







ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು :ರಾಜೇಶ ಪದ್ಮಾರ್


ಪುತ್ತೂರು: ವಂದೇ ಮಾತರಂ ಗೀತೆಯೂ ಏಕತೆಯನ್ನು ಸಾರುವುದರ ಜೊತೆಗೆ ಜನರಲ್ಲಿ ಪ್ರೇರಣೆಯನ್ನು ಮೂಡಿಸುತ್ತದೆ. ಇದರ ನಿರ್ಮಾತೃ ಬಂಕಿಮ ಚಂದ್ರಚಟರ್ಜಿ. ಯಾವುದೇ ಜಾತಿ, ಬೇಧವಿಲ್ಲದೆ ರೂಪಿಸಿದ ಈ ವಂದೇ ಮಾತರಂ ಗೀತೆಯು ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಬಂಗಾಳ ವಿಭಜನೆಯ ವಿರೋಧವಾಗಿ ವಂಗ ಭಂಗ ಚಳವಳಿಯ ಧ್ಯೇಯಗೀತೆಯಾಗಿ ಮೂಡಿಬಂದ ಗೀತೆಯಿದು. ಕೊಲ್ಕತ್ತಾದಿಂದ ಹೊರಟ ಹೋರಾಟದ ಗೀತೆ ವಿಶ್ವಾದ್ಯಂತ ವ್ಯಾಪಿಸಿತು ಮತ್ತು ಯುಗಾಂತರ ಸಂಘಟನೆಯ ಆರಂಭಕ್ಕೆ ಮುಂದಡಿಯಿಟ್ಟಿತು. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಈ ಜಯಘೋಷವನ್ನು ಕೂಗಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಹೇಳಿದರು.



ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರಅಧ್ಯಯನ ಹಾಗೂ ಸಂಶೋಧನಾಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಅ.15ರಂದು ನಡೆದ ವಂದೇ ಮಾತರಂ150ನೇ ವರ್ಷದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಸಮಾಜದ ಪ್ರತಿಯೊಂದು ಸ್ಥರಗಳಲ್ಲೂ ವಂದೇ ಮಾತರಂ ಕುರಿತು ಜಾಗೃತಿ ಮೂಡಬೇಕು. ವಂದೇ ಮಾತರಂ ಕುರಿತ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನುರಾಷ್ಟ್ರೀಯತೆಯೆಡೆಗೆ ಎಚ್ಚರಿಸುವ ಕಾರ್ಯ ಇದು ಎಂದರು.
ಸಮಾರಂಭದ ಬಳಿಕ ವಿದ್ಯಾರ್ಥಿಗಳು ಒಕ್ಕೊರಲಿನಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಶೇಷ ಅಧಿಕಾರಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿ, ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ದೀಕ್ಷಾಜೆ.ರೈ ನಿರೂಪಿಸಿದರು.










