ಎಸ್‌ಎಮ್‌ಟಿ ಶಾಖೆಯಿಂದ ಆರು ತಿಂಗಳಲ್ಲಿ ರೂ. 44 ಕೋಟಿ ವ್ಯವಹಾರ

0

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಾಧನೆಗೆ ಚಿದಾನಂದ ಬೈಲಾಡಿ ಮೆಚ್ಚುಗೆ


ಪುತ್ತೂರು: ಒಟ್ಟು ರೂ.881 ಕೋಟಿ ವ್ಯವಹಾರ, ಶೇ.99.10ರಷ್ಟು ಸಾಲ ವಸೂಲಾತಿ ಹಾಗೂ ರೂ.3.5 ಕೋಟಿ ದಾಖಲೆಯ ಲಾಭ ಗಳಿಸಿರುವ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಾಧನೆಯಲ್ಲಿ ಎಸ್‌ಎಮ್‌ಟಿ ಶಾಖೆಯೂ ಮಹತ್ವದ ಕೊಡುಗೆ ನೀಡುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ.96.76 ಕೋಟಿ ವ್ಯವಹಾರ ನಡೆಸಿದ್ದ ಈ ಶಾಖೆ, ಪ್ರಸಕ್ತ ಸಾಲಿನಲ್ಲಿ ಕೇವಲ ಆರು ತಿಂಗಳಲ್ಲೇ ರೂ.44ಕೋಟಿ ವ್ಯವಹಾರ ನಡೆಸಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸಂಘದ ಎಸ್‌ಎಮ್‌ಟಿ ಶಾಖೆಯಲ್ಲಿ ಅ.10ರಂದು ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಆರ್ಥಿಕ ವರ್ಷದಲ್ಲಿ ಎಸ್‌ಎಮ್‌ಟಿ ಶಾಖೆಯು ನಿಗದಿತ ಗುರಿಯನ್ನು ಮೀರಿ ಶೇ.115ರಷ್ಟು ಠೇವಣಿ ಸಂಗ್ರಹ ಹಾಗೂ ಶೇ.122ರಷ್ಟು ಸಾಲ ವಿತರಣೆಯ ಸಾಧನೆ ಮಾಡಿದೆ. ಇದರೊಂದಿಗೆ ಶೇ.99.95ರಷ್ಟು ಸಾಲ ವಸೂಲಾತಿ ದಾಖಲಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೀಡಿರುವ ಗುರಿಯ ಪೈಕಿ ಈಗಾಗಲೇ ಆರು ತಿಂಗಳಲ್ಲಿ ರೂ.44 ಕೋಟಿ ವ್ಯವಹಾರ ನಡೆಸಿದ್ದು, ಶೇ.81ರಷ್ಟು ಠೇವಣಿ ಸಂಗ್ರಹ ಹಾಗೂ ಶೇ.87ರಷ್ಟು ಸಾಲ ವಿತರಣೆಯ ಪ್ರಗತಿ ಸಾಧಿಸಿದೆ ಎಂದರು. 2002ರಲ್ಲಿ ಆರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಇದೇ ಕಟ್ಟಡದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಅಲ್ಲಿಂದ ಹಂತ ಹಂತವಾಗಿ ಬೆಳವಣಿಗೆ ಸಾಧಿಸಿ ಇಂದು ಉತ್ತಮ ವ್ಯವಹಾರ ನಡೆಸುತ್ತಿದೆ. ಎಸ್‌ಎಮ್‌ಟಿ ಶಾಖೆಯ ವ್ಯವಸ್ಥಾಪಕಿ ನಿಶ್ಚಿತ ಹಾಗೂ ಸಿಬ್ಬಂದಿ ತಂಡ ಗ್ರಾಹಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಶಾಖೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.


ಸಾವಿರ ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಲಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮಾತನಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಉತ್ತಮ ವ್ಯವಹಾರದ ಮೂಲಕ ಬೆಳವಣಿಗೆ ಸಾಧಿಸುತ್ತಿದೆ. ಸಂಘವು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸಾವಿರ ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.


ಶಾಖೆಯ ಸಿಬ್ಬಂದಿಗೆ ಗೌರವ
ಕಾರ್ಯಕ್ರಮದಲ್ಲಿ ಎಸ್‌ಎಮ್‌ಟಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಗೌಡ ಮಳುವೇಲು, ಉಪಾಧ್ಯಕ್ಷ ರಾಮಕೃಷ್ಣ ಕರ್ಮಲ, ಶಾಖಾ ವ್ಯವಸ್ಥಾಪಕಿ ನಿಶ್ಚಿತ, ಸಿಬ್ಬಂದಿಗಳಾದ ರಕ್ಷಿತ್ ಮತ್ತು ದೇವರಾಜ್ ಹಾಗೂ ಪಿಗ್ಮಿ ಸಂಗ್ರಹಕರಾದ ಯಶವಂತ ಎಸ್., ಮೋಹಿತ್ ಮತ್ತು ವಾದಿರಾಜ್ ಅವರನ್ನು ಗೌರವಿಸಲಾಯಿತು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕ ಪ್ರವೀಣ್ ಕುಂಟ್ಯಾನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಪಾಣತ್ತಿಲ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆ., ಮಾಜಿ ಅಧ್ಯಕ್ಷ ರವಿ ಮುಂಗ್ಲಿಮನೆ, ಬಾಬು ಗೌಡ ಭಂಡಾರದಮನೆ, ಸುರೇಶ್ ಗೌಡ ಕಲ್ಲಾರೆ, ತಿಮ್ಮಪ್ಪ ಗೌಡ ಕೆಮ್ಮಾಯಿ, ಸೀತಾರಾಮ ಗೌಡ, ಗಣಪಣ್ಣ ಗೌಡ, ಉಮೇಶ್ ಮಳುವೇಲು, ಭಾಸ್ಕರ್, ಪುಟ್ಣಣ್ಣ ದಂಪತಿ, ರಾಮಚಂದ್ರ, ವಸಂತ ವೀರಮಂಗಲ, ಗೌರಿ ಬನ್ನೂರು, ವಿದ್ಯಾ, ವಾರಿಜಾ ಕೆ. ಸಂಧ್ಯಾ ಚಿದಾನಂದ ಬೈಲಾಡಿ, ಸುರೇಶ್ ಮತ್ತು ಹೊನ್ನಪ್ಪ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಖೆಯಲ್ಲಿ ಗಣಪತಿ ಹೋಮ ಹಾಗೂ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ನಮ್ಮ ಸಹಕಾರಿ ಸಂಘ ನಂ.1 ಸ್ಥಾನದಲ್ಲಿದೆ
ನಮ್ಮ ಸಹಕಾರಿ ಸಂಘವು ವ್ಯವಹಾರ, ಠೇವಣಿ ಸಂಗ್ರಹ ಹಾಗೂ ಸಾಲ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಹಕರೊಂದಿಗೆ ಉತ್ತಮ ಒಡನಾಟ ಹೊಂದಿದೆ. ಎಲ್ಲಾ ಶಾಖೆಗಳು ಪರಸ್ಪರ ಪೈಪೋಟಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹಲವು ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ನಿರಂತರ ಪ್ರಶಸ್ತಿಗಳನ್ನು ಪಡೆದಿದ್ದು, ಒಂದು ಬಾರಿ ಚಿನ್ನದ ಪದಕಕ್ಕೂ ಭಾಜನವಾಗಿದೆ. ಮುಂದಿನ ವರ್ಷ ರೂ.1ಸಾವಿರ ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿದ್ದೇವೆ. ಈ ಎಲ್ಲ ಸಾಧನೆಗಳೊಂದಿಗೆ ನಮ್ಮ ಸಹಕಾರಿ ಸಂಘವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಹಾಗಾಗಿ ನಮ್ಮ ಸಹಕಾರಿ ಸಂಘ ನಂ.1 ಸ್ಥಾನದಲ್ಲಿದೆ.
ಚಿದಾನಂದ ಬೈಲಾಡಿ
ಅಧ್ಯಕ್ಷರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ, ಪುತ್ತೂರು

LEAVE A REPLY

Please enter your comment!
Please enter your name here