ಪುತ್ತೂರು ನಗರಸಭೆಯಿಂದ ಪೌರ ಕಾರ್ಮಿಕರ ದಿನಾಚರಣೆ – ಸನ್ಮಾನ

0

6 ತಿಂಗಳಲ್ಲಿ ಪೌರ ಕಾರ್ಮಿಕರ ವಸತಿಯೋಜನೆ ಕಾಮಗಾರಿ ಆರಂಭ- ಕೆ.ಜೀವಂಧರ್ ಜೈನ್

ಪೌರ ಕಾರ್ಮಿಕರು ನಗರಸಭೆ ಬೆನ್ನೆಲುಬು- ವಿದ್ಯಾ ಆರ್ ಗೌರಿ

  • ಪೌರ ಕಾರ್ಮಿಕರೆಲ್ಲರಿಗೂ ನಗರಸಭೆಯಿಂದ ಸನ್ಮಾನ
  • ಪೌರ ಕಾರ್ಮಿಕರಿಂದ ನಗರಸಭೆ ಅಧ್ಯಕ್ಷ, ಪೌರಾಯುಕ್ತರಿಗೆ ಸನ್ಮಾನ
  • ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ
  • ಸಾಂಸ್ಕೃತಿಕ ಕಾರ್ಯಕ್ರಮ, ಸಹಭೋಜನ

ಪುತ್ತೂರು: ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ಸಮವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಬಣ್ಣ ಬಣ್ಣದ ಬಟ್ಟೆ ತೊಟ್ಟು ಲವ ಲವಿಕೆಯಿಂದ ಜನಪ್ರತಿನಿಧಿಗಳ ಜೊತೆಗೆ ಖುಷಿಯಿಂದ ನಲಿದು ತಮ್ಮ ಕಷ್ಟ, ನೋವುಗಳನ್ನು ಹಂಚಿಕೊಂಡ ಭಾವನಾತ್ಮಕ ಸಮಯ ಕಾಣಲು ಸಿಕ್ಕಿದ್ದು ಸೆ.23ರಂದು ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ.

ಪೌರ ಕಾರ್ಮಿಕರಿಗೆ ನಗರಸಭೆಯಿಂದ ಸನ್ಮಾನ

ಪುತ್ತೂರು ನಗರಸಭೆಯ ವತಿಯಿಂದ ಪುರಭವನದಲ್ಲಿ ಸೆ.23ರಂದು ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರು ಸಂಭ್ರಮ, ಸಂತಸ ಹಂಚಿಕೊಂಡರು. ಶ್ರಮವಹಿಸಿ ಮಾಡಿದ ಕೆಲಸದ ಕೀರ್ತಿ ಸಾಮಾನ್ಯವಾಗಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರಿಗೆ ಸಿಗುತ್ತದೆ. ಆದರೆ ಇಲ್ಲಿ ನಡೆದದ್ದೇ ಬೇರೆ. ಬೆಳಗ್ಗೆ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟನೆಯ ಸಂದರ್ಭದಲ್ಲಿ ಕಷ್ಟ ಪಟ್ಟವರ ಪರಿಶ್ರಮ ಅರಿತು ಹಿರಿಯ ಪೌರ ಕಾರ್ಮಿಕರನ್ನು ಸಹಿತ ಎಲ್ಲಾ ಪೌರ ಕಾರ್ಮಿಕರನ್ನು, ಚಾಲಕರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರಿಗೆ ಖಾಯಂ ನೇರನೇಮಕಾತಿ ಪತ್ರ, ಉಡುಗೊರೆ ಹಾಗೂ ಇತ್ತೀಚೆಗೆ ನಡೆದ ಕ್ರೀಡಾ ಕೂಟ ಮತ್ತು ಸಮಾರಂಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನ, ಸಂಜೆ ಉಪಹಾರ ಏರ್ಪಡಿಸಲಾಗಿತ್ತು.

6 ತಿಂಗಳಲ್ಲಿ ಪೌರ ಕಾರ್ಮಿಕರಿಗೆ ವಸತಿಯೋಜನೆ ಕಾಮಗಾರಿ ಆರಂಭ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಸ್ವಚ್ಚತೆ ಮತ್ತು ಸಾರ್ವಜನಿಕರ ದಿನ ನಿತ್ಯದ ಸಮಸ್ಯೆಗೆ ಸ್ಪಂಧನೆ ಕೊಡುವವರು ನಮ್ಮ ಪೌರರ್ಮಿಕರು. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ವಸತಿ ಯೋಜನೆ ಕುರಿತು ನಗರಸಭೆ ಸ್ಪಂಧನೆ ನೀಡಿದೆ. ಈಗಾಗಲೇ ರೂ. 1 ಕೋಟಿ ವೆಚ್ಚದಲ್ಲಿ ಕರ್ಕುಂಜದಲ್ಲಿ ನಿವೇಶನ ಕಾದಿರಿಸಿದ್ದು, ಮುಂದೆ 6 ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆದು ವಸತಿ ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ. ಇದರ ಜೊತೆಗೆ ಮುಂದಿನ ದಿನ ಪೌರ ಕಾರ್ಮಿಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಬಜೆಟ್‌ನಲ್ಲಿ ರೂ. 5 ಲಕ್ಷವನ್ನು ಇಡಲು ತಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ಕಚೇರಿಯಲ್ಲೂ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಸಿಗಲಿ:

ಬಹಳಷ್ಟು ವರ್ಷಗಳಿಂದ ಪೌರಕಾರ್ಮಿಕರ ಜೊತೆ ನಗರಸಭೆ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಾನತೆ ತೋರಿಸಿದ್ದಾರೆ. ಇವತ್ತು ಪುತ್ತೂರಿನಲ್ಲಿ ಪಕ್ಷಭೇದ ಮರೆತು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಒಟ್ಟು ನಗರಸಭೆಯಲ್ಲಿ ಕೇವಲ ಸಚ್ಚತೆಗೆ ಮಾತ್ರವಲ್ಲದೆ ನಗರಸಭೆ ಕಚೇರಿಯಲ್ಲೂ ಸಾರ್ವಜನಿಕರಿಗೆ ಒಳ್ಳೆಯ ರೀತಿಯಲ್ಲಿ ಸೇವೆ ಸಿಗಬೇಕೆಂಬ ಜನರ ಅಪೇಕ್ಷೆಯಂತೆ ಸೇವೆ ಸಿಗಬೇಕು. ಇವತ್ತು ತಾಂತ್ರಿಕ ವ್ಯವಸ್ಥೆಯಲ್ಲಿ ಸೇವಾ ಸೌಲಭ್ಯ ಇರುವಾಗ ತಕ್ಷಣದ ಸೇವೆಗೆ ಸಾರ್ವಜನಿಕರ ಬೇಡಿಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಆದಾಗಲೂ ಅದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವ ಕೆಲಸವೂ ನಡೆಯಬೇಕು. ಇವತ್ತು ನಗರಸಭೆಗೆ ಒಳ್ಳೆಯ ಪೌರಾಯುಕ್ತರು ಸಿಕ್ಕಿದ್ದಾರೆ. ಅದೇ ರೀತಿ ಸಿಬ್ಬಂದಿಗಳ ಕೆಲಸವೂ ನಡೆಯಲಿ ಎಂದು ಕೆ.ಜೀವಂಧರ್ ಜೈನ್ ಹೇಳಿದರು.

ಪೌರ ಕಾರ್ಮಿರಕರು ನಗರಸಭೆ ಬೆನ್ನೆಲುಬು:

ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಅವರು ಮಾತನಾಡಿ ಪೌರ ಕಾರ್ಮಿಕರು ನಗರಸಭೆಯ ಬೆನ್ನೆಲುಬು. ಆರೋಗ್ಯ, ಸುರಕ್ಷತೆ ಕಾಪಾಡುವಲ್ಲಿ, ಪರಿಸರ ಸಂರಕ್ಷಣೆ ಮತ್ತು ನಗರ ಸೌಂದರ್ಯತೆಯಲ್ಲಿ ಪೌರಕಾರ್ಮಿಕರ ಶ್ರಮ ಇದೆ. ಇವತ್ತು ಅವರ ಹೋರಾಟಕ್ಕೆ ನೇರ ನೇಮಕಾತಿ ಸಿಕ್ಕಿದ ಜಯ ಎಲ್ಲರಿಗೂ ಸಂತೋಷದ ವಿಚಾರ ಎಂದರು.

ಸ್ವಚ್ಛತೆಯಲ್ಲಿ ನಗರಸಭೆ 1ನೇ ಸ್ಥಾನಕ್ಕೆ ಬರಲು ಪಣತೊಡಬೇಕು:

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಎರಡು ಮೂರು ವರ್ಷಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರಕಾರದಲ್ಲಿ ಪೌರ ಕಾರ್ಮಿಕರಿಗೆ ಶುಭ ಸಂದೇಶ ಸಿಕ್ಕಿದೆ. ಇವತ್ತು ಪೌರ ಕಾರ್ಮಿಕರ ದಿನಾಚರಣೆ ನಮ್ಮಲ್ಲಿ ಸಂಭ್ರಮದಿಂದ ಆಚರಣೆ ಮಾಡಿದಂತೆ ಮುಂದಿನ ಭಾರಿ ನಗರಸಭೆ ಸ್ವಚ್ಛತೆಯಲ್ಲಿ 1ನೇ ಸ್ಥಾನ ಬರಬೇಕೆಂದು ಪಣತೊಡಬೇಕೆಂದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಶುಭ ಹಾರೈಸಿದರು.

ಪೌರ ಕಾರ್ಮಿಕರಿಂದ ನಗರಸಭೆ ಅಧ್ಯಕ್ಷ, ಪೌರಾಯುಕ್ತರಿಗೆ ಸನ್ಮಾನ

ಪೌರ ಕಾರ್ಮಿಕರಿಗೆ ಸನ್ಮಾನ:

ಹಿರಿಯ ಪೌರಕಾರ್ಮಿಕ ದಯಾನಂದ ಅವರನ್ನು ವಿಶೇಷವಾಗಿ ಸನ್ಮಾನಿಸಿದ ಬಳಿಕ ನಗರಸಭೆಯ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಹಿಳಾ ಪೌರ ಕಾರ್ಮಿಕರಿಗೆ ನಗರಸಭೆ ಸದಸ್ಯರು ಹಣೆಗೆ ಕುಂಕುಮವನ್ನಿಟ್ಟು ವಿಶೇಷ ಗೌರವ ನೀಡಿದರು. ಸನ್ಮಾನಿತರಿಗೆ ಶಲ್ಯ ಹೊದಿಸಿ, ಸ್ಮರಣಿಕೆ, ಉಡುಗೊರೆ ನೀಡಿ, ಫಲವಸ್ತು, ನೇರ ನೇಮಕಾತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪೌರ ಕಾರ್ಮಿಕರ ಸನ್ಮಾನದ ಬಳಿಕ ಸೂಪರ್ ವೈಸರ್‌ಗಳಾದ ಐತ್ತಪ್ಪ, ನಾಗೇಶ್, ಅಮಿತ್ ರಾಜ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ವರಲಕ್ಷ್ಮಿ ಅವರನ್ನು ಗೌರವಿಸಲಾಯಿತು. ಪೌರ ಕಾರ್ಮಿಕರ ಎಲ್ಲಾ ಹೋರಾಟ ಬೇಡಿಕೆಗಳಿಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ಪೌರಾಯುಕ್ತ ಮಧು ಎಸ್ ಮನೋಹರ್ ಅವರನ್ನು ಪೌರ ಕಾರ್ಮಿಕರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ವೇದಿಕೆಯಲ್ಲಿ ನಿವೃತ್ತ ಹಿರಿಯ ಪೌರಕಾರ್ಮಿಕ ರಾಜು ಉಪಸ್ಥಿತರಿದ್ದರು. ಪೌರಕಾರ್ಮಿಕರಾದ ಚಿದಾನಂದ, ಗುಲಾಬಿ, ಜಗದೀಶ್, ವೀರಪ್ಪ, ರಾಧಾಕೃಷ್ಣ, ಐತ್ತಪ್ಪ, ದಸ್ತಗಿರಿ, ಕೂಸಪ್ಪ, ನಾಗೇಶ್, ಸಿರಾಜುದ್ದಿನ್ ಅತಿಥಿಗಳನ್ನು ಗೌರವಿಸಿದರು. ನಗರಸಭೆಯ ವಾಣಿ ಪ್ರಾರ್ಥಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು. ಚಾಲಕ ರಾಧಾಕೃಷ್ಣ ವಂದಿಸಿದರು. ನಗರಸಭೆ ಸದಸ್ಯರು ಸಹಿತ ಪೌರ ಕಾರ್ಮಿಕರು, ಕಚೇರಿ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪೌರಕಾರ್ಮಿಕರಿಗೆ ಸಿಂಗಾಪುರ ಅಧ್ಯಯನ ಪ್ರವಾಸಕ್ಕೆ ಅವಕಾಶ:

ಪೌರಕಾರ್ಮಿಕರನ್ನು ಗುತ್ತಿಗೆಯ ಆಧಾರದ ಬದಲು ನೇರಪಾವತಿ ಮಾಡಲಾಗಿದ್ದು, 41 ಮಂದಿ ಅರ್ಹತೆ ಪಡೆದು ಕೊಂಡಿದ್ದಾರೆ. 11 ಮಂದಿ ಖಾಯಂ ಪೌರ ಕಾರ್ಮಿಕರಿದ್ದಾರೆ. 88 ಮಂದಿ ಪೌರ ಕಾರ್ಮಿಕರು ಸೇರಿದಂತೆ ಚಾಲಕರು, ಸೂಪರ್ ವೈಸರ್ ಸೇರಿಸಿ ಒಟ್ಟು 120 ಮಂದಿ ಪೌರ ಕಾರ್ಮಿಕರು ಅಗತ್ಯತೆ ಇದೆ. ಆದರೆ ನಮ್ಮಲ್ಲಿ ಇರುವುದು 73 ಮಂದಿ ಮಾತ್ರ. ಇದರಲ್ಲೂ ಶೇ.10 ಮಂದಿ ಪ್ರತಿ ದಿನ ಅನಾರೋಗ್ಯದಿಂದ ಗೈರಾಗುತ್ತಾರೆ. ಹಾಗಾಗಿ ದಿನ ನಿತ್ಯದ ಕೆಲಸಕ್ಕೆ 42 ಮಂದಿ ಪೌರಕಾರ್ಮಿಕರು ಮಾತ್ರ ಲಭ್ಯವಿದ್ದಾರೆ. ಘನತ್ಯಾಜ್ಯ ನಿರ್ವಹಣೆ, ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡುವ ಸಂಬಂಧ ಸರಕಾರ ರೂಪಿಸಿರುವ ಪೌರಕಾರ್ಮಿಕರ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿ ಸಿಂಗಾಪುರಕ್ಕೆ ತೆರಳಲು ಪುತ್ತೂರು ನಗರಸಭೆಯಿಂದ ಮೂರು ಮಂದಿ ಆಯ್ಕೆಯಾಗಿದ್ದು, ಜಯಂತ್, ವಿಮಲ, ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಮಧು ಎಸ್ ಮನೋಹರ್
ಪೌರಾಯುಕ್ತರು. ನಗರಸಭೆ ಪುತ್ತೂರು

ಮಾಜಿಗಳನ್ನು ಜೊತೆ ಸೇರಿಸಿದ ನಗರಸಭೆ ಅಧ್ಯಕ್ಷರು

ಮಾಜಿ ಪುರಸಭೆ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಉಪಾಧ್ಯಕ್ಷರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅದರಂತೆ ಮಾಜಿ ಪುರಸಭೆ ಅಧ್ಯಕ್ಷರಾದ ಸೂತ್ರಬೆಟ್ಟು ಜಗನ್ನಾಥ ರೈ, ಲತಾಗಣೇಶ್ ರಾವ್, ಗಣೇಶ್ ರಾವ್, ರಾಜೇಶ್ ಬನ್ನೂರು, ಮಾಜಿ ಉಪಾಧ್ಯಕ್ಷ ಹೆಚ್.ಉದಯ, ನಗರಸಭೆ ಮಾಜಿ ಉಪಾಧ್ಯಕ್ಷ ಹೆಚ್ ಮಹಮ್ಮದ್ ಆಲಿ, ಲ್ಯಾನ್ಸಿ ಮಸ್ಕರೆನಸ್ ಸಭೆಯಲ್ಲಿ ಉಪಸ್ಥಿತರಿದ್ದು, ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

LEAVE A REPLY

Please enter your comment!
Please enter your name here