾಗೂ 3,92,915 ರೂ.ಸಾಮಾಗ್ರಿ ಮೊತ್ತ ಸೇರಿ ಒಟ್ಟು 40,71,745 ರೂ.ಪಾವತಿಯಾಗಿದೆ. 177 ಕುಟುಂಬಗಳ 323 ಮಂದಿ ಕೆಲಸ ನಿರ್ವಹಿಸಿದ್ದು 9945 ಮಾನವ ದಿನ ಸೃಜನೆಯಾಗಿದೆ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಅದರಂತೆ ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ 44 ಕಾಮಗಾರಿಗಳಿಗೆ 16,10,556 ಹಾಗೂ ರಾಜ್ಯ ಹಣಕಾಸು ಆಯೋಗದದಲ್ಲಿ ತಾ.ಪಂ.ನ 2 ಹಾಗೂ ಜಿ.ಪಂ.ನ 1 ಕಾಮಗಾರಿ ನಡೆದಿದ್ದು 4,38,967 ರೂ.ಖರ್ಚು ಆಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.










