







ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಡ್ಡಪರಿಣಾಮಗಳು ಲೆಕ್ಕಕ್ಕೆ ಸಿಗದಷ್ಟು ಗೋಚರಿಸುತ್ತಿದ್ದಂತೆಯೇ ಉಪ್ಪಿನಂಗಡಿ ಪೇಟೆಯ ಪ್ರವೇಶ ದ್ವಾರದಲ್ಲೇ ಹೆದ್ದಾರಿಯ ಪಾರ್ಶ್ವದಲ್ಲಿ ನಿರ್ಮಿಸಲಾದ ಚರಂಡಿಯ ಅವೈಜ್ಞಾನಿಕತೆಯಿಂದಾಗಿ ಮಳೆ ಬಂದಾಗ ಹೆದ್ದಾರಿಯಿಂದ ಇನ್ನೂರು ಮೀಟರ್ ದೂರವಿರುವ ಅಂಗಡಿ ಮುಂಗಟ್ಟುಗಳ ಎದುರುಗಡೆ ಜಲಾವೃತಗೊಂಡು ವ್ಯಾಪಾರ ವಹಿವಾಟು ಮಾಡಲಾಗದ ಸಂಕಷ್ಟ ಸ್ಥಿತಿಗೆ ತಲುಪುತ್ತಿದೆ.


ಹೆದ್ದಾರಿ ವಿಸ್ತರಣೆಯ ನಿಮಿತ್ತ ಉಪ್ಪಿನಂಗಡಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣಕ್ಕೂ ಮೊದಲೇ ಚರಂಡಿಯ ನಿರ್ಮಾಣವಾಗಿತ್ತು. ಈಗ ರಸ್ತೆಗಿಂತ ಎತ್ತರದಲ್ಲಿ ಚರಂಡಿ ನಿರ್ಮಾಣವಾದಂತಾಗಿ ರಸ್ತೆಯ ನೀರು ಚರಂಡಿಗೆ ಹರಿಯುತ್ತಿಲ್ಲ. ಬದಲಾಗಿ ರಸ್ತೆಯಲ್ಲಿಯೇ ಹರಿದು ತಗ್ಗು ಪ್ರದೇಶವಾದ ಉಪ್ಪಿನಂಗಡಿ ಪೇಟೆಯ ರಸ್ತೆಯಲ್ಲಿ ಸಾಗಿ ಶೆಣೈ ಆಸ್ಪತ್ರೆ ರಸ್ತೆಯ ಪಾರ್ಶ್ವದಲ್ಲಿ ಸಂಗ್ರಹಗೊಳ್ಳುತ್ತಿದೆ. ಈ ಭಾಗದ ಪಂಚಾಯತ್ ಚರಂಡಿಯಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯದೇ ಪ್ರದೇಶವನ್ನು ಜಲಾವೃತಗೊಳಿಸಿದೆ. ಶುಕ್ರವಾರ ಮುಂಜಾನೆವರೆಗೆ ಸುರಿದ ಮಳೆಯಿಂದಾಗಿ ಈ ಭಾಗದಲ್ಲಿ ಕೃತಕ ನೆರೆ ಸಂಭವಿಸಿದ್ದು ಅಂಗಡಿ ತೆರೆದರೂ ಗ್ರಾಹಕರು ಬಾರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಪೇಟೆಯ ಹೃದಯಭಾಗದಲ್ಲಿಯೇ ಈ ಸ್ವರೂಪದ ಸಮಸ್ಯೆ ಎದುರಾದರೂ ಸ್ಥಳೀಯಾಡಳಿತ ಮತ್ತು ಹೆದ್ದಾರಿ ಇಲಾಖಾಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ಖೇದಕರ ಎಂದು ಚಿನ್ನಾಭರಣ ಅಂಗಡಿ ಮಾಲಕ ಕಿಶೋರ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.













