







ಪುತ್ತೂರು:ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಅ. 18ರಂದು ಶ್ರೀ ದುರ್ಗಾನಮಸ್ಕಾರ ಪೂಜೆ ಹಾಗೂ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿದವು.


ಧಾರ್ಮಿಕ ಹಾಗೂ ಭಜನಾ ಸೇವೆ:



ಸಂಜೆ ವೇದಮೂರ್ತಿ ಕೃಷ್ಣಕುಮಾರ ಉಪಾಧ್ಯಾಯ ಪಟ್ಲಮೂಲೆ ಅವರ ನೇತೃತ್ವದಲ್ಲಿ ಅರ್ಚಕ ರವಿರಾಮ ಭಟ್ ರವರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ ಶ್ರದ್ಧಾಭಕ್ತಿಗಳಿಂದ ಜರುಗಿತು. ಈ ಸಂದರ್ಭದಲ್ಲಿ ಉಷಾ ಗಂಗಾಧರ ರೈ ಕೆರೆಮೂಲೆ ಅವರಿಂದ ಭಜನಾ ಸೇವೆ ಹಾಗೂ ಕ್ಷೇತ್ರದ ಶ್ರೀರಾಮ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಮೂಡಿಬಂತು. ಇದೇ ವೇಳೆ ನವರಾತ್ರಿ ಹಬ್ಬದ ವಿಶೇಷವಾಗಿ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಊರ ಹಾಗೂ ಪರಊರಿನ ನೂರಾರು ಭಕ್ತಾದಿಗಳು ಆಗಮಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿದರು. ರಾತ್ರಿ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ, ಭಜನಾ ಸಮಿತಿಯ ಪದಾಧಿಕಾರಿಗಳು ಹಾಗೂ 129 ಮನೆಯ ಭಜನಾ ಸೇವಾರ್ಥಿಗಳು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ನವರಾತ್ರಿ ಸಮಾರೋಪ: ಅ. 19ರಂದು ಕಡಮಜಲು ಸುಭಾಷ್ ರೈ ಅವರ ಭಜನಾ ಸೇವೆ ಹಾಗೂ ಶ್ರೀ ದೇವತಾ ಭಜನಾ ಮಂಡಳಿ ದೇವಗಿರಿ ತಿಂಗಳಾಡಿ ಅವರಿಂದ ಭಜನೆ ನಡೆಯಲಿದೆ. ರಾತ್ರಿ ಗಂಟೆ 8:30 ರಿಂದ ‘ನವರಾತ್ರಿ ಉತ್ಸವದ ಸಮಾರೋಪ’ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ ಅಧ್ಯಕ್ಷತೆ ವಹಿಸಲಿದ್ದು, ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೇತ್ತಾಯ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ವಿದ್ಯಾ ಲಿಂಗಪ್ಪ, ಕೆಯ್ಯೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಮಾಯಿಲು ಮುದರ ಕೋರಂಗ, ಗಿರಿಜ ಮಾಂಕು ಕೋರಂಗ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಯುವರಂಗದ ಸದಸ್ಯರಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.










