





- 200 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಪಾಯಿಯಂತೆ ವಿದ್ಯಾನಿಧಿ – ಸಹಾಯಧನ ವಿತರಣೆ
ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ದ.ಕ, ಜಿಲ್ಲಾ ವ್ಯಾಪ್ತಿಯಲ್ಲಿ 12 ಶಾಖೆಗಳ ಮೂಲಕ 2021-22 ನೇ ಸಾಲಿನಲ್ಲಿ 506.59 ಕೋಟಿ ರೂ, ವ್ಯವಹಾರವನ್ನು ನಡೆಸಿ, ರೂ. 1.20 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿದ್ದಾರೆ.








ಅವರು ಸೆ. 3 ರಂದು ಸುದ್ದಿ ಮೀಡಿಯಾ ಸೆಂಟರ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಮಾತನಾಡಿ ಸಂಘವು 2021-22 ನೇ ಸಾಲಿನಲ್ಲಿ 7368 ಸದಸ್ಯರನ್ನು ಹೊಂದಿದ್ದು, ರೂ. 2.52 ಕೋಟಿಯಷ್ಟು ಪಾಲು ಬಂಡವಾಳವನ್ನು ಹೊಂದಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ 8.81 ರಷ್ಟು ಹೆಚ್ಚಳವಾಗಿದೆ. ರೂ.99.81 ಕೋಟಿಯಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 18.40 ರಷ್ಟು ಹೆಚ್ಚಳವಾಗಿದೆ. ಈ ವರ್ಷ 14 ಶೇ, ಡಿವಿಡೆಂಡ್ನ್ನು ನೀಡುವ ಪ್ರಸ್ತಾವನೆ ಇದೆ ಎಂದು ಸೀತಾರಾಮ ರೈ ತಿಳಿಸಿದರು.
-2022-23 ಸಾಲಿನಲ್ಲಿ 1.40 ಕೋಟಿ ಲಾಭದ ಗುರಿ
ಸಂಘವು 2022-23 ನೇ ಸಾಲಿನಲ್ಲಿ ರೂ. 600 ಕೋಟಿಯಷ್ಟು ವ್ಯವಹಾರವನ್ನು ನಡೆಸಿ ರೂ, 1.40 ಕೋಟಿಯಷ್ಟು ಲಾಭವನ್ನು ಗಳಿಸುವ ಗುರಿಯನ್ನು ಹೊಂದಲಾಗಿದೆ.
-ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ
ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಸವಣೂರಿನಲ್ಲಿ 75 ಸೆಂಟ್ಸ್ ಪರಿವರ್ತಿತ ಭೂಮಿಯನ್ನು 1.28 ಕೋಟಿ ರೂ, ಮೌಲ್ಯದಲ್ಲಿ ಖರೀದಿ ಮಾಡಲಾಗಿದ್ದು, ಈ ವರ್ಷ ಸದ್ರಿ ಸ್ಥಳದಲ್ಲಿ ಶಂಕು ಸ್ಥಾಪನೆಯನ್ನು ಮಾಡಿ, ಸಂಘಕ್ಕೆ 25 ವರ್ಷ ಪೂರೈಸುವ ಸಮಯದಲ್ಲಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು.
200 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಪಾಯಿಯಂತೆ ವಿದ್ಯಾನಿಧಿ-ಸಹಾಯಧನ ವಿತರಣೆ
ಸಂಘವು ತನ್ನ ಎಲ್ಲಾ ಶಾಖೆಗಳ ವ್ಯಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ 5 ರಿಂದ 7 ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಧರ್ಮಾರ್ಥ ಮತ್ತು ವಿದ್ಯಾ ಸಂಸ್ಥೆಯ ನಿಧಿಯಿಂದ ಸಹಾಯ ಧನವನ್ನು ಸಂಘದ ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈ ವರೆಗೆ 13.23 ಲಕ್ಷ ರೂ ಮೊತ್ತವನ್ನು 743 ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಈ ವರ್ಷ ಸಂಘದ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 200 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಪಾಯಿಯಂತೆ ಸಹಾಯಧನವನ್ನು ನೀಡಲಾಗುವುದು ಎಂದು ಸವಣೂರು ಕೆ.ಸೀತಾರಾಮ ರೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೆಶಕರುಗಳಾದ ಎನ್.ರಾಮಯ್ಯ ರೈ ತಿಂಗಳಾಡಿ, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ ಹಾಗೂ ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ ಉಪಸ್ಥಿತರಿದ್ದರು.
-ವಿದ್ಯಾನಿಧಿ- ಸಹಾಯಧನ ವಿತರಣಾ ಸಮಾರಂಭ

ಸೆ. 10 ರಂದು ಬೆಳಿಗ್ಗೆ 11.30ಕ್ಕೆ ದರ್ಬೆ ಪ್ರಶಾಂತ್ ಮಹಲ್ನ ಸನ್ನಿಧಿ ಹಾಲ್ನಲ್ಲಿ ವಿದ್ಯಾನಿಧಿ- ಸಹಾಯಧನ ವಿತರಣಾ ಸಮಾರಂಭ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಎ.ಸಿ ಗಿರೀಶ್ ನಂದನ್ರವರು ಸಮಾರಂಭ ಉದ್ಘಾಟಿಸಲಿದ್ದಾರೆ. ದ.ಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುಧಾಕರ್ ಕೆರವರು ಸಹಾಯಧನವನ್ನು ವಿತರಿಸಲಿದ್ದಾರೆ. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ – ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ


 
            