







ಸಭಾಂಗಣ, ಪ್ರಯೋಗಾಲಯ, ಏವಿಯೇಶನ್ ಟ್ರೈನಿಂಗ್ ಸ್ಟುಡಿಯೋ, ವಿದ್ಯಾರ್ಥಿನಿಲಯ ಉದ್ಘಾಟನೆ
ಸಾಮಾನ್ಯರಿಗೂ ಉದ್ಯೋಗ ಅಕ್ಷಯ ಸಂಸ್ಥೆಯ ಮೂಲ ಉದ್ಧೇಶ-ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ


*ಅಂಕಗಳಿಕೆಯೊಂದಿಗೆ ಸಮಾಜದಲ್ಲಿ ಬದುಕುವ ಶಿಕ್ಷಣ ಕೊಡಿ-ಉಮಾನಾಥ್ ಕೋಟ್ಯಾನ್
*ಸಮಾಜದಲ್ಲಿ ಜೀವಿಸುವ ನಾವುಗಳು ಮೊದಲು ಮಾನವನಾಗಬೇಕು-ಕು|ಭಾಗೀರಥಿ ಮುರುಳ್ಯ
*ಜ್ಞಾನದ ಅಕ್ಷಯ `ಜಯಂತ’ ಹೆಸರಿಗೆ ಸೋಲೇ ಇಲ್ಲ-ಕಿಶೋರ್ ಬೊಟ್ಯಾಡಿ
*ದುರ್ಬಲ ಜನತೆಗೆ ಅಕ್ಷಯ ಸಂಸ್ಥೆ ದಾರಿದೀಪ-ಬಿ.ರಮಾನಾಥ್ ರೈ
*ಸಮಾಜದಲ್ಲಿ ಗೌರವಯುತವಾದ ಬದುಕು ಸಾಗಿಸಲು ಈ ಸಂಸ್ಥೆಯಿಂದಾಗಿದೆ-ವಿನಯಕುಮಾರ್ ಸೊರಕೆ
*ಸಮಾಜದಲ್ಲಿ ಸಂಸ್ಕಾರವಂತ ಒಳ್ಳೆಯ ನಾಗರಿಕನಾಗುವುದು ಬಹಳ ಮುಖ್ಯ-ಜಯಕಾಂತ್ ಸುವರ್ಣ
*ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು ನಿಜಕ್ಕೂ ಪ್ರಶಂಸನೀಯ-ಸತೀಶ್ ಬೋಳಾರ್
*ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜಯಂತ್ರವರ ಶಿಕ್ಷಣ ಸಂಸ್ಥೆಗಳು ವಿಸ್ತರಿಸಲಿ-ಅರುಣ್ ಪುತ್ತಿಲ
*ವಿದ್ಯಾರ್ಥಿಗಳ ಬಾಳಿಗೆ ಅಕ್ಷಯ ಸಂಸ್ಥೆ ಅಕ್ಷಯವಾಗಿ ಮೂಡಿದೆ-ಹೇಮನಾಥ ಶೆಟ್ಟಿ
*ಜಯಂತ್ರವರದ್ದು ಕೃಷಿ ಕುಟುಂಬದ ಹಿನ್ನೆಲೆ-ಸಂಜೀವ ಪೂಜಾರಿ ಬಿರ್ವ
*ದೇಶ-ವಿದೇಶಗಳಲ್ಲಿ ಅಕ್ಷಯ ಸಂಸ್ಥೆಯ ವಿದ್ಯಾರ್ಥಿಗಳ ಛಾಪು-ರವಿ ಚಿಲಿಂಬಿ
*ಜಯಂತ್ರವರೂ ಶೈಕ್ಷಣಿಕ ಕ್ಷೇತ್ರದಲ್ಲೂ ಯಶಸ್ವಿ-ಸತೀಶ್ ಕೆಡೆಂಜಿ



ಪುತ್ತೂರು: ಒಳ್ಳೆಯ ಉದ್ಯೋಗ ಸಿಗಬೇಕು ಅನ್ನುವುದು ಸರ್ವಜನರ ಅಪೇಕ್ಷೆಯಾಗಿದೆ. ಇಂದು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕೂಡ ಉದ್ಯೋಗ ಅನ್ನುವುದು ಮರೀಚಿಕೆಯಾಗಿದೆ. ಉದ್ಯೋಗ ಸಿಕ್ಕಿದವರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಭಯ ಒಂದೆಡೆಯಾದರೆ ಸಾಮಾನ್ಯ ಮಂದಿಗೂ ಉದ್ಯೋಗ ಸಿಗಬೇಕು ಎನ್ನುವುದು ಅಕ್ಷಯ ಸಂಸ್ಥೆಯ ಮೂಲ ಉದ್ಧೇಶವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದರು.
ಮಾತೃಸಂಸ್ಥೆ ಅಕ್ಷಯ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ವೃತ್ತಿಪರ ಶಿಕ್ಷಣ ಅಕ್ಷಯ ಪದವಿ ಕಾಲೇಜು, ಅಕ್ಷಯ ಪದವಿ ಪೂರ್ವ ಕಾಲೇಜು, ಅಕ್ಷಯ ಕೆರಿಯರ್ ಅಕಾಡೆಮಿ, ಅಕ್ಷಯ ಕೆರಿಯರ್ ಡೆಸ್ಟಿನಿ ಹೆಸರಿನಲ್ಲಿ ಕಳೆದ ಐದಾರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಇದೀಗ ಸಕಲ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿದ್ದು ಇದರ ನೂತನ ಸಭಾಂಗಣ, ಲಿಫ್ಟ್, ವಿವಿಧ ಪ್ರಯೋಗಾಲಯ, ಏವಿಯೇಶನ್ ಟ್ರೈನಿಂಗ್ ಸ್ಟುಡಿಯೋ, ವಿದ್ಯಾರ್ಥಿನಿಲಯಗಳ ಉದ್ಘಾಟನೆ ಹಾಗೂ ವರ್ಷಂಪ್ರತಿ ಆಚರಿಸುವ ಶಾರದೋತ್ಸವ, ಕುಣಿತ ಭಜನೆ, ಆಯುಧಪೂಜೆ ಕಾರ್ಯಕ್ರಮ ಅ.15 ರಂದು ಸಂಭ್ರಮದೊಂದಿಗೆ ವಿದ್ಯಾಸಂಸ್ಥೆಯಲ್ಲಿ ಆಚರಣೆಗೊಂಡಿದ್ದು, ಈ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡುತ್ತಾ ಮಾತನಾಡಿದರು. ಲಕ್ಷಾಂತರ ಜೀವರಾಶಿಗಳಲ್ಲಿ ಅಪಾರವಾದ ಬುದ್ಧಿಶಕ್ತಿ, ವಿಶಿಷ್ಟವಾದ ಮನಃಶಕ್ತಿ, ಕ್ರಿಯಾಶೀಲವಾದ ಕೈಬೆರಳು ಭಗವಂತನು ಮನುಷ್ಯನಿಗೆ ಕರುಣಿಸಿರುತ್ತಾನೆ. ಆದ್ದರಿಂದ ಭಗವಂತ ನಮಗೆ ಕೊಟ್ಟ ಅಸಾಧಾರಣ ಕೊಡುಗೆಗಳ ಮೂಲಕ ನಾವು ಉನ್ನತಿ ಕಾಣಬೇಕಿದೆ. ನೈಪುಣ್ಯ ಎಂಬುದು ಕೇವಲ ಮನುಷ್ಯನಿಗೆ ಮಾತ್ರ ಕೊಟ್ಟಿರುವುದಿಲ್ಲ. ನೈಪುಣ್ಯ ಎಂಬುದು ಪ್ರಾಣಿ-ಪಕ್ಷಿಗಳಲ್ಲೂ ಇದೆ. ಮನುಷ್ಯನಿಗೆ ಹೊಸತನವನ್ನು ಕಂಡು ಹುಡುಕುವ ತವಕವಿದೆ. ಮನುಷ್ಯನ ಬುದ್ಧಿಶಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅತಿಯಾದ ಬುದ್ಧಿವಂತಿಕೆಯಿಂದ ಪ್ರಪಂಚ ವಿನಾಶದಂಚಿಗೆ ಹೋಗಬಾರದು, ಅದು ಸೃಜನಾತ್ಮಕವಾಗಿ ಬೆಳೆಯಬೇಕು. ಬುದ್ಧಿ ವ್ಯವಸ್ಥಿತವಾಗಿ ಇರಬೇಕಾದರೆ ನಮ್ಮಲ್ಲಿ ಸಂಸ್ಕಾರ ಬೆಳೆಯಬೇಕು ಇಲ್ಲದಿದ್ದರೆ ನಾವು ಗುರಿ ಮುಟ್ಟುವುದಿಲ್ಲ ಎಂದರು.

ಅಂಕಗಳಿಕೆಯೊಂದಿಗೆ ಸಮಾಜದಲ್ಲಿ ಬದುಕುವ ಶಿಕ್ಷಣ ಕೊಡಿ-ಉಮಾನಾಥ್ ಕೋಟ್ಯಾನ್:
ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಫ್ಯಾಶನ್ ಡಿಸೈನ್ ವಿಭಾಗದ ಒಳನೋಟವನ್ನು ಅನಾವರಣಗೊಳಿಸಿ ಮಾತನಾಡಿ, ಮಕ್ಕಳಿಗೆ ಓದು, ಮಾರ್ಕ್ ತೆಗಿ ಅಂತ ಹೆತ್ತವರು ಒತ್ತಡ ಹಾಕಬೇಡಿ, ಕೇವಲ ಅಂಕ ಗಳಿಕೆಯೊಂದೇ ಗುರಿ ಅಲ್ಲ, ಬದಲಾಗಿ ಪುಸ್ತಕದ ಹೊರಗೆ ಒಂದು ಬದುಕಿದೆ ಎಂಬುದನ್ನು ನೆನಪಿನಲ್ಲಿಟ್ಟುಕಿಳ್ಳಬೇಕು. ಸಮಾಜದಲ್ಲಿ ಹೇಗೆ ನಾವು ಸಂಸ್ಕಾರವಂತ ಜೀವನ ಬದುಕಬೇಕು, ವಿದ್ಯಾಭ್ಯಾಸ ನೀಡಿದ ಹೆತ್ತವರೊಂದಿಗೆ ಮಕ್ಕಳು ಕಾಲ ಕಳೆಯುವುದು ಬಹಳ ಮುಖ್ಯವಾಗಿದೆ. ಪ್ರತಿಯೊಂದು ಮಕ್ಕಳಲ್ಲಿ ಪ್ರತಿಭೆ ಇದ್ದು ಅವರ ಪ್ರತಿಭೆಯನ್ನು ಗೌರವಿಸಬೇಕು, ಪ್ರೋತ್ಸಾಹಿಸಬೇಕು ಎಂದರು.
ಸಮಾಜದಲ್ಲಿ ಜೀವಿಸುವ ನಾವುಗಳು ಮೊದಲು ಮಾನವನಾಗಬೇಕು-ಕು|ಭಾಗೀರಥಿ ಮುರುಳ್ಯ:
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು|ಭಾಗೀರಥಿ ಮುರುಳ್ಯರವರು ಇಂಟೀರಿಯರ್ ಡಿಸೈನ್ ವಿಭಾಗದ ಒಳನೋಟದ ವಿಡಿಯೊವನ್ನು ರಿಮೋಟ್ ಅದುಮುವ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಅಕ್ಷಯ ಕಾಲೇಜು ಸಂಸ್ಥೆಯ ಎನ್ಎಸ್ಎಸ್ ವಿದ್ಯಾರ್ಥಿಗಳು ಸುಳ್ಯದ ಸಂಸ್ಥೆಯೊಂದರಲ್ಲಿ ಭಾಗವಹಿಸಿ ಉತ್ತಮ ಕಾರ್ಯಕ್ರಮ ನೀಡಿದ್ದರು. ಈ ಸಂಸ್ಥೆ ಜನಜೀವನದಲ್ಲಿ ವಿದ್ಯಾರ್ಥಿಗಳು ಹೇಗೆ ಬೆರೆಯಬೇಕು, ಹೇಗೆ ಜೀವನ ಕಲ್ಪಿಸಿಕೊಳ್ಳಬೇಕು ಎನ್ನುವ ಶಿಕ್ಷಣ ಪ್ರಾಯೋಗಿಕವಾಗಿ ನೀಡುತ್ತಿರುವುದು ಪ್ರಶಂಸನೀಯ. ಕೆಲವೇ ವರ್ಷಗಳಲ್ಲಿ ಈ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಅಲ್ಲಿ ವಿದ್ಯಾರ್ಥಿಗಳ ಪೋಷಕರ, ಊರವರ ಸಹಕಾರವನ್ನು ಮರೆಯಲಾಗದು. ಯಾರು ಯಾವುದೇ ಹುದ್ದೆಯಲ್ಲಿ ಮುಂದುವರೆದರೂ ಮನುಷ್ಯ ಸಮಾಜದಲ್ಲಿ ಜೀವಿಸುವ ನಾವುಗಳು ಮೊದಲು ಮಾನವನಾಗು ಎಂಬುದು ನೂರಕ್ಕೇ ನೂರು ಸತ್ಯ ಎಂದರು.
ಜ್ಞಾನದ ಅಕ್ಷಯ ವಿದ್ಯಾರ್ಥಿಗಳಿಗೆ ನೀಡುವ ಜಯಂತ’ ಹೆಸರಿಗೆ ಸೋಲೇ ಇಲ್ಲ-ಕಿಶೋರ್ ಬೊಟ್ಯಾಡಿ:
ಸಂಸ್ಥೆಯ ಬಿಕಾಂ ವಿಭಾಗದ ವಿಡಿಯೋವನ್ನು ರಿಮೋಟ್ ಅದುಮುವ ಮೂಲಕ ಲೋಕಾರ್ಪಣೆಗೊಳಿಸಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಇಂದು ಏವಿಯೇಶನ್ ಶಿಕ್ಷಣವನ್ನು ಪ್ರಾರಂಭಿಸುವ ಮುಖೇನ ನಮ್ಮ ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ಶಕ್ತಿಯನ್ನು ಕೊಡುವ ಕೆಲಸ ಈ ಸಂಸ್ಥೆಯಿಂದ ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೊರದೇಶದಲ್ಲಿ ಉದ್ಯೋಗದೊಂದಿಗೆ ದೇಶದ ಆಸ್ತಿ ಹಾಗೂ ಭದ್ರ ಬದುಕನ್ನು ಕಾಣುವ ಸುಂದರ ಯೋಜನೆಯನ್ನು ಈ ಸಂಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ವಿದ್ಯಾರ್ಜನೆ ಎಂಬುದು ಕರಗಿ ಹೋಗಲು ಸಾಧ್ಯವಿಲ್ಲ. ಆ ಜ್ಞಾನದ ಅಕ್ಷಯವನ್ನು ವಿದ್ಯಾರ್ಥಿಗಳಿಗೆ ನೀಡುವ ಮುಖಾಂತರ ಜಯಂತ’ ಅನ್ನುವ ಹೆಸರಿಗೆ ಸೋಲು ಅನ್ನುವುದೇ ಇಲ್ಲ ಎಂದರು.
ದುರ್ಬಲ ಜನತೆಗೆ ಅಕ್ಷಯ ಸಂಸ್ಥೆ ದಾರಿದೀಪ-ಬಿ.ರಮಾನಾಥ್ ರೈ:
ಮಾಜಿ ಸಚಿವ ಬಿ.ರಮಾನಾಥ ರೈರವರು ಅಕ್ಷವಿ ಮಾಸಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿ, ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಶಿಕ್ಷಣವನ್ನು ಆರಂಭಿಸಿ, ಸಮಾಜದ ದುರ್ಬಲ ವರ್ಗದವರ ಬಾಳಿಗೆ ಆಶಾಕಿರಣ ಮೂಡಿಸಿ, ಅದರಲ್ಲಿ ಯಶಸ್ವಿ ಕಂಡಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಮಾಜದಲ್ಲಿ ವಂಚಿತರಾದ ಪ್ರತಿಯೋರ್ವ ಜನತೆಗೆ ಅಕ್ಷಯ ವಿದ್ಯಾಸಂಸ್ಥೆ ದಾರಿದೀಪವಾಗಿದೆ ಎಂದರು.

ಸಮಾಜದಲ್ಲಿ ಗೌರವಯುತವಾದ ಬದುಕು ಸಾಗಿಸಲು ಈ ಸಂಸ್ಥೆಯಿಂದಾಗಿದೆ-ವಿನಯಕುಮಾರ್ ಸೊರಕೆ:
ಸಂಸ್ಥೆಯ ಬಿಸಿಎ ವಿಭಾಗದ ವಿಡಿಯೋವನ್ನು ರಿಮೋಟ್ ಅದುಮುವ ಮೂಲಕ ಲೋಕಾರ್ಪಣೆಗೊಳಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆರವರು ಮಾತನಾಡಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಿಯ ಅನುಗ್ರಹದಲ್ಲಿ ಸಂಸ್ಥೆಯಲ್ಲಿ ಹೊಸ ಹೊಸ ಕೋರ್ಸ್ ಗಳನ್ನು ಅಕ್ಷಯ ಹೆಸರಿನಲ್ಲಿ ಸಮಾಜಕ್ಕೆ ಪರಿಚಯಿಸಿದ ಜಯಂತ್ ನಡುಬೈಲುರವರ ಸಾಧನೆಯನ್ನು ಶ್ಲಾಘಿಸಬೇಕು. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಜೊತೆಗೆ ಅವರಲ್ಲಿನ ಪ್ರತಿಭೆಗಳಿಗೆ ಅವಕಾಶ ನೀಡಿದಾಗ ಆ ವಿದ್ಯಾರ್ಥಿಯ ಪ್ರತಿಭೆಯೂ ಬೆಳಗುತ್ತದೆ, ಸಂಸ್ಥೆಯು ಬೆಳೆಯುತ್ತದೆ. ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಕ್ಷೇತ್ರಗಳು ಕೈಯಲ್ಲಿ ಮುಟ್ಟಲು ಆಗದ ಪರಿಸ್ಥಿತಿಯಲ್ಲಿ ಇದ್ದಾಗ ಇಂದಿನ ಪ್ರಸ್ತುತ ಜಗತ್ತಿನಲ್ಲಿ ಸಮಾಜದಲ್ಲಿ ಜನಸಾಮಾನ್ಯರಂತೆ ಗೌರವಯುತವಾದ ಬದುಕನ್ನು ಕಾಣುವಲ್ಲಿ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ದಾರಿದೀಪವಾಗಿ ಪರಿಣಮಿಸಿದೆ ಎಂದರು.
ಸಮಾಜದಲ್ಲಿ ಸಂಸ್ಕಾರವಂತ ಒಳ್ಳೆಯ ನಾಗರಿಕನಾಗುವುದು ಬಹಳ ಮುಖ್ಯ-ಜಯಕಾಂತ್ ಸುವರ್ಣ:
ಬಿಎಚ್ಎಸ್ ವಿಭಾಗದ ವಿಡಿಯೋವನ್ನು ಭಾರತ್ ಬ್ಯಾಂಕ್ ಮುಂಬೈ ಲಿ. ಅಧ್ಯಕ್ಷ ಜಯಕಾಂತ್ ಸುವರ್ಣರವರು ಅನಾವರಣಗೊಳಿಸಿ ಮಾತನಾಡಿ, ವಿದ್ಯಾಸಂಸ್ಥೆಗಳನ್ನು ನಡೆಸುವುದು ಅಷ್ಟೊಂದು ಸುಲಭವಲ್ಲ. ಆದರೆ ಇದನ್ನು ಜಯಂತ್ರವರು ಎಲ್ಲರ ಸಹಕಾರದೊಂದಿಗೆ ಇದನ್ನು ಸಾಕಾರಗೊಳಿಸಿದ್ದಾರೆ. ಜ್ಞಾನ ಎಂಬುದು ಶಕ್ತಿ, ಶಕ್ತಿ ಎಂಬುದು ಜವಾಬ್ದಾರಿ. ವಿದ್ಯೆ ನಿಮಗೆ ಸಿಗುತ್ತದೆ. ಉನ್ನತ ಹುದ್ದೆ ಸಿಗುತ್ತದೆ. ವಿದ್ಯೆಯಲ್ಲಿ ಶೇ.ನೂರು ಅಂಕ ಗಳಿಸುತ್ತಾರೆ. ಆದರೆ ಸಮಾಜದಲ್ಲಿ ಸಂಸ್ಕಾರವಂತ ಒಳ್ಳೆಯ ನಾಗರಿಕನಾಗುವುದು ಬಹಳ ಮುಖ್ಯ. ನಾವು ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳೋಣ. ನವರಾತ್ರಿ ಸಂದರ್ಭ ದುರ್ಗಾ ಅಂದರೆ ಶಕ್ತಿ, ಲಕ್ಷ್ಮೀ ಅಂದರೆ ಹಣ, ಸರಸ್ವತಿ ಅಂದರೆ ಜ್ಞಾನ. ನಮ್ಮಲ್ಲಿ ಜ್ಞಾನವನ್ನು ಹೊಂದಿದ್ದಲ್ಲಿ ಎಲ್ಲವೂ ಪ್ರಾಪ್ತಿಯಾಗುತ್ತದೆ ಎಂದರು.
ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು ನಿಜಕ್ಕೂ ಪ್ರಶಂಸನೀಯ-ಸತೀಶ್ ಬೋಳಾರ್:
ರೋಟರಿ 3181 ಇದರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ರವರು ಬಿಎ ಜೊತೆ ಏವಿಯೇಶನ್ ವಿಭಾಗದ ಕಿರುಚಿತ್ರ ಅನಾವರಣಗೊಳಿಸಿ ಮಾತನಾಡಿ, ಮಂಗಳೂರಿನಲ್ಲಿ ರೂ.2 ಲಕ್ಷ ಶುಲ್ಕವಿರುವ ಕೋರ್ಸ್ ಗಳನ್ನು ಜಯಂತ್ರವರು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಶುಲ್ಕದೊಂದಿಗೆ ಮಾಡಿ ತೋರಿಸಿದ್ದಾರೆ ಮಾತ್ರವಲ್ಲ ಈ ಸಂಸ್ಥೆಯಲ್ಲಿ ವಿದ್ಯಾರ್ಜನೆ ಪಡೆದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಸುಂದರ ಬದುಕನ್ನು ಕಲ್ಪಿಸಿಕೊಂಡಿರುವುದು ಮತ್ತೊಂದು ವಿಶೇಷತೆಯಾಗಿದೆ. ರೋಟರಿ ಸಂಸ್ಥೆಯಲ್ಲೂ ಜಯಂತ್ರವರು ಕೈಜೋಡಿಸಿರುವುದು ಜೊತೆಗೆ ಈ ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು ಅನ್ನು ನಿಜಕ್ಕೂ ಪ್ರಶಂಸಿಸುವುದು ನಮ್ಮ ಕರ್ತವ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಆದಮ್ಯ ವಿಶ್ವಾಸವಿಟ್ಟುಕೊಂಡು ವಿದ್ಯಾಭ್ಯಾಸವನ್ನು ಧಾರೆ ಎರೆದಿರುತ್ತಾರೆ. ನಿಮ್ಮ ಹೆತ್ತವರ ಕನಸನ್ನು ಹುಸಿಗೊಳಿಸದಿರಿ, ಅವರ ಕನಸನ್ನು ನನಸಾಗಿಸಿ ಎಂದರು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜಯಂತ್ರವರ ಶಿಕ್ಷಣ ಸಂಸ್ಥೆಗಳು ವಿಸ್ತರಿಸಲಿ-ಅರುಣ್ ಪುತ್ತಿಲ:
ಪಿಯುಸಿ ವಿಭಾಗದ ಕಿರುಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಪುತ್ತಿಲ ಪರಿವಾರ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು, ದೇಶ ಬದಲಾಗಿದೆ, ಕಾಲ ಬದಲಾಗಿದೆ, ವಿದ್ಯಾರ್ಥಿಗಳ ಭವಿಷ್ಯಗಳೂ ಬದಲಾಗಬೇಕು ಎನ್ನುವ ಚಿಂತನೆಯಲ್ಲಿ ನಾವಿದ್ದೇವೆ. ಇವೆಲ್ಲವನ್ನು ಅರಿತುಕೊಂಡು ಕಾಲಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಗಳಲ್ಲಿ ಪರಿಣಾಮಕಾರಿಯಾಗುವಂತಹ ಬದಲಾವಣೆಯನ್ನು ನಮ್ಮ ಊರಿನಲ್ಲಿ ಮಾಡಕೊಳ್ಳಬೇಕು ಎನ್ನುವ ಕಲ್ಪನೆ. ವಿಶೇಷವಾಗಿ ವೃತ್ತಿಪರ ಕೋರ್ಸ್ಗಳನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ವಿದ್ಯೆ ಬಳಿಕ ಉದ್ಯೋಗ ಅವಕಾಶದ ಯೋಚನೆಯ ದೂರದೃಷ್ಟಿ ಅಕ್ಷಯ ಸಂಸ್ಥೆಗಿರುವುದು ಶ್ಲಾಘನೀಯ. ಜಯಂತ್ರವರ ಈ ಸಂಸ್ಥೆಯು ಚಿಕ್ಕಮಂಗಳೂರಿನಲ್ಲೂ ವಿಸ್ತರಿಸಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜಯಂತ್ರವರ ಶಿಕ್ಷಣ ಸಂಸ್ಥೆಗಳು ವಿಸ್ತರಿಸಲಿ, ಎಲ್ಲರಿಗೂ ಅಕ್ಷಯ ಪ್ರಾಪ್ತಿಯಾಗಲಿ ಎಂದರು.
ವಿದ್ಯಾರ್ಥಿಗಳ ಬಾಳಿಗೆ ಅಕ್ಷಯ ಸಂಸ್ಥೆ ಅಕ್ಷಯವಾಗಿ ಮೂಡಿದೆ-ಹೇಮನಾಥ ಶೆಟ್ಟಿ:
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಸಂಸ್ಥೆಯ ಏವಿಯೇಶನ್ ವಿಭಾಗವನ್ನು ಅನಾವರಣಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಏನು ಬೇಕು ಎಂಬ ವ್ಯವಸ್ಥೆ ಈ ಸಂಸ್ಥೆಯಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಈ ಸಂಸ್ಥೆ ಹುಟ್ಟು ಹಾಕಿದಿದ್ರೆ ಹೇಗಾಗರ್ತಿತ್ತು ಊಹಿಸಿಕೊಳ್ಳಬೇಕು. ಶಿಕ್ಷಣ ಪಡೆದರೆ ಸಾಲದು, ಅದು ವಿದ್ಯಾರ್ಥಿಗಳ ಭವಿಷ್ಯದ ಉದ್ಯೋಗಕ್ಕೆ ಸೀಮಿತವಾಗಿರಬೇಕು. ನಮ್ಮಲ್ಲಿ ನಿರುದ್ಯೋಗದ ಸಮಸ್ಯೆಯಿದೆ. ಹಿಂದೆ ವೃತ್ತಿಪರ ಶಿಕ್ಷಣ ಪಡೆಯಲು ಮಂಗಳೂರು, ಬೆಂಗಳೂರು ಮುಂತಾದ ಪ್ರಮುಖ ಕೇಂದ್ರಗಳನ್ನು ಆಶ್ರಯಿಸಬೇಕಿತ್ತು. ಆದರೆ ವೃತ್ತಿಪರ ಶಿಕ್ಷಣವು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಜಯಂತ್ರವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪರಿಚಯಿಸಿ ವಿದ್ಯಾರ್ಥಿಗಳ ಬಾಳಿಗೆ ಅಕ್ಷಯವಾಗಿ ಮೂಡಿ ಬರುತ್ತಿರುವುದು ಪ್ರಶಂಸನೀಯ ಎಂದರು.
ಜಯಂತ್ರವರದ್ದು ಕೃಷಿ ಕುಟುಂಬದ ಹಿನ್ನೆಲೆ-ಸಂಜೀವ ಪೂಜಾರಿ ಬಿರ್ವ:
ಕಡಿಮೆ ಅವಧಿಯಲ್ಲಿ ಉದ್ಯೋಗ ಕಲ್ಲಿಸಿದ ಅಕ್ಷಯ ಕೆರಿಯರ್ ಅಕಾಡೆಮಿಯನ್ನು ಅನಾವರಣಗೊಳಿಸಿದ ಮೂರ್ತೆದಾರರ ಮಹಾಮಂಡಳಿ ಇದರ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಮಾತನಾಡಿ, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಂತಹ ಜಯಂತ್ ನಡುಬೈಲುರವರು ಓರ್ವ ಉದ್ಯಮಿಯಾಗಿ, ಬಿಲ್ಲವ ಸಮಾಜದ ಅಧ್ಯಕ್ಷರಾಗಿ, ಯುವವಾಹಿನಿಯ ಅಧ್ಯಕ್ಷರಾಗಿ, ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ಸ್ವಾಮೀಜಿಯ ಆಶಯದಂತೆ ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಉದ್ಧೇಶದಿಂದ ಇಂದು ಅಕ್ಷಯ ಶಿಕ್ಷಣ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ದೊಡ್ಡ ಸಾಧನೆಯನ್ನೇ ಮೆರೆದಿರುತ್ತಾರೆ. ಶಿಕ್ಷಣ ಸಂಸ್ಥೆ ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಆದರೂ ಜಯಂತ್ರವರು ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ದೇಶ-ವಿದೇಶಗಳಲ್ಲಿ ಅಕ್ಷಯ ಸಂಸ್ಥೆಯ ವಿದ್ಯಾರ್ಥಿಗಳ ಛಾಪು-ರವಿ ಚಿಲಿಂಬಿ:
ಅಕ್ಷವಿ ಯ್ಯೂಟ್ಯೂಬ್ ಚಾನೆಲ್ನ ಹಿನ್ನೋಟವನ್ನು ಬಟನ್ ಅದುಮುವ ಮೂಲಕ ಅನಾವರಣಗೊಳಿಸಿದ ಶ್ರೇ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮಾತನಾಡಿ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭ ಜಯಂತ್ರವರು ತಾನೊಂದು ದೊಡ್ಡ ಉದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಅದಕ್ಕೆ ಶ್ರೀ ಕ್ಷೇತ್ರದ ಶಕ್ತಿಗಳ ಆಶೀರ್ವಾದ ಬೇಕು ಎಂದಾಗ ಆವಾಗಲೇ ಶ್ರೀ ಕ್ಷೇತ್ರದ ಶಕ್ತಿಗಳು ಅನುಗ್ರಹ ಕರುಣಿಸಿದ್ದರ ಫಲವಾಗಿ ಇಂದು ಜಯಂತ್ರವರ ಕನಸಿನ ಅಕ್ಷಯ ಸಂಸ್ಥೆ ಹೆಮ್ಮೆರವಾಗಿ ಬೆಳೆಯುತ್ತಿದೆ. ಗುಜರಾತ್ಗೆ ಪ್ರಯಾಣ ಸಂದರ್ಭದಲ್ಲಿ ಬಜ್ಪೆ ಏರ್ಪೋರ್ಟ್, ಬಾಂಬೆ ಏರ್ಪೋರ್ಟ್ ನಲ್ಲಿ ಅಲ್ಲಿನ ಸಿಬ್ಬಂದಿಗಳು ನಮಗೆ ಒಳ್ಳೆಯ ರೀತಿಯಲ್ಲಿ ಸಹಕರಿಸುತ್ತಿರುವುದು ನೋಡಿದಾಗ ಆ ಸಿಬ್ಬಂದಿಗಳು ಅಕ್ಷಯ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಗೊತ್ತಾಯಿತು. ಅಕ್ಷಯ ಸಂಸ್ಥೆಯ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಛಾಪು ಮೂಡಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ಜಯಂತ್ರವರೂ ಶೈಕ್ಷಣಿಕ ಕ್ಷೇತ್ರದಲ್ಲೂ ಯಶಸ್ವಿ-ಸತೀಶ್ ಕೆಡೆಂಜಿ:
ಅಕ್ಷಯ ಯೂಟ್ಯೂಬ್ ಚಾನೆಲ್ನ ಲೋಗೋವನ್ನು ಅನಾವರಣಗೊಳಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ನಾನು ಮತ್ತು ಜಯಂತ್ರವರು ಒಂದೇ ಬಸ್ಸಿನಲ್ಲಿ ಪ್ರಯಾಣಿಸಿದವರಾಗಿದ್ದಾರೆ. ಆದರೆ ಇಂದು ಜಯಂತ್ರವರು ಕೃಷಿ, ಉದ್ಯಮ ಕ್ಷೇತ್ರದಲ್ಲಿ ಮಿಂಚಿ ಇದೀಗ ಶೈಕ್ಷಣಿಕ ಕ್ಷೇತ್ರವನ್ನು ಆರಂಭಿಸಿ ಅದರಲ್ಲೂ ಯಶಸ್ವಿಯನ್ನು ಕಂಡುಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಸಮಾಜದಲ್ಲಿ ಜಯಂತ್ರವರ ಆತ್ಮೀಯತೆ ಹೇಗಿದೆ ಅಂದ್ರೆ ಇಂದಿನ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿರುವುದು ಸಾಕ್ಷಿಯಾಗಿದೆ ಎಂದರು.
ಪ್ರಶಸ್ತಿ ಗೌರವ:
ಸಂಸ್ಕೃತ ಭಾಷೆಯ ಪ್ರಚಾರ, ಜ್ಞಾನವರ್ಧನೆ, ಪ್ರತಿಭೆಯ ಗುರುತಿಸುವಿಕೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಭಾರತೀಯ ಸಂಸ್ಖೃತಿಯ ಪರಿಚಯ ಮಾಡುವುದಲ್ಲದೆ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ಸ್ಮರಣಶಕ್ತಿ, ಭೌದ್ಧಿಕ ಸಾಮಾರ್ಥ್ಯವನ್ನು ಅಭಿವೃದ್ದಿಪಡಿಸಲು ನವದೆಹಲಿ ಕೇಂದ್ರ ಸಂಸ್ಕೃತ ವಿದ್ಯಾಲಯ ನಡೆಸಿದ ಸಂಸ್ಕೃತ ಒಲಿಂಪಿಯಾಡ್ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿನಿ ಅಪೇಕ್ಷಾ ಕೆ.ಜೆ ಶೆಟ್ಟಿರವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕುಣಿತ ಭಜನೆ ವಿಜೇತರು:
ಶಾರದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ವಿದ್ಯಾರ್ಥಿಗಳ ಕುಣಿತ ಭಜನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ ಪಿಯುಸಿ ವಿಭಾಗ, ದ್ವಿತೀಯ ಸ್ಥಾನ ಗಳಿಸಿದ ಬಿಕಾಂ ವಿಭಾಗ, ತೃತೀಯ ಸ್ಥಾನ ಗಳಿಸಿದ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಬಹುಮಾನದೊಂದಿಗೆ ಆಶೀರ್ವಾದ ಪಡೆದುಕೊಂಡರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಭಾ ವೇದಿಕೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲುರವರ ತಂದೆ ನಾರಾಯಣ ಸಾಲ್ಯಾನ್ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮದ ಮೊದಲಿಗೆ ಆಗಮಿಸಿ ಶುಭ ಹಾರೈಸಿರುತ್ತಾರೆ. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ವಿಜಯ ಸಾಮ್ರಾಟ್ ಪ್ರತಿಷ್ಠಾನ ಅಧ್ಯಕ್ಷ ಸಹಜ್ ರೈ ಬಳೆಜ್ಜ, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುಂದರ ಗೌಡ, ಶಾರದಾಪೂಜಾ ಕಾರ್ಯಕ್ರಮದ ಸಂಯೋಜಕ ರಾಕೇಶ್ ಕೆ, ಅಕ್ಷಯ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರ್ಯ, ಅಕ್ಷಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹುವೈಸ್ ಮಿಸ್ಟ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿವೃಂದ ಸಹಿತ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಕ್ಷಯ ಪದವಿ ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅಭಿಲಾಷ್ ಕ್ಷತ್ರೀಯ ಸ್ವಾಗತಿಸಿ, ಸಂಸ್ಥೆಯ ಆಡಳಿತಾಧಿಕಾರಿ ಡಾ.ಅರ್ಪಿತ್ ಟಿ.ಎ ವಂದಿಸಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಅರ್ಪಿತ್ ಟಿ.ಎ, ಕಾರ್ಯದರ್ಶಿ ಡಾ.ಅಕ್ಷಯ್ ನಡುಬೈಲು, ಕೋಶಾಧಿಕಾರಿ ಅಂಚಿತ್ ನಡುಬೈಲು, ಮಂಗಳೂರು ಕೆರಿಯರ್ ಡೆಸ್ಟಿನಿಯ ಜಯಶ್ರೀ, ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸಂಸ್ಥೆಯ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ ಹಾಗೂ ಅಕ್ಷಯ ಕೆರಿಯರ್ ಅಕಾಡೆಮಿಯ ಭರತ್ ಕುಮಾರ್ ಓತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಗಮಿಸಿದ ಅತಿಥಿ ಗಣ್ಯರಿಗೆ ಭೋಜನ ಕಾರ್ಯಕ್ರಮ ಏರ್ಪಟ್ಟಿತು.

ಪೂರ್ಣಕುಂಭ ಸ್ವಾಗತ
ಕಾರ್ಯಕ್ರಮಕ್ಕೆ ಆಗಮಿಸಿದ ಕುಕ್ಕೆ ಶ್ರೀ ಸುಬ್ರಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿರವರನ್ನು ಚೆಂಡೆ-ವಾದ್ಯದೊದಿಗೆ, ಮಹಿಳೆಯರು ಪೂರ್ಣಕುಂಭದ ಸ್ವಾಗತದೊಂದಿಗೆ ಆದರದಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು, ಪತ್ನಿ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ರವರು ಸ್ವಾಮೀಜಿಯವರಿಗೆ ಹಾರಾರ್ಪಣೆ ಮಾಡುವ ಮೂಲಕ ಆಶೀರ್ವಾದ ಪಡೆದು ಸ್ವಾಗತಿಸಿದರು.
ಏನೆಲ್ಲ ಉದ್ಘಾಟಿಸಲಾಯಿತು.
*ನೂತನ ಸಭಾಂಗಣ, *ವಿವಿಧ ಪ್ರಯೋಗಾಲಯ, *ವಿದ್ಯಾರ್ಥಿನಿಲಯಗಳು, *ನಾಮ ಫಲಕ, *ಪಿಯುಸಿ ಪ್ರವೇಶ ದ್ವಾರ, *ಫ್ಯಾಷನ್ ಡಿಸೈನ್ ವಿಭಾಗ, *ವಸ್ತು/ವಸ್ತ್ರ/ಆಂತರಿಕ ವಿನ್ಯಾಸದ ಪ್ರದರ್ಶನ, *ಏವಿಯೇಷನ್ ಟ್ರೈನಿಂಗ್ ಸ್ಟುಡಿಯೋ, *ಇಂಟೀರಿಯರ್ ಡಿಸೈನ್ ವಿಭಾಗ, *ಬಿಕಾಂ ಜೊತೆ ಏವಿಯೇಶನ್ ವಿಭಾಗ, *ಬಿಸಿಎ ವಿಭಾಗ, *ಬಿ.ಎಚ್.ಎಸ್ ವಿಭಾಗ, *ಬಿ.ಎ ಜೊತೆ ಏವಿಯೇಶನ್ ವಿಭಾಗ, *ಏವಿಯೇಶನ್ ವಿಭಾಗ, *ಕೆರಿಯರ್ ಅಕಾಡೆಮಿ ವಿಭಾಗ, *ಅಕ್ಷವಿ ಲೋಗೊ, ಅಕ್ಷವಿ ಮಾಸಪತ್ರಿಕೆ, *ಅಕ್ಷವಿ ಯೂಟ್ಯೂಬ್ ಚಾನೆಲ್ ಹಿನ್ನೋಟ, ಅಕ್ಷವಿ ಯೂಟ್ಯೂಬ್ ಲೋಗೊ

ವಿದ್ಯಾರ್ಥಿಗಳ ಭವಿಷ್ಯವೇ ಸಂಸ್ಥೆಯ ಹಾರೈಕೆ.
ಕೋಳಿ ಉದ್ಯಮದ ಕೃಷಿಯಿಂದ ನಾನು ಈ ಶೈಕ್ಷಣಿಕ ಉದ್ಯಮಕ್ಕೆ ಬಂದೆ. ಅಂದಿನ 18 ವಿದ್ಯಾರ್ಥಿಗಳನ್ನೊಳಗೊಂಡ ಗ್ಲೋರಿಯ ಫ್ಯಾಶನ್ ಡಿಸೈನ್ ಸಂಸ್ಥೆಯನ್ನು 2019ರಲ್ಲಿ ಪಡೆದು ಅದನ್ನು ಅಕ್ಷಯ ಹೆಸರಿನಲ್ಲಿ ಸಂಪ್ಯದಲ್ಲಿ ತೆರೆದು ಶಾರದಾ ದೇವಿಯ ಆಶೀರ್ವಾದದಿಂದ, ಸ್ವಾಮೀಜಿಗಳ ಆಶೀರ್ವಾದದಿಂದ ಅಂದಿನಿಂದ ಇಲ್ಲಿವರೆಗೆ ಬೆಳೆಯುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯಿಂದ ಬಂದವರು. ನಾನೂ ಕೂಡ ಬಡತನದ ಹಿನ್ನೆಲೆಯಿಂದ ಬಂದಿದ್ದು ಬಡತನ ಏನೆಂಬುದು ನನಗೆ ತಿಳಿದಿದೆ. ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ವಿದ್ಯಾರ್ಥಿಗಳ ಭವಿಷ್ಯ ಒಳ್ಳೆಯದಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.
-ಜಯಂತ್ ನಡುಬೈಲು, ಅಧ್ಯಕ್ಷರು, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು










