ವಿಟ್ಲ: ಕುದ್ದುಪದವು ಸಮೀಪದ ಪೆಟ್ರೋಲ್ ಬಂಕ್ ಒಂದರಲ್ಲಿ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಫೈಜಲ್ ಅಲಿಯಾಸ್ ಪಗ್ಗು ಪೊಲೀಸರು ವಿಚಾರಣೆ ನಡೆಸುತ್ತಿರುವ ಆರೋಪಿಯಾಗಿದ್ದಾರೆ.
ವರುಷಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಪಾಲುದಾರಿಕೆಯ ಎಸ್ ಆರ್ ಪೆಟ್ರೋಲ್ ಬಂಕ್ ನಲ್ಲಿರುವ ಕಚೇರಿಯೊಳಗಿನ ಲಾಕರನ್ಮು ಒಡೆದು ನಗದು ಕಳವುಗೈಯ್ಯಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಹುಡುಕಾಟ ನಡೆಸಿದ್ದಾರಾದರೂ ಪತ್ತೆಕಾರ್ಯ ನಡೆದಿರಲಿಲ್ಲ.
ಕೆಲದಿನಗಳ ಹಿಂದೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕರಿಮಣಿ ಸರವನ್ನು ಇಬ್ಬರು ಬೈಕಿನಲ್ಲಿ ಬಂದ ಅಪರಿಚಿತರು ಎಳೆದು ಪರಾರಿಯಾಗಿದ್ದರು. ಆ ಬಳಿಕ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಸಾರ್ವಜನಿಕರು ಆ ಬಳಿಕ ಅವರಿಬ್ಬರನ್ನು ಹಿಡಿದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕುದ್ದುಪದವಿನ ಪೆಟ್ರೋಲ್ ಬಂಕ್ನಿಂದ ನಗದು ಕಳವು ಗೈದಿರುವುದು ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ವಿಟ್ಲ ಠಾಣಾ ಪೊಲೀಸರು ಆ.೨೪ರಂದು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ ಫೈಝಲ್ ನನ್ನು ತಮ್ಮ ವಶಕ್ಕೆ ಪಡೆದು ಕಳವು ನಡೆಸಿದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ.