







2 ನೇ ದಿನದ ಸಂಭ್ರಮ, ಭಜನೆ, ಅನ್ನಸಂತರ್ಪಣೆ, ಮನರಂಜಿಸಿದ ಸಾಂಸ್ಕೃತಿಕ ವೈಭವ


ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಮಂದಿರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 2ನೇ ದಿನವಾದ ಅ.12 ರಂದು ರಾತ್ರಿ ಪಟ್ಟೆತ್ತಡ್ಕ ವೀರಪ್ಪ ನಾಯ್ಕರವರ ಭಜನಾ ಸೇವೆ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಜಿ ಮೇಲ್ವಿಚಾರಕರಾದ ಸುನೀತಾ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕುಂಬ್ರ ಬೃಂದಾವನ ನಾಟ್ಯ ಶಾಲೆಯ ವಿದುಷಿ ರಶ್ಮಿ ದಿಲೀಪ್ ರೈ ಮತ್ತು ಶಿಷ್ಯವೃಂದದವರಿಂದ ಸಾಂಸ್ಕೃತಿಕ ವೈಭವ ಮನರಂಜಿಸಿತು. ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಊರಪರವೂರ ನೂರಾರು ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಆಡಳಿತ ಸಮಿತಿ ಹಾಗೂ ಭಜನಾ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೇ 129 ಮನೆಯ ಭಜನಾ ಸೇವಾರ್ಥಿಗಳು, ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.




ಇಂದು ಶ್ರೀರಾಮ ಮಂದಿರದಲ್ಲಿ
ಅ.13 ರಂದು ರಾತ್ರಿ ಎಂ.ಕರುಣಾಕರ ರೈ ಅತ್ರೆಜಾಲು ಇವರಿಂದ ಭಜನಾ ಸೇವೆ, ಸದಾಶಿವನಗರ ಶ್ರೀ ಸದಾಶಿವ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ತುಳು ಅಪ್ಪೆ ಕೂಟ ಪುತ್ತೂರು ಇವರಿಂದ ಅನಂತರಾಮ ಬಂಗಾಡಿ ವಿರಚಿತ ಯಕ್ಷಗಾನ ತಾಳಮದ್ದಲೆ ಮೇಧಿನಿ ನಿರ್ಮಾಣ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.

ಭವ್ಯವಾದ ಮಂದಿರ
ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರವು ಕಳೆದೆರಡು ವರ್ಷಗಳ ಹಿಂದೆ ಸಂಪೂರ್ಣ ಜೀರ್ಣೋದ್ಧಾರಗೊಂಡ ಅತ್ಯಂತ ಭವ್ಯವಾದ ಮಂದಿರವಾಗಿದೆ. ಶಾಂತವಾದ ಪರಿಸರದಲ್ಲಿ ಭಗವಾನ್ ಶ್ರೀರಾಮಚಂದ್ರ ಸಪರಿವಾರ ಸಹಿತ ಇಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಶ್ರೀರಾಮ ಮಂದಿರವನ್ನು ನೋಡುವುದೇ ಚೆಂದ. ಬನ್ನಿ ನಾವು ಕೂಡ ಒಂದ್ಸಲ ಇಲ್ಲಿ ಬಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸೋಣ…










