







ನಿರಂತರವಾದ ಕಲಿಕೆಯೇ ಸಂಗೀತದ ಸಾಧನೆ: ವಿದುಷಿ ಸ್ವರ್ಣ ಎನ್.ಭಟ್


ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಸಭಾಭವನದಲ್ಲಿ ಡಾ. ಅನುಪಮಾ ರವಿ.ಡಿ ಅವರ ಮಾರ್ಗದರ್ಶನದ ಉಳ್ಳಾಲ್ತಿ ಸಂಗೀತ ಶಾಲೆಯ ಉದ್ಘಾಟನೆ ನೆರವೇರಿತು.



ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಗೀತ ಗುರು ವಿದುಷಿ ಸ್ವರ್ಣ ಎನ್.ಭಟ್ ಮಾತನಾಡಿ ಒಬ್ಬ ಶಿಷ್ಯ ತಾನು ಪಡೆದ ವಿದ್ಯೆಯನ್ನು ಇತರರಿಗೂ ಬೋಧಿಸಿ ಗುರುಸ್ಥಾನಕ್ಕೇರಿದಾಗ ಗುರುವಾದವನಿಗೆ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆ ಹಾಗೂ ಗುರುವಿನ ಆಶಿರ್ವಾದ ಅತ್ಯಗತ್ಯ. ಸಂಗೀತವೆಂದರೆ ಕೇವಲ ಕಲೆಯಷ್ಟೇ ಅಲ್ಲ, ಅದು ಮನಸ್ಸಿಗೆ ಆನಂದ, ನೆಮ್ಮದಿ ಹಾಗೂ ಪ್ರಶಾಂತತೆ ದೊರಕಲು ಒಂದು ಉತ್ತಮ ಮಾರ್ಗವೂ ಹೌದು. ಕಲಿಕಾರ್ಥಿಗಳು ಆಸಕ್ತಿ ಹಾಗೂ ಶ್ರದ್ಧೆಯಿಂದ ಸಂಗೀತವನ್ನು ಕಲಿತು ಪ್ರತಿಭಾಸಂಪನ್ನರಾಗಲಿ ಎಂದು ಆಶಿಸಿದರು.
ಬಲ್ನಾಡು ಗ್ರಾಮದ ಹಿರಿಯ ಧುರೀಣ, ಹಿರಿಯ ಪಶುವೈದ್ಯ ಡಾ. ಎಂ ಸದಾಶಿವ ಭಟ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಸಾಂಸ್ಕೃತಿಕವಾದ ಕಲೆಗಳು, ಕಾರ್ಯಚಟುವಟಿಕೆಗಳು ಒಂದು ಪ್ರದೇಶದ ಅಭಿವೃದ್ಧಿಗೆ ಅತ್ಯಗತ್ಯವಾಗಿರುತ್ತದೆ. ಸಂಗೀತದ ಧನಾತ್ಮಕ ಪರಿಣಾಮಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ವಿದೇಶೀಯರು ಕೂಡಾ ಇದರ ಪ್ರಭಾವವನ್ನು ಕಂಡುಕೊಂಡಿದ್ದಾರೆ. ಅಂತಹಾ ಸಂಗೀತವನ್ನು ಹಾಗೂ ಲಲಿತಕಲೆಗಳನ್ನು ಬೋಧಿಸುವ ಕಲಾಶಾಲೆಗಳು ಪ್ರತಿಯೊಂದು ಪ್ರದೇಶದಲ್ಲೂ ಸ್ಥಾಪನೆಯಾಗಿ ಪ್ರಗತಿ ಕಾಣಬೇಕು ಎಂದು ನುಡಿದರು.
ಸಂಗೀತ ಗುರು ಡಾ. ಅನುಪಮಾ ರವಿ.ಡಿ ಮಾತನಾಡಿ ಸಂಗೀತವೆಂಬುದು ಕಬ್ಬಿಣದ ಕಡಲೆ ಎಂದು ಭಾವಿಸದೇ ಆಸಕ್ತಿಯಿಂದ ಕಲಿಯಬೇಕು. ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿ ತಳಪಾಯವನ್ನು ಭದ್ರಪಡಿಸಿಕೊಂಡು ನಂತರ ಬೇರೆ ಪ್ರಕಾರದ ಗಾಯನ ಕ್ರಮಗಳನ್ನು ಕಲಿಯುವುದು ಸೂಕ್ತ. ನಮಗೆ ವಿವಿಧ ಸಂದರ್ಭಗಳಲ್ಲಿ, ಅನೇಕ ಅವಕಾಶಗಳು ಲಭ್ಯವಾದಾಗ ಗಾಯನದ ಪ್ರತಿಭೆಯನ್ನು ಪ್ರದರ್ಶಿಸಬಹುದು ಎಂದು ತಿಳಿಸಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದ ಹಿನ್ನೆಲೆ, ಇತ್ಯಾದಿ ವಿಷಯಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡರು.
ಡಾ. ಅನುಪಮಾ ರವಿ.ಡಿ ಅವರ ತಾಯಿ ಪರಮೇಶ್ವರೀ ಅಮ್ಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ಬಲ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ದುರ್ಗಾಶ್ರೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ ಮತ್ತು ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನ,ಭಟ್ಟಿವಿನಾಯಕ ದೇವಸ್ಥಾನ ಮತ್ತು ವನಶಾಸ್ತಾರ ಸಾನಿಧ್ಯಗಳ ಕಛೇರಿಯ ವ್ಯವಸ್ಥಾಪಕ ಚಂದ್ರಶೇಖರ ಭಟ್ ನೆಕ್ಕರೆ ಮಾತನಾಡಿ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಪಾರ್ವತಿ ಜಿ. ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ. ಅನುಪಮಾ ರವಿ.ಡಿ ಅವರ ಪತಿ,ವಿವಿಧ್ ಸೋಲಾರ್ ಎನರ್ಜಿ ಸಂಸ್ಥೆಯ ಮಾಲಕ ರವಿಕೃಷ್ಣ ಭಟ್. ಡಿ ಸ್ವಾಗತಿಸಿ ನಿರೂಪಿಸಿದರು. ಡಾ. ಅನುಪಮಾ ರವಿ.ಡಿ ವಂದಿಸಿದರು. ಈ ಸಂದರ್ಭದಲ್ಲಿ ಸಂಗೀತದ ವಿದ್ಯಾರ್ಥಿಗಳಿಗೆ ಪಾಠಾರಂಭ ನಡೆಯಿತು.










