







ನಮ್ಮ ಸಂಸ್ಕ್ರತಿಯ ಉದ್ದಾರಕ್ಕಾಗಿ ಹಿಂದೂ ಕೌಟುಂಬಿಕ ಪದ್ದತಿ ಪಾಲಿಸ ಬೇಕು- ರವೀಶ ತಂತ್ರಿ


ನಿಡ್ಪಳ್ಳಿ: ಧರ್ಮಾಭ್ಯುದಯ ಧರ್ಮ ಶಿಕ್ಷಣ ಸಮಿತಿ ಪಾಣಾಜೆ ಇದರ ವತಿಯಿಂದ ಧರ್ಮ ಶಿಕ್ಷಣ ತರಗತಿಗೆ ಅ.18 ರಂದು ಚಾಲನೆ ನೀಡಲಾಯಿತು.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಜ್ಯೋತಿ ಬೆಳಗಿಸಿ ತರಗತಿ ಉದ್ಘಾಟಿಸಿ ಧರ್ಮ ಮತ್ತು ಜೀವನದ ಕುರಿತು ಮಾತನಾಡಿ ನಮ್ಮ ಸಂಸ್ಕೃತಿಯ ಉದ್ಧಾರಕ್ಕಾಗಿ ಹಿಂದೂ ಕೌಟುಂಬಿಕ ಪದ್ಧತಿ ಮತ್ತು ಸಂಪ್ರದಾಯಗಳನ್ನು ಯಾವ ರೀತಿಯಲ್ಲಿ ಪಾಲಿಸಬೇಕು ಎಂದು ವಿವರಿಸಿದರು. ಅವಿಭಕ್ತ ಕುಟುಂಬದ ಮಹತ್ವವನ್ನು ತಿಳಿಸಿದ ಅವರು ಇಂದಿನ ಪೀಳಿಗೆಯವರು ಮದುವೆಯ ನಂತರ ಅತ್ತೆ-ಮಾವಂದಿರೊಂದಿಗೆ ಹೊಂದಿಕೊಳ್ಳಲು ಹಿಂಜರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಂತರ ಮಕ್ಕಳಿಗೆ ‘ಗಣಪತಿ ಸ್ತೋತ್ರ’ವನ್ನು ಹೇಳಿಕೊಡುವ ಮೂಲಕ ಆಶೀರ್ವದಿಸಿದರು.



ಗೌರವ ಉಪಸ್ಥಿತರಿದ್ದ ಪುತ್ತೂರು ತಾಲೂಕು ಧರ್ಮಶಿಕ್ಷಣ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ದಿಕ್ಸೂಚಿ ಭಾಷಣ ಮಾಡಿ ಬೇಗ ಏಳುವುದರಿಂದ ಮೆದುಳು ಕಲಿಕೆಯ ಪ್ರಕ್ರಿಯೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ತಿಳಿಸಿದರು. ಇಸ್ಲಾಂ ಧರ್ಮದಲ್ಲಿ ಮಕ್ಕಳು ಸಹಜವಾಗಿಯೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಧಾರ್ಮಿಕ ತರಗತಿಗಳಲ್ಲಿ ಪಾಲ್ಗೊಳ್ಳುವ ಉದಾಹರಣೆ ನೀಡಿದ ಅವರು ವಾರಕ್ಕೊಮ್ಮೆ ಬೆಳಿಗ್ಗೆ ಬೇಗ ನಡೆಯುವ ಈ ಧರ್ಮ ಶಿಕ್ಷಣ ತರಗತಿಗಳಿಗೆ ಮಕ್ಕಳನ್ನು ನಾವು ಹೇಗೆ ಪ್ರೇರೇಪಿಸಬೇಕು ಎಂಬ ಬಗ್ಗೆ ಪೋಷಕರಿಗೆ ಕಿವಿ ಮಾತು ಹೇಳಿದರು.
ರಣಮಂಗಲ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಾಣಿ ಬೈಂಕ್ರೋಡ್ ಪ್ರಾರ್ಥಿಸಿ, ಪಾಣಾಜೆ ಗ್ರಾಮ ಸಮಿತಿಯ ಅಧ್ಯಕ್ಷ ಜಯರಾಮ ರೈ ಚಂಬರಕಟ್ಟ ಸ್ವಾಗತಿಸಿದರು. ಭರತ್ ಭರಣ್ಯ ವಂದಿಸಿದರು.ಪ್ರದೀಪ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಅಧ್ಯಕ್ಷ ಜಯರಾಮ್ ರೈ, ಕಾರ್ಯದರ್ಶಿ ಭರತ್ ಭರಣ್ಯ,ಸಂಚಾಲಕ ನಾರಾಯಣ ಪ್ರಕಾಶ್, ಉಪಾಧ್ಯಕ್ಷರಾದ ಪುಷ್ಪಾವತಿ ರಘುನಾಥ ಪಾಟಾಳಿ ಕೋಶಾಧಿಕಾರಿ ಬಾಬು ರೈ ಕೋಟೆ ಮತ್ತು ಶಿಕ್ಷಕ ಪ್ರಮುಖರಾದ ಡಾ. ಅಖಿಲೇಶ್ ಪಿ. ಎಂ.ಸಹಕರಿಸಿದರು.
ಒಟ್ಟು 52 ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕಿ ಶ್ರೀಮತಿ ವೃಕ್ಷವಲ್ಲಿ ಅವರು ಮಕ್ಕಳಿಗೆ ಕುಂಕುಮ ತಿಲಕವನ್ನಿಟ್ಟು ಬರಮಾಡಿಕೊಂಡರು.ಮೊದಲ ದಿನ ಪಠ್ಯಕ್ರಮದ ಭಾಗವಾಗಿ ಮಕ್ಕಳು ಶ್ಲೋಕಗಳನ್ನು ಪಠಿಸಿದರು, ಕಥೆಗಳನ್ನು ಆಲಿಸಿದರು ಮತ್ತು ನಿಯಮಬದ್ಧ ಆಟಗಳನ್ನು ಆಡಿಸಲಾಯಿತು.ಈ ತರಗತಿಗಳು ನಿಯಮಿತವಾಗಿ ಪ್ರತಿ ಭಾನುವಾರ ಬೆಳಿಗ್ಗೆ 7:00 ರಿಂದ 9:00 ರವರೆಗೆ ನಡೆಯಲಿದ್ದು, ತರಗತಿಯ ನಂತರ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಇರಲಿದೆ ಎಂದು ಸಮಿತಿ ತಿಳಿಸಿದೆ.










