







ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ನಡೆಸುವ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ನೂತನ ಪ್ರಾಂಶುಪಾಲರಾಗಿ ಡಾ. ಪುರುಷೋತ್ತಮ ಚಿಪ್ಪಾರ್ ಅಧಿಕಾರ ವಹಿಸಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ., ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ, ಸಂಚಾಲಕ ಪ್ರಸನ್ನ ದರ್ಭೆ ನೂತನ ಪ್ರಾಂಶುಪಾಲರಿಗೆ ಶುಭ ಹಾರೈಸಿದರು.



ಸಂಘದ ನಿರ್ದೇಶಕ ರಮೇಶ್ಚಂದ್ರ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್, ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ಭಟ್, ಆಡಳಿತ ಮಂಡಳಿ ಕೋಶಾಧಿಕಾರಿ ಅರವಿಂದ ವಿ., ನಿರ್ದೇಶಕರಾದ ಮನೋಜ್ ಕುಮಾರ್, ಸುಜಿತ್ ಕುಮಾರ್, ರಕ್ಷಾ ಪ್ರಭು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಾಂಶುಪಾಲರ ಪರಿಚಯ: ಡಾ. ಪುರುಷೋತ್ತಮ ಚಿಪ್ಪಾರ್ ಉನ್ನತ ಶಿಕ್ಷಣ, ಉದ್ಯಮ ಮತ್ತು ತಂತ್ರಜ್ಞಾನ ಕಾರ್ಯತಂತ್ರದಲ್ಲಿ 15 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಶಿಕ್ಷಣ ತಜ್ಞರು. ದಕ್ಷಿಣ ಕೊರಿಯಾದ ಇನ್ಹಾ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಡೀನ್ ಆಗಿ, ಅದಕ್ಕೂ ಮೊದಲು ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಹೈಡ್ರೋಜನ್ ಸಂಗ್ರಹಣೆ, ಇಂಧನ ಕೋಶಗಳು, ಉಷ್ಣ ಮತ್ತು ದ್ರವ್ಯರಾಶಿ ವರ್ಗಾವಣೆ ಹಾಗೂ ಸುಸ್ಥಿರ ಇಂಧನ ವ್ಯವಸ್ಥೆಗಳಲ್ಲಿ ಗಮನಾರ್ಹ ಸಂಶೋಧನೆ ಮಾಡಿದ್ದು, 35ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನ ಹನಿವೆಲ್ ಟೆಕ್ನಾಲಜಿ ಸೊಲ್ಯೂಶನ್ಸ್ನಲ್ಲಿ ತಂತ್ರಜ್ಞಾನ ಮೌಲ್ಯಮಾಪನ, ಪೇಟೆಂಟ್ ವಿಶ್ಲೇಷಣೆಯಲ್ಲಿ ಕಾರ್ಯನಿರ್ವಹಿಸಿದ್ದು, ವಿಮಾನ ವ್ಯವಸ್ಥೆಗಳ ಮುನ್ಸೂಚನಾ ನಿರ್ವಹಣೆಗೆ ಸಂಬಂಧಿಸಿದ ಅಮೆರಿಕದ ಪೇಟೆಂಟ್ನಲ್ಲೂ ಕೊಡುಗೆ ನೀಡಿದ್ದಾರೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಐಡಿಯಾ ಲ್ಯಾಬ್ ಯೋಜನೆಯ ಪ್ರಧಾನ ಸಂಶೋಧಕರಾಗಿ, ಕರ್ನಾಟಕ ಸರ್ಕಾರದ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ ಯೋಜನೆಯಡಿ ಮೂಲಸೌಕರ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.










