







ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ 4.71 ಎಕ್ರೆ ಆಸ್ತಿ ಕಬಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಆರೋಪಿಗೆ ಪುತ್ತೂರಿನ ASCJ ಮತ್ತು JMFC ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಪ್ರಕರಣದಲ್ಲಿ 1ನೇ ಆರೋಪಿಯಾಗಿರುವ ರುಕ್ಮಯ್ಯ ಗೌಡ, ಎರಡನೇ ಆರೋಪಿಯಾಗಿರುವ ರುಕ್ಮಯ್ಯ ಗೌಡ ಅವರ ಪತ್ನಿ ಮಹಾಲಕ್ಷ್ಮಿ ಮತ್ತು ಮೂರನೇ ಆರೋಪಿಯಾಗಿರುವ ಆಕೆಯ ಅಣ್ಣ ಶಿವರಾಮ ಗೌಡ ಪಿತೂರಿ ನಡೆಸಿ ಈ ಕೃತ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಈ ಪೈಕಿ ರುಕ್ಮಯ್ಯ ಗೌಡ ಮತ್ತು ಶಿವರಾಮ ಗೌಡ ಮೃತಪಟ್ಟಿರುವುದರಿಂದ ಮಹಾಲಕ್ಷ್ಮಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.



ಏನಾಗಿತ್ತು ಪ್ರಕರಣ?:
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಸರ್ವೆ ನಂಬರ್ 220-1B, 241/2A1B, 241/4A2, 241/4B, 243/2B1, 491/2 ರಲ್ಲಿನ ಒಟ್ಟು 4.71 ಎಕ್ರೆ ಆಸ್ತಿ ಬೆಂಗಳೂರಿನಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಶೇಷಪ್ಪ ಗೌಡ ಅವರಿಗೆ ಸೇರಿದ್ದಾಗಿತ್ತು. ಈ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪಿಗಳು ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. 2ನೇ ಆರೋಪಿ ಮಹಾಲಕ್ಷ್ಮಿ ತಾನೇ ‘ಮಾನಕ್ಕ’ ಎಂಬಂತೆ ಮತ್ತು 3ನೇ ಆರೋಪಿ ಶಿವರಾಮ ಗೌಡ ತಾನೇ ‘ಶೇಷಪ್ಪ ಗೌಡ’ ಎಂಬಂತೆ ನಟಿಸಿ ಖೋಟಾ ಸಹಿ ಮತ್ತು ದಾಖಲೆಗಳ ಮೂಲಕ ಆಸ್ತಿಯನ್ನು 1ನೇ ಆರೋಪಿ ರುಕ್ಮಯ್ಯ ಗೌಡ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2009ನೇ ಇಸವಿಯಲ್ಲಿ 416, 417, 419, 464, 468, 420 R/w 34 IPC ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಶೇಷಪ್ಪ ಗೌಡ ಅವರ ದೂರಿನಂತೆ ಪ್ರಕರಣ ದಾಖಲಿಸಿದ ಬಳಿಕ ವಿಚಾರಣೆ ನಡೆಸಿದ್ದ ಆಗಿನ ಎಸ್ಐ ಆನಂದ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ತೀರ್ಪು ಪ್ರಕಟ:
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್. ಅವರು 2ನೇ ಆರೋಪಿ ಮಹಾಲಕ್ಷ್ಮಿ ಅಪರಾಧಿ ಎಂದು ಪರಿಗಣಿಸಿ IPC ಸೆಕ್ಷನ್ 419ರಡಿ 2 ವರ್ಷ ಸಾದಾ ಜೈಲು ಮತ್ತು 5,000 ರೂ. ದಂಡ ಹಾಗೂ IPC ಸೆಕ್ಷನ್ 468ರಡಿ 3 ವರ್ಷ ಸಾದಾ ಜೈಲು ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದ ಮಂಡಿಸಿದ್ದರು.










