







ಉಪ್ಪಿನಂಗಡಿ: ಸರಕಾರದ ವೆಚ್ಚ ಕಡಿಮೆ ಮಾಡುವ ಸಲುವಾಗಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಬದಲು ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುತ್ತಿದ್ದು, ಆದರೆ ಕಳೆದ ಐದು ತಿಂಗಳಿಂದ ಸರಕಾರ ಇವರಿಗೆ ಸಂಬಳ ನೀಡದ್ದರಿಂದ ಇವರ ಬದುಕು ಬಡವಾಗುಂತಾಗಿದೆ.


ಖಾಯಂ ಉಪನ್ಯಾಸಕರು ಲಕ್ಷಕ್ಕೆ ಸನಿಹದ ಸಂಬಳ ಪಡೆಯುತ್ತಿದ್ದರೆ, ಅತಿಥಿ ಉಪನ್ಯಾಸಕರು ಪ್ರಸಕ್ತ ಹದಿನಾಲ್ಕು ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಖಾಯಂ ಉಪನ್ಯಾಸಕರಿಗೆ ಸರ್ವ ಸವಲತ್ತುಗಳು ಲಭಿಸಿ ಜೀವನ ಭದ್ರತೆ ಒದಗುತ್ತಿದ್ದರೆ, ಅತಿಥಿ ಉಪನ್ಯಾಕರು ದೊರೆಯುವ ಮಾಸಿಕ ಸಂಭಾವನೆಯನ್ನೇ ಅವಲಂಭಿಸಿ ಬದುಕು ನಡೆಸಬೇಕಾಗುತ್ತದೆ. ಮಾತ್ರವಲ್ಲದೆ ಕಾಲೇಜಿನ ಎಲ್ಲಾ ಕೆಲಸ ಕಾರ್ಯಗಳನ್ನೂ ನಿರ್ವಹಿಸಿಕೊಂಡು ಕನಿಷ್ಠ ಸಂಭಾವನೆಗೆ ಗರಿಷ್ಥ ಕೆಲಸ ಮಾಡುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ಕೆಲಸ ಎಷ್ಟೂ ಮಾಡಿದರೂ ಚಿಂತಿಲ್ಲ. ಮಾಡಿದ ಕೆಲಸಕ್ಕೆ ಕೊಡುತ್ತೇವೆ ಎಂದ ಸಂಭಾವನೆಯನ್ನು ಕೊಡದೆ ಐದಾರು ತಿಂಗಳು ಸರಕಾರ ಮೌನವಹಿಸಿದರೆ , ಈ ಉಪನ್ಯಾಸಕರು ಗಾಳಿಯನ್ನು ಸೇವಿಸಿ ಬದುಕಲು ಸಾಧ್ಯವೇ ? ಎಂಬ ಪ್ರಶ್ನೆ ಮೂಡುವಂತಾಗಿದೆ.



ಖಾಯಂ ಉಪನ್ಯಾಸಕರಿಗೆ ಸಮಾನವಾಗಿ ಬೋಧನಾ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು, ಬೋಧನಾ ಕಾರ್ಯದ ಜೊತೆಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳ ಹಾಜರಾತಿ ಮಾಹಿತಿಯನ್ನು ನಿತ್ಯ ನಿರಂತರ ಆಪ್ ನಲ್ಲಿ ದಾಖಲಿಸುವುದು, ವಿದ್ಯಾರ್ಥಿಗಳ ದಾಖಲೆಯನ್ನು ದಾಖಲಿಸುವುದು, ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ ಸೇರಿದಂತೆ ಹೆಚ್ಚುವರಿ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲದೆ ಸರಕಾರ ಆಪೇಕ್ಷಿಸಿದಂತೆ ಸಿಇಟಿ ಹಾಗೂ ನೀಟ್, ಮತ್ತು ಜೆಇಇ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಲು ಅವಧಿಗಿಂತ ಮುಂಚಿತವಾಗಿಯೇ ಕಾಲೇಜಿಗೆ ಬರುತ್ತಿದ್ದಾರೆ. ಎಲ್ಲಾ ಬಗೆಯಲ್ಲಿಯೂ ಕರ್ತವ್ಯಗಳನ್ನು ನಿರ್ವಹಿಸಿ ತಿಂಗಳಾಂತ್ಯಕ್ಕೆ ಕೈ ಸೇರಬೇಕಾದ ಸಂಭಾವನೆ ಕೈ ಸೇರದೇ ಹೋದರೆ ಆ ಉಪನ್ಯಾಸಕರ ಪರಿಸ್ಥಿತಿ ಹೇಗಾದೀತು. ಅದೂ ಐದಾರು ತಿಂಗಳಿಂದ ಸಂಭಾವನೆಯೇ ಲಭಿಸದೆ ಹೋದರೆ ಜೀವನ ನಡೆಸುವ ಮಾರ್ಗವಾದರೂ ಯಾವುದು? ಬರಬೇಕಾದ ಸಂಭಾವನೆ ಬರುವ ಬಗ್ಗೆ ಯಾವುದೇ ನಿಖರತೆ ಇಲ್ಲದೆ ಇದ್ದಾಗ ಅನ್ಯರ ಬಳಿ ಸಾಲ ಕೇಳಿದರೂ ಹಿಂದಿರುಗಿಸುವ ಭರವಸೆಯಾದರೂ ಎಲ್ಲಿದೆ ? ಕೊಡುವ ಕಿಂಚಿತ್ ಸಂಬಳದ ಕಾರಣಕ್ಕೆ ದುಡಿಸಿ , ತಿಂಗಳಾನುಗಟ್ಟಲೆ ಸಂಬಳವನ್ನು ನೀಡದೆ ಸತಾಯಿಸುವುದು ಸರಕಾರಿ ವ್ಯವಸ್ಥೆಗೆ ಶೋಭೆ ಎನಿಸುವುದೇ ? ಮಾನವೀಯತೆ ಅಂತ:ಕರಣ ಎನ್ನುವುದು ಸರಕಾರವನ್ನು ಮುನ್ನಡೆಸುವ ಮಂದಿಗಿಲ್ಲವೇ ? ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತಿದೆ.
ನಾವು ಮನುಷ್ಯರಲ್ಲವೇ?:
ಕಳೆದ ಐದು ತಿಂಗಳಿಂದ ಅತಿಥಿ ಉಪನ್ಯಾಸಕ ನೆಲೆಯಲ್ಲಿ ಸರಕಾರದಿಂದ ಬರಬೇಕಾದ ಸಂಭಾವನೆ ಬಾರದೆ ನಮ್ಮ ಬದುಕು ಅನ್ಯರ ಮುಂದೆ ಕೈಯೊಡ್ಡುವ ದಯನೀಯ ಸ್ಥಿತಿಗೆ ತಲುಪಿದೆ. ವಾಹನದಲ್ಲಿ ದೂರದೂರಿನಿಂದ ಪ್ರಯಾಣಿಸಿ ಮುಂಜಾನೆಯೇ ಬರುತ್ತೇವೆ. ಕಾಲೇಜಿನಲ್ಲಿ ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಆದರೆ ಸಂಭಾವನೆ ನೀಡುವುದನ್ನು ವಿಳಂಬಿಸುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಠ ಎದುರಾಗಿದೆ. ಮನೆ ಬಾಡಿಗೆ , ಸಾಲದ ಕಂತು, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ , ವೈದ್ಯಕೀಯ ವೆಚ್ಚ, ದಿನ ನಿತ್ಯದ ಖರ್ಚುಗಳನ್ನು ಸಂಭಾವನೆ ಇಲ್ಲದೆ ನಿರ್ವಹಿಸುವುದಾದರೂ ಹೇಗೆ ? ತಿಂಗಳಾಂತ್ಯಕ್ಕೆ ಪಾವತಿಸುತ್ತೇನೆಂದು ಪಡೆದ ಸಾಲವನ್ನೇ ಹಿಂದಿರುಗಿಸಲು ಅಸಾಧ್ಯವಾದಾಗ ಹೊಸ ಸಾಲವನ್ನು ಕೇಳುವುದಾದರೂ ಹೇಗೆ ? ಸಾಲಕ್ಕಾಗಿ ಪ್ರತಿ ತಿಂಗಳು ಹೊಸ ಹೊಸ ವ್ಯಕ್ತಿಗಳನ್ನು ಹುಡುಕಾಟ ಮಾಡುವ ಹೀನ ಸ್ಥಿತಿಯನ್ನು ಸರಕಾರ ನಮಗೆ ತಂದೊಡ್ಡಿದೆ. ಅತಿಥಿ ಉಪನ್ಯಾಸಕರ ಬದುಕಿನೊಂದಿಗೆ ಚೆಲ್ಲಾಟವಾಡದೆ , ನಮಗೆ ನೀಡಬೇಕಾದ ಸಂಭಾವನೆಯನ್ನು ಸಕಾಲದಲ್ಲಿ ಪಾವತಿಸುವತ್ತ ಗಮನ ಹರಿಸಬೇಕೆಂದು ನೊಂದ ಅತಿಥಿ ಉಪನ್ಯಾಸಕರೊಬ್ಬರು ಮಾಧ್ಯಮದೊಂದಿಗೆ ಕಣ್ಣೀರು ಸುರಿಸಿಕೊಂಡು ತಮ್ಮ ನೋವನ್ನು ತೋಡಿಕೊಂಡರು.
ಸಕಾಲದಲ್ಲಿ ಸಂಭಾವನೆ ದೊರಕುವಂತಾಗಲಿ: ಅಜೀಜ್ ಬಸ್ತಿಕ್ಕಾರ್
ಸರಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕಳೆದ ಐದು ತಿಂಗಳಿಂದ ಸಂಭಾವನೆ ಪಾವತಿಯಾಗದಿರುವುದು ನಾಚಿಕೆಗೇಡಿನ ವಿಚಾರ. ಕಳೆದ ಎರಡು ವರ್ಷಗಳವರೆಗೆ ಮಾಸಿಕ ಹನ್ನೆರಡು ಸಾವಿರ ಸಂಭಾವನೆ ನೀಡುತ್ತಿದ್ದ ಸರಕಾರ ಬಳಿಕ ಅದನ್ನು ಹದಿನಾಲ್ಕು ಸಾವಿರಕ್ಕೆ ಹೆಚ್ಚಿಸಿತ್ತು. ಆದರೂ ಒರ್ವ ಕೂಲಿಯಾಳು ದಿನಕ್ಕೆ ಕನಿಷ್ಠ 700 ರೂಪಾಯಿ ವೇತನ ಪಡೆಯುತ್ತಿರುವಾಗ , ಉಪನ್ಯಾಸಕರಾಗಿ ಎಲ್ಲ ಬಗೆಯ ವಿದ್ಯಾರ್ಹತೆಯನ್ನು ಹೊಂದಿ, ದಿನವಿಡೀ ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸುತ್ತಿರುವಾಗ ಅವರಿಗೆ ಮಾಸಿಕ ಹದಿನಾಲ್ಕು ಸಾವಿರ ಪಾವತಿಸುವುದು ಈ ಕಾಲಕ್ಕೆ ಸೂಕ್ತವಲ್ಲ. ಖಂಡಿತವಾಗಿಯು ಮಾಸಿಕ ಸಂಭಾವನೆಯನ್ನು ಕಾಲಕ್ಕೆ ಸೂಕ್ತವೆನಿಸಿದ ಮೊತ್ತಕ್ಕೆ ಸರಕಾರ ಏರಿಸಲೇಬೇಕು . ಹಾಗೂ ರಾಜ್ಯ ವ್ಯಾಪಿ ಅತಿಥಿ ಉಪನ್ಯಾಸಕರಿಗೆ ಕಳೆದ ೫ ತಿಂಗಳಿಂದ ಸರಕಾರ ಗೌರವಧನ ನೀಡದಿರುವುದು, ಇದರ ಪರಿಣಾಮ ಅತಿಥಿ ಉಪನ್ಯಾಸಕರು ವ್ಯಕ್ತಿಗತ ನೆಲೆಯಲ್ಲಿ ಸಮಸ್ಯೆಗೆ ಸಿಲುಕಿರುವುದು, ಅದು ಅವರ ಬೋಧನಾ ಕಾರ್ಯದಲ್ಲಿ ಪ್ರತಿಫಲನವಾಗುತ್ತಿರುವುದು, ಇದೆಲ್ಲವೂ ಆರೋಗ್ಯ ಪೂರ್ಣ ಬೆಳವಣಿಗೆಯಲ್ಲ. ಸರಕಾರಕ್ಕೆ ಶೋಭೆಯೂ ಅಲ್ಲ. ಪ್ರತಿಯೊಬ್ಬರಿಗೆ ನ್ಯಾಯ ದೊರಕಿಸಿಕೊಡುವ ಸರಕಾರವೇ ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸಂಭಾವನೆ ನೀಡದೆ ಸತಾಯಿಸುತ್ತಿರುವುದು ಸರಕಾರಿ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುವಂತೆ ಮಾಡಿದೆ. ಇನ್ನಾದರು ಸರಕಾರ ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರಿಗೆ ನೀಡುವ ಸಂಭಾವನೆಯನ್ನು ಹೆಚ್ಚಿಸಿ ಅದನ್ನು ಸಕಾಲದಲ್ಲಿ ಪಾವತಿಸುವತ್ತ ಗಮನ ಹರಿಸಬೇಕೆಂದು ಶಿಕ್ಷಣ ಪ್ರೇಮಿ , ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕಾರ್ ಅಗ್ರಹಿಸಿದ್ದಾರೆ.










