







ಬೆಂಗಳೂರು: ಸೌದಿ ಅರೇಬಿಯಾದಲ್ಲಿ ವಿಮಾನ ಸೇವೆ ಸ್ಥಗಿತಗೊಂಡ ಕಾರಣ ಮಕ್ಕಾ ಮತ್ತು ಮದೀನಾದಲ್ಲಿ ಸಿಲುಕಿಕೊಂಡಿರುವ ರಾಜ್ಯದ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳ ನೆರವಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.


ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಕಾಶ ಏರ್, ಇಂಡಿಗೋ, ಫ್ಲೈನಾಸ್, ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಗಳು ಜೆದ್ದಾ ಮತ್ತು ರಿಯಾದ್ನಿಂದ ಬೆಂಗಳೂರು ಸೇರಿದಂತೆ ಭಾರತಕ್ಕೆ ಬರುವ ವಿಮಾನಗಳನ್ನು ನಿಲ್ಲಿಸಿವೆ. ಇದರಿಂದ ಉಮ್ರಾಗೆ ತೆರಳಿದ್ದ 600ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.



ವಿಷಯ ತಿಳಿದ ತಕ್ಷಣ ರಾಜ್ಯ ಹಜ್ ಕಮಿಟಿ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸದಸ್ಯರ ತಂಡವನ್ನು ಮಕ್ಕಾ ಮತ್ತು ಮದೀನಾಕ್ಕೆ ಕಳುಹಿಸಲಾಗಿದ್ದು, ತಂಡ ಯಾತ್ರಾರ್ಥಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ಪರಿಶೀಲಿಸಿದೆ.
ಮಕ್ಕಾ ಮತ್ತು ಮದೀನಾದಲ್ಲಿರುವ ಭಾರತೀಯ ಸಮುದಾಯದ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಅವರ ಸಹಕಾರದೊಂದಿಗೆ ಯಾತ್ರಾರ್ಥಿಗಳಿಗೆ ಉಚಿತ ಊಟ, ಔಷಧಿ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.
ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳ ಮೂಲಕ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ವಿಮಾನ ಸೇವೆ ಪುನರಾರಂಭಿಸುವಂತೆ ಒತ್ತಾಯಿಸಲಾಗಿದೆ.
ಮುಂಗಡ ಟಿಕೆಟ್ ಪಡೆದು ಪ್ರಯಾಣಿಕರನ್ನು ವಿದೇಶಕ್ಕೆ ಕರೆದೊಯ್ದ ಮೇಲೆ ಸುರಕ್ಷಿತವಾಗಿ ವಾಪಸ್ ಕರೆತರುವುದು ಏರ್ಲೈನ್ಸ್ಗಳ ಜವಾಬ್ದಾರಿ ಎಂದು ನೆನಪಿಸಿ ಸಂಬಂಧಪಟ್ಟ ಏರ್ಲೈನ್ಸ್ಗಳಿಗೆ ಪತ್ರ ಬರೆಯಲಾಗಿದೆ. ಜವಾಬ್ದಾರಿ ಮರೆತ ಏರ್ಲೈನ್ಸ್ಗಳ ವಿರುದ್ಧ ಹಜ್ ಕಮಿಟಿ ವತಿಯಿಂದ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದೆ.
ಯಾತ್ರಾರ್ಥಿಗಳು ಮತ್ತು ಕುಟುಂಬದವರು ಮಾಹಿತಿ ಮತ್ತು ನೆರವಿಗಾಗಿ ಕರ್ನಾಟಕ ರಾಜ್ಯ ಹಜ್ ಕಮಿಟಿಯನ್ನು ಸಂಪರ್ಕಿಸಬಹುದು: 94835 03132 / 78997 07775










