







ವಿಟ್ಲ: ಅಪರಿಚಿತ ವ್ಯಕ್ತಿಗಳು ಮೊಬೈಲ್ ಸಂಖ್ಯೆಗೆ ಲಿಂಕ್ ಒಂದನ್ನು ಕಳುಹಿಸಿ ಆ ಮೂಲಕ ಒಟಿಪಿ ಪಡೆದು ಹಂತಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಕುರಿತು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳ ತಾಲೂಕು ಬರಿಮಾರು ನಿವಾಸಿ ಉದಯ ದೂರುದಾರರಾಗಿದ್ದಾರೆ. ಉದಯ ಅವರು ಕಳೆದ ಹಲವಾರು ವರುಷಗಳಿಂದ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಲ್ಲಿರುವ ಶ್ರೀ ಸಾಯಿ ಕೇಬಲ್ ನೆಟ್ ವರ್ಕ್ ಕಂಪನಿಯಲ್ಲಿ ಕೇಬಲ್ ಆಪರೇಟರ್ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲ್ ಸಂಖ್ಯೆಗೆ ಅ.7ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮುಖಾಂತರ https://mparivahan.govt.hu/919996 ಎಂಬ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ ಟೆಕ್ಸ್ಟ್ ಮೆಸೇಜ್ ಹಾಗೂ ಒಟಿಪಿ ಬರುತ್ತಿರುವುದು ಗಮನಕ್ಕೆ ಬಂದಿತ್ತಾದರೂ ಕೆಲಸದ ಒತ್ತಡದಿಂದ ಮೆಸೇಜ್ಗಳ ಬಗ್ಗೆ ಗಮನಹರಿಸಲು ಅಸಾಧ್ಯವಾಗಿತ್ತು. ಅ.12ರಂದು ನನ್ನ ಹಣಕಡಿತಗೊಂಡಿರುವ ಮೆಸೇಜ್ ಬಂದಿತ್ತು. ಆ ಕೂಡಲೇ ಬ್ಯಾಂಕ್ನ ಕೈಕಂಬ ಶಾಖೆಗೆ ಹೋಗಿ ಪರಿಶೀಲಿಸಿದಾಗ ಅ.12ರಂದು ಅಪರಿಚಿತ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮುಖಾಂತರ ಲಿಂಕ್ ಕಳುಹಿಸಿ OTP ಪಡೆದುಕೊಂಡು ರೂ 2,59,146 ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ’ ಉದಯ ಅವರು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













