‘ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ ಸ್ಟಿಂಗ್ ಮಾಡಿದ್ದಾರೆ’ – ಇದರಲ್ಲಿ ಸತ್ಯಾಂಶ ಇಲ್ಲ – ಸಿದ್ದರಾಮಯ್ಯ

0

ನಾನು ಸ್ಟಿಂಗ್ ಮಾಡಿಲ್ಲ.. ನನಗೆ ಹೆಚ್ಚಿನ ಮಾಹಿತಿ ಇಲ್ಲ – ಶಾಸಕ ಅಶೋಕ್ ರೈ
‘ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದರೆಂಬ ಮಾಹಿತಿ’ – ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು: ‘ಕೃಪಾ ಆಳ್ವಾ ಅಂತ ಮಂಗಳೂರಿನವರು, ರಾಕೇಶ್ ಶೆಟ್ಟೀಂತ ಪವರ್ ಟಿವಿಯವರು. ಇವರಿಬ್ಬರೂ ಸೇರಿ ಸ್ಟಿಂಗ್ ಮಾಡಿದ್ದಾರೆ. ಇದರಲ್ಲಿ ಸತ್ಯಾಂಶ ಇಲ್ಲ.ರಾಕೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರಲ್ಲ ಸ್ಟಿಂಗ್ ನಾನೇ ಮಾಡಿದ್ದೆಂದು.ಆ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ,ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ಪುತ್ರ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಜೊತೆಗೆ ಆಗಮಿಸಿದ ಅವರು ಸುತ್ತೂರು ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸ್ಟಿಂಗ್ ಆಪರೇಷನ್ ಎನ್ನುವುದು ಸುಳ್ಳು, ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಹೀಗೆ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ಇದು ಸುಳ್ಳು ಕೇಸು ಎಂಬುದು ಗೊತ್ತಾಗಲಿ ಎಂದು ನಾನೇ ದೂರು ನೀಡಿದ್ದೇನೆ. ಇದು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್ ನ್ಯಾಯಾಲಯಕ್ಕೆ ಹೋಗಿ ತಡೆ ತಂದಿದ್ದೇನೆ ಎಂದು ಹೇಳಿದರು. ನಾನು ಎಂಟು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. ಆವಾಗ ಈ ರೀತಿ ಯಾವುದನ್ನು ಮಾಡಲಿಲ್ಲ, ಈಗ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿಮ್ಮ ಪರವಾಗಿ ಮಾತನಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನನ್ನ ಪರ ಯಾರೂ ನಿಲ್ಲಬೇಕಿಲ್ಲ, ರಾಜ್ಯದ ಜನರ ಸತ್ಯಾಂಶ ಗೊತ್ತಾಗಬೇಕು, ಇದು ಸುಳ್ಳು ಕೇಸ್ ಎಂಬುದು ಗೊತ್ತಾಗಬೇಕು ಎಂದು ತಿಳಿಸಿದರು.ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಬೇಕು ಎಂದು ಯಾರೇ ಪ್ರಯತ್ನ ಪಟ್ಟರೂ ರಾಜ್ಯದ ಜನ ನಂಬಲ್ಲ, ಈಗಾಗಲೇ ತನಿಖೆ ನಡೆಯುತ್ತಿದೆ. ನಿಷ್ಪಕ್ಷ ತನಿಖೆಯಾಗಬೇಕು ಎಂದು ಒತ್ತಾಯ ಮಾಡುತ್ತೇನೆ. ಉನ್ನತಮಟ್ಟದ ತನಿಖೆ ಆಗತ್ಯವಿಲ್ಲ ಎಂದರು.ಸ್ಟಿಂಗ್ ಆಪರೇಷನ್ ಹಿಂದೆ ನಮ್ಮ ಪಕ್ಷದವರು ಇದ್ದಾರಾ, ಬೇರೆ ಪಕ್ಷದವರು ಇದ್ದಾರಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು. ತನಿಖೆ ನಡೆಯುತ್ತಿದೆ ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ವಿಚಾರ ವೀಡಿಯೊ ಹೊರ ಬಂದಾಗ ಸೆಪ್ಟಂಬರ್ 26 ರಂದು ನನ್ನ ಗಮನಕ್ಕೆ ಬಂತು. ನಾನೂ ತಪ್ಪೇ ಮಾಡಿಲ್ಲ ಎಂದ ಮೇಲೆ ನನಗೆ ಯಾಕೆ ಬೇಸರ ಆಗಲಿದೆ? ಸಂಪೂರ್ಣ ಸುಳ್ಳು, ಸಂಪೂರ್ಣ ಕಟ್ಟುಕಥೆ, ಇದು ನಡೆದೇ ಇಲ್ಲ ಎಂದ ಮೇಲೆ ನನಗೆ ಹೇಗೆ ತೇಜೋವಧೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಬಿ.ಜೆ. ವಿಜಯ್‌ಕುಮಾರ್, ಶಿವಣ್ಣ ಇದ್ದರು.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದರೆಂಬ ಮಾಹಿತಿ ಇದೆ
ಸ್ಟಿಂಗ್ ಆಪರೇಷನ್ ವೀಡಿಯೋ ಗಮನಿಸಿದರೆ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ನಮ್ಮ ಪಕ್ಷದವರು, ಮಾಧ್ಯಮ ಸಂಸ್ಥೆ ಮುಖ್ಯಸ್ಥರು ಹಾಗೂ ಓರ್ವ ಮಹಿಳೆ ಶಾಮೀಲಾಗಿರುವುದು ತಿಳಿದು ಬರುತ್ತದೆ. ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ,ನಮ್ಮ ಪಕ್ಷದವರೇ ಮಾಡಿದ್ದಾರೆಯೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕು. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ,ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ, ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ. ʼನನ್ನ ತಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಮತ್ತು ಬ್ಲ್ಯಾಕ್‌ಮೇಲ್ ಮಾಡಲು ನಮ್ಮ ಪಕ್ಷದವರು ‘ಸ್ಟಿಂಗ್ ಆಪರೇಷನ್’ನಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.ಸ್ಟಿಂಗ್ ಆಪರೇಷನ್ ಸಂಬಂಧ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಪ್ರಕರಣದ ಕುರಿತು ಸಮಗ್ರ ತನಿಖೆ ನಡೆದು ಸತ್ಯ ಹೊರಬರಬೇಕು.ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ತನಿಖೆ ನಡೆಯದಿದ್ದರೆ ಮುಂದಿನ ಕ್ರಮಗಳ ಬಗ್ಗೆ ಯೋಚಿಸುವುದಾಗಿ ಅವರು ಹೇಳಿದರು.

ಸಿದ್ದರಾಮಯ್ಯ ಘನತೆಯನ್ನು ಹಾಳುಮಾಡಲು, ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಈ ಯತ್ನ ನಡೆದಿದೆ. ಈ ಸುಳ್ಳು ಆರೋಪಗಳಿಂದ ನಮ್ಮ ತಂದೆ ಸಿದ್ದರಾಮಯ್ಯ ಅವರು ತೀವ್ರ ಬೇಸರಗೊಂಡಿದ್ದಾರೆ.40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದಿಗೂ ಇಂತಹ ಕಳಂಕಕ್ಕೆ ಗುರಿಯಾಗಿಲ್ಲ.ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಯಾರಾದರೂ ಬೇಸರಗೊಳ್ಳುವುದು ಸಹಜ. ಆದರೆ, ಸತ್ಯ ಅವರ ಕಡೆಯಿದೆ, ನಮ್ಮ ಕಡೆಯಿದೆ. ತನಿಖೆಯ ಮೂಲಕ ಸತ್ಯ ಹೊರಬರುತ್ತದೆ ಮತ್ತು ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಯತೀಂದ್ರ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಸ್ಟಿಂಗ್ ಮಾಡಿಲ್ಲ ನನಗೆ ಹೆಚ್ಚಿನ ಮಾಹಿತಿ ಇಲ್ಲ
2023ರಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್‌ಗಾಗಿ ಸ್ಟಿಂಗ್ ಆಪರೇಷನ್ ನಡೆದಿದ್ದ ಕುರಿತು ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆ ಕುರಿತು ಬೆಂಗಳೂರುನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈಯವರು,ಪಕ್ಷದ ಟಿಕೆಟ್‌ಗಾಗಿ ನಾನು ಸ್ಟಿಂಗ್ ಮಾಡಿಲ್ಲ. ಯಾರೋ ಮಾಡಿದ್ದಾರೆಂದು ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಈ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಪಕ್ಷ ಪುತ್ತೂರು ಕ್ಷೇತ್ರದಿಂದ ಟಿಕೆಟ್ ನೀಡಿದೆ. ಯಾವುದೇ ತೊಂದರೆ ಮಾಡಿಲ್ಲ ಎಂದು ಉತ್ತರಿಸಿದರು.

ರಾಕೇಶ್ ಶೆಟ್ಟಿಗೆ ಜಾಮೀನು
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ’ಸ್ಟಿಂಗ್ ಆಪರೇಷನ್’ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಽಸಿದಂತೆ ಪವರ್ ಟಿವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿಗೆ ಬೆಂಗಳೂರಿನ ೬೬ನೇ ಸಿಸಿಎಚ್ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್, ಒಬ್ಬರ ಶ್ಯೂರಿಟಿ ನೀಡಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯನಾಶಕ್ಕೆ ಯತ್ನಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.


ರಾಕೇಶ್ ಶೆಟ್ಟಿ ವಶಕ್ಕೆ ಪಡೆದು ವಿಚಾರಣೆ:
ಸ್ಟಿಂಗ್ ಆಪರೇಷನ್ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರು ದಾಖಲಿಸಿದ್ದರು.ಈ ದೂರಿನ ಅನ್ವಯ ತನಿಖೆ ನಡೆಸುತ್ತಿರುವ ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ರಾಕೇಶ್ ಶೆಟ್ಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದರು. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ಅವರಿಗೆ ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here