ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ನವರಾತ್ರಿ ಉತ್ಸವ ಸಂಪನ್ನ

0

ಧಾರ್ಮಿಕ ಸಭೆ, ಮಂದಿರದ ಸ್ವಚ್ಛತಾ ಕಾರ್ಯದವರಿಗೆ ಗೌರವಾರ್ಪಣೆ
ಇಲ್ಲಿನ ಅಭಿವೃದ್ಧಿಗಳೇ ದೇವರ ಕಾರಣಿಕತೆಯನ್ನು ತೋರಿಸುತ್ತದೆ : ನನ್ಯ ಅಚ್ಚುತ ಮೂಡೆತ್ತಾಯ

ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಭಕ್ತರಿಗೆ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಮಂದಿರ, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ವಿಶೇಷ ಶಕ್ತಿಯನ್ನು ಹೊಂದಿರುವ ಕ್ಷೇತ್ರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ 9 ದಿನಗಳ ಕಾಲ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರಗಿದ ನವರಾತ್ರಿ ಉತ್ಸವದ ಸಮಾರೋಪ ಸಮಾರೋಪ ಅ.19 ರಂದು ಜರಗಿತು.ಅ.11 ರಿಂದ ಆರಂಭಗೊಂಡ ನವರಾತ್ರಿ ಉತ್ಸವದಲ್ಲಿ ಪ್ರತಿ ದಿನ ರಾತ್ರಿ ಭಕ್ತಾಧಿಗಳಿಂದ ಭಜನಾ ಸೇವೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಇದಲ್ಲದೆ ಪ್ರತಿದಿನವೂ ವಿಶೇಷ ಅನ್ನಸಂತರ್ಪಣೆ ನಡೆಯಿತು. ಪ್ರತಿ ದಿನ ವಿವಿಧ ಕಲಾ ತಂಡಗಳಿಂದ ನೃತ್ಯ,ಯಕ್ಷಗಾನ ತಾಳಮದ್ದಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.ಪ್ರತಿದಿನವೂ ಊರಪರವೂರ ನೂರಾರು ಭಕ್ತರು ಅಗಮಿಸಿ ಶ್ರೀದೇವರ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.

ಅ.19 ರಂದು ಕಡಮಜಲು ಸುಭಾಷ್ ರೈಯವರ ಭಜನಾ ಸೇವೆ ಹಾಗೇ ತಿಂಗಳಾಡಿ ದೇವಗಿರಿ ಶ್ರೀ ದೇವತಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನವರಾತ್ರಿ ಉತ್ಸವದ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಹನುಮಗರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ, ದೇವನೊಲಿದರೆ ಕೊರಡು ಕೊನರುವುದಯ್ಯ ಎಂಬ ಮಾತಿನಂತೆ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಶ್ರೀರಾಮಚಂದ್ರ ದೇವರ ಕಾರಣಿಕತೆ ಇದೆ ಎಂಬುದಕ್ಕೆ ಇಲ್ಲಿ ನಡೆದುಕೊಂಡು ಬಂದಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿದೆ. ಇಲ್ಲಿಗೆ ಬಂದಾಗ ಮನಸ್ಸಿಗೆ ಅದೆನೋ ಒಂದು ರೀತಿಯ ಉಲ್ಲಾಸ ಬರುತ್ತದೆ. ಇಲ್ಲಿನ ಇತಿಹಾಸವನ್ನು ಗಮನಿಸುತ್ತಾ ಹೋದರೆ ಸದ್ಗುರು ಡಾ.ಎಸ್.ಆರ್.ಗೋಪಾಲನ್ ನಾಯರ್ ಅವರು ಆಶೀರ್ವಾದದಿಂದ ಇಲ್ಲಿ ಮಂದಿರ ನಿರ್ಮಾಣ ಆಗಿದೆ ಎಂಬುದು ತಿಳಿದುಬರುತ್ತದೆ ಖಂಡಿತವಾಗಿಯೂ ಇಲ್ಲಿ ಸದ್ಗುರುಗಳ ಆ ಕಾರಣಿಕ ಶಕ್ತಿಯೂ ಇದೆ ಎಂಬುದು ಅರಿವಿಗೆ ಬರುತ್ತದೆ ಎಂದು ಹೇಳಿದ ನನ್ಯ ಅಚ್ಚುತ ಮೂಡೆತ್ತಾಯರವರು ಮುಂದಿನ ತಿಂಗಳಲ್ಲಿ ನಡೆದ 48 ದಿನಗಳ ಭಜನಾ ಸಂಕೀರ್ತನೆ ಹಾಗೇ ಸದ್ಗುರುಗಳ 125 ನೇ ಜನ್ಮ ದಿನಾಚರಣೆ, ಭಜನಾ ಮಂಡಳಿಯ 75 ವರ್ಷಗಳ ಸಂಭ್ರಮಾಚರಣೆ ಎಲ್ಲವೂ ನಿರ್ವಿಘ್ನವಾಗಿ ನಡೆಯಲಿ ಎಲ್ಲರಿಗೂ ಶ್ರೀರಾಮಚಂದ್ರ ದೇವರು ಒಳಿತನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆಯವರು ಮಾತನಾಡಿ, ಶ್ರೀ ಕ್ಷೇತ್ರದ ಆರಾಧ್ಯಮೂರ್ತಿ ಭಗವಾನ್ ಶ್ರೀರಾಮಚಂದ್ರ ದೇವರ ಅನುಗ್ರಹ ಹಾಗೇ ಸಮಸ್ತ ಭಕ್ತಾಧಿಗಳ ಸಹಕಾರದಿಂದ ನವರಾತ್ರಿ ಉತ್ಸವವು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.ಸಹಕರಿಸಿದ ಸಮಸ್ತ ಭಕ್ತಜನತೆಗೆ, ಭಜನಾ ತಂಡಗಳಿಗೆ ಹಾಗೇ ಭಜನಾ ಸೇವಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುವಂತೆ ಕೇಳಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ವಿದ್ಯಾ ಲಿಂಗಪ್ಪ ಮಾತನಾಡಿ, ನವರಾತ್ರಿ ಈ ಶುಭ ಸಂದರ್ಭದಲ್ಲಿ ನಮಗೆಲ್ಲರಿಗೂ ಒಳ್ಳೆಯ ಆರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸು ಎಂದು ಶ್ರೀದೇವಿಯಲ್ಲಿ ಕೇಳಿಕೊಳ್ಳೋಣ ಎಂದು ತಾಯಿಯು ನಮಗೆಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀರಾಮ ಮಂದಿರದ ಆಡಳಿತ ಮಂಡಳಿಯ ಉಪಾಧ್ಯಕ್ಷ ಲಿಖಿತ್ ಗೌಡ ಇದ್ಯಪೆ, ಭಜನಾ ಮಂಡಳಿಯ ಕಾರ್ಯದರ್ಶಿ ನಿತೇಶ್ ರೈ ಕೋರಂಗ ಉಪಸ್ಥಿತರಿದ್ದರು. ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಆಡಳಿತ ಮಂಡಳಿ ಸಮಿತಿ ಸದಸ್ಯ ಐ.ಸಿ ಕೈಲಾಸ್ ಗೌಡ ಇದ್ಯಪೆ, ಜಯಂತಿ ಆರ್.ರೈ ಅತಿಥಿಗಳಿಗೆ ಶಾಲು ನೀಡಿ ಸ್ವಾಗತಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ ವಂದಿಸಿದರು. ಜೈದೀಪ್ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯುವರಂಗದ ಸದಸ್ಯರಿಂದ ಮತ್ತು ಊರವರಿಂದ ಕಾರ್ಯಕ್ರಮ ವೈವಿಧ್ಯ ಮನರಂಜಿಸಿತು. ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಪ್ರಧಾನ ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವ, ಉಪಾಧ್ಯಕ್ಷ ಲಿಖಿತ್ ಗೌಡ ಇದ್ಯಪೆ, ಜತೆ ಕಾರ್ಯದರ್ಶಿ ಚಂದ್ರ ನಲಿಕೆ ಇದ್ಪಾಡಿ, ಗೌರವ ಸಲಹೆಗಾರರಾದ ರಾಜೀವ ರೈ ಕೋರಂಗ, ಶಿವರಾಮ ಗೌಡ ಇದ್ಯಪೆ, ಪುಷ್ಪಾವತಿ ಶೀನಪ್ಪ ಗೌಡ, ಅರಿಯಡ್ಕ ಕರುಣಾಕರ ರೈ ಅತ್ರೆಜಾಲು, ವಿಜಯ ಕುಮಾರ್ ರೈ ಕೋರಂಗ ಹಾಗೂ ಸಮಿತಿ ಸದಸ್ಯರುಗಳು, ಭಜನಾ ಸಮಿತಿಯ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ ಹಾಗೂ ಸಮಿತಿ ಸದಸ್ಯರುಗಳು ಹಾಗೂ 129 ಮನೆಯ ಭಜನಾ ಸೇವಾರ್ಥಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

ಮಂದಿರದ ಸ್ವಚ್ಛತಾ ಕಾರ್ಯದವರಿಗೆ ಗೌರವ ಅರ್ಪಣೆ
ಕಳೆದ 15 ವರ್ಷಗಳಿಂದ ಶ್ರೀರಾಮ ಮಂದಿರದ ಸ್ವಚ್ಚತಾ ಕಾರ್ಯವನ್ನು ಮಾಡಿ ನಿವೃತ್ತಿಗೊಂಡ ಇಬ್ಬರನ್ನು ಈ ವರ್ಷದ ನವರಾತ್ರಿ ಸಂದರ್ಭದಲ್ಲಿ ಗೌರವಿಸಲಾಯಿತು. ಮಾಯಿಲು ಮುದರ ಕೋರಂಗ ಮತ್ತು ಗಿರಿಜ ಮಾಂಕು ಕೋರಂಗರವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಇಬ್ಬರು ಕಳೆದ 15 ವರ್ಷಗಳಿಂದ ಮಂದಿರದ ಸ್ವಚ್ಛತಾ ಕಾರ್ಯವನ್ನು ಮಾಡುವ ಮೂಲಕ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವರನ್ನು ಆಡಳಿತ ಸಮಿತಿಯಿಂದ ಗುರುತಿಸಿ ಗೌರವಿಸಿದ್ದು ನವರಾತ್ರಿಯ ವಿಶೇಷವಾಗಿತ್ತು.

6 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ
9 ದಿನಗಳ ಕಾಲ ಪ್ರತಿದಿನ ರಾತ್ರಿ 9 ಗಂಟೆಗೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಊರಪರವೂರ 6 ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು. ಅನ್ನಸಂತರ್ಪಣೆಯಲ್ಲಿ ಪಾಯಸ ಸೇರಿದಂತೆ ಪ್ರತಿದಿನವೂ ವಿವಿಧ ಖಾದ್ಯಗಳು ಒಳಗೊಂಡಿತ್ತು.


ಭಜನೆ, ಸಾಂಸ್ಕೃತಿಕ ಸಂಭ್ರಮ
ಪ್ರತಿದಿನವೂ ರಾತ್ರಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೇ ಪ್ರತಿದಿನ ಒಬ್ಬರ ಭಜನಾ ಸೇವೆ ನಡೆಯಿತು. ಇದಲ್ಲದೆ ಶ್ರೀ ದುರ್ಗಾನಮಸ್ಕಾರ ಪೂಜೆ, ಸಾಮೂಹಿಕ ಆಯುಧ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರತಿದಿನ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


ಭಗವಾನ್ ಶ್ರೀರಾಮಚಂದ್ರ ದೇವರ ಅನುಗ್ರಹ, ಆಡಳಿತ ಮಂಡಳಿ, ಭಜನಾ ಸಮಿತಿ ಹಾಗೇ ಊರಪರವೂರ ಭಕ್ತಾಧಿಗಳ ಸಹಕಾರದೊಂದಿಗೆ 9 ದಿನಗಳ ನವರಾತ್ರಿ ಉತ್ಸವವು ಅತ್ಯಂತ ಯಶಸ್ವಿಯಾಗಿ ಜರಗಿದೆ. ಪ್ರತಿದಿನ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆದಿದ್ದು 6 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸರ್ವರಿಗೂ ಶ್ರೀ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇವೆ. ರಾಘವ ಗೌಡ ಕೆರೆಮೂಲೆ, ಅಧ್ಯಕ್ಷರು ಶ್ರೀರಾಮ ಮಂದಿರ ಆಡಳಿತ ಸಮಿತಿ

LEAVE A REPLY

Please enter your comment!
Please enter your name here