ಪುತ್ತೂರು: ದ.ಕ ಜಿಲ್ಲಾ ಅತ್ತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಮರೀಲು ಚರ್ಚ್ ವ್ಯಾಪ್ತಿಯ ನಿವಾಸಿ ತೆರೆಜಾ ಸಿಕ್ವೇರಾರವರಿಗೆ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ವತಿಯಿಂದ ಸೆ.8 ರಂದು ಸನ್ಮಾನಿಸಲಾಯಿತು.
ಗುರುವಾರ ಕರಾವಳಿ ಕ್ರೈಸ್ತರು ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಹುಟ್ಟುಹಬ್ಬದ ದಿನದಂದು ಆಚರಿಸಲ್ಪಡುವ ಮೊಂತಿ ಫೆಸ್ತ್, ಕುಟುಂಬದ ಹಬ್ಬದ ದಿವ್ಯ ಬಲಿಪೂಜೆಯ ಬಳಿಕ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ತೆರೆಜಾ ಸಿಕ್ವೇರಾರವರನ್ನು ಚರ್ಚ್ ಪ್ರಧಾನ ಧರ್ಮಗುರು ವಲೇರಿಯನ್ ಫ್ರ್ಯಾಂಕ್ ರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲೇರಿಯನ್ ಫ್ರ್ಯಾಂಕ್ ರವರು, ಶಿಕ್ಷಕಿ ತೆರೆಜಾ ಸಿಕ್ವೇರಾರವರೋರ್ವ ಉತ್ತಮ ಶಿಕ್ಷಕಿಯಾಗಿ ಈಗಾಗಲೇ ಹೆಸರನ್ನು ಗಳಿಸಿದ್ದಾರೆ. ಇವರ ಗರಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ದು ಇಂದು ಸಮಾಜದ ಉನ್ನತ ಹಂತದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಜನಾನುರಾಗಿಯಾಗಿರುವ ತೆರೆಜಾ ಸಿಕ್ವೇರಾರವರಿಗೆ ಸಿಕ್ಕ ಪ್ರಶಸ್ತಿಯು ಮರೀಲ್ ಚರ್ಚ್ ಗೆ ಹೆಮ್ಮೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಶಸ್ತಿಗಳು ಅರಸಿಕೊಂಡು ಬರಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ರಾಕ್ಣೊ ಪತ್ರಿಕೆಯ ಸಂಪಾದಕ ವಲೇರಿಯನ್ ಫೆರ್ನಾಂಡೀಸ್, ಸಂತ ಫ್ರಾನ್ಸಿಸ್ಕನ್ ಸಂಸ್ಥೆಯ ಬ್ರದರ್ ವಿಲ್ಫ್ರೆಡ್ ಮೊಂತೇರೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಮಾಜಿ ಉಪಾಧ್ಯಕ್ಷ ಎಡ್ವಿನ್ ಡಿ’ಸೋಜ, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ ಸಹಿತ ಸಾವಿರಾರು ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.