







ಪುತ್ತೂರು: ಮಾನವನ ಜೀವನ ಎನ್ನುವುದು ಸ್ಪ್ರಿಂಟ್ ಅಲ್ಲ ಅದೊಂದು ಮ್ಯಾರಥಾನ್ ಓಟ. ಇಲ್ಲಿ ನಮ್ಮ ಶಕ್ತಿಯ ಅರಿವಿಲ್ಲದೆ ಓಡಿದರೆ ಗುರಿಮುಟ್ಟದೇ ಇರುವ ಅಪಾಯವಿದೆ ಎಂದು ಮಣಿಪಾಲದ ಮಣಿಪಾಲ್ ಟೆಕ್ನಾಲಜೀಸ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅಭಯ್ ಅನಂತ್ ಗುಪ್ತೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2025-26ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಮಾತಾಡಿದರು. ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸರಿಯಾದ ಮತ್ತು ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ಯಾವುದೇ ಕೆಲಸಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಿ ಎಂದರು. ಪದವಿ ಎನ್ನುವುದು ಆರಂಭ ಮಾತ್ರ ನಿಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸದಾ ಹೊಸತನ್ನು ಕಲಿಯುವ ತುಡಿತ ನಿಮ್ಮಲ್ಲಿರಲಿ ಎಂದರು. ನೀವು ಈ ಸ್ಥಿತಿಗೆ ತಲಪುವುದಕ್ಕೆ ಕಾರಣರಾದ ಮಾತಾಪಿತರು, ಉಪನ್ಯಾಸಕರು ಮತ್ತು ಕಲಿಸಿದ ಸಂಸ್ಥೆಯ ಸೇವೆಯನ್ನು ಸದಾ ಸ್ಮರಿಸಿಕೊಳ್ಳಿ ಎಂದರು.



ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ.ಕೆ.ಎಂ ಮಾತನಾಡಿ ಇಂದು ನೀವೆಲ್ಲ ಪದವೀಧರರಾಗಿದ್ದೀರಿ ಅದರ ಜತೆಗೆ ಸ್ಥಾನ ಮಾನಗಳೂ ದೊರೆತಿದೆ. ಸಮಾಜ ಇದುವರೆಗೆ ನಿಮ್ಮ ಜತೆ ಯಾವ ರೀತಿ ಸ್ಪಂದಿಸಿ ಇನ್ನು ಮುಂದೆ ಯಾವ ರೀತಿ ಸ್ಪಂದಿಸಬಹುದು ಎನ್ನುವುದನ್ನು ಅವಲೋಕನ ಮಾಡಿ ಮುಂದಡಿಯಿಡಿ ಎಂದರು. ಭರವಸೆಯ ಯುವಕ ಯುವತಿಯರ ಕೈಯ್ಯಲ್ಲಿ ದೇಶ ಸುಭದ್ರವಾಗಿರುತ್ತದೆ ಎನ್ನುವ ಹಿರಿಯರ ಆಶಯದಂತೆ ಶ್ರೇಷ್ಟ ಸಮಾಜ ನಿರ್ಮಾಣ ಮಾಡುವ ಜವಾಬ್ಧಾರಿ ನಿಮಗಿದೆ ಎಂದರು. ಸಂಬಳ, ಉದ್ಯೋಗ ಮಾತ್ರ ಬದುಕಲ್ಲ ಅದಕ್ಕಿಂತ ಆಚೆಯ ಜಗತ್ತು ಬೇರೆಯೇ ಇದೆ. ಹೆತ್ತವರ ಶ್ರಮ, ನೋವು ಸಮಾಜದ ನಿರೀಕ್ಷೆಗಳ ಬಗ್ಗೆ ಗಮನವಿರಲಿ ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯಗಳಿಗೆ ಚ್ಯುತಿ ಬಾರದಂತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.




ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಅಲ್ಲದೆ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಪತ್ರವನ್ನು ನೀಡಲಾಯಿತು.

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ 60 ವಿಶಿಷ್ಟ ಶ್ರೇಣಿ 1 ಪ್ರಥಮ ಶ್ರೇಣಿ, ಡಾಟಾ ಸೈನ್ಸ್ ವಿಭಾಗದಲ್ಲಿ 55 ವಿಶಿಷ್ಟ ಶ್ರೇಣಿ 4 ಪ್ರಥಮ ಶ್ರೇಣಿ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 130 ವಿಶಿಷ್ಟ ಶ್ರೇಣಿ ಮತ್ತು 4 ಪ್ರಥಮ ಶ್ರೇಣಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 19 ವಿಶಿಷ್ಟ ಶ್ರೇಣಿ, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 54 ವಿಶಿಷ್ಟ ಶ್ರೇಣಿ ಮತ್ತು 8 ಪ್ರಥಮ ಶ್ರೇಣಿ, ಮೆಕ್ಯಾನಿಕಲ್ ವಿಭಾಗದಲ್ಲಿ 13 ವಿಶಿಷ್ಟ ಶ್ರೇಣಿ ಮತ್ತು 6 ಪ್ರಥಮ ಶ್ರೇಣಿ ಹೀಗೆ 354 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡರು.










