- ಕೊಂಬೆಟ್ಟು ಶಾಲೆಯಲ್ಲಿ ಮೊದಲ ಹಂತದ ಕಾರ್ಯಕ್ರಮ
ಪುತ್ತೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದ್ದು, ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಬಳಕೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ನಡೆಯುತ್ತಿದ್ದು, ಸೆ.೨೨ರಂದು ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ‘ಶುಚಿ’ ಮೈತ್ರಿ ಮುಟ್ಟಿನ ಕಪ್ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿತರಣೆ ಕಾರ್ಯಕ್ರಮ ನಡೆಯಿತು.
ಕೊಂಬೆಟ್ಟು ಶಾಲೆಯ ಶಿವಸದನದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಆರ್ಬಿಎಸ್ನ ಉಪನಿರ್ದೇಶಕಿ ಡಾ. ವೀಣಾ ವಿ ಮತ್ತು ಆರ್ಕೆಎಸ್ಕೆ ಇದರ ಸಮಾಲೋಚಕ ಡಾ. ನಿಂಗದಳ್ಳಿ ಸಿದ್ಧರಾಮ್ ಅವರು ‘ಶುಚಿ’ ಮೈತ್ರಿ ಮುಟ್ಟಿನ ಕಪ್ ಬಗ್ಗೆ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಮೊದಲ ಹಂತದಲ್ಲಿ ಶಾಲೆಯ 150 ವಿದ್ಯಾರ್ಥಿನಿಯರಿಗೆ ‘ಶುಚಿ’ ಮೈತ್ರಿ ಮುಟ್ಟಿನ ಕಪ್ ವಿತರಣೆ ಮಾಡಲಾಯಿತು. ಜಿಲ್ಲಾ ಆರ್ಸಿಹೆಚ್ ಅಧಿಕಾರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ಬದ್ರುದ್ದಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು ಯೋಜನೆ ಜಾರಿ
ಶುಚಿ ಮೈತ್ರಿ ಮುಟ್ಟಿನ ಕಪ್ ಪಡೆದ ವಿದ್ಯಾರ್ಥಿನಿಯರನ್ನು ೮ ಗುಂಪುಗಳನ್ನಾಗಿ ವಿಭಜಿಸಿ ಒಂದೊಂದು ಗುಂಪಿಗೆ ಒಬ್ಬ ಮೇಲ್ವಿಚಾರಕರನ್ನು ನಿಯೋಜಿಸಲಾಯಿತು. ೬ ತಿಂಗಳು ಈ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು ನಂತರ ರಾಜ್ಯದಾದ್ಯಂತ ಈ ಯೋಜನೆ ಜಾರಿ ಮಡಲಾಗುವುದು ಎಂದು ಡಾ. ವೀಣಾ ವಿ ತಿಳಿಸಿದ್ದಾರೆ.