ವರದಿ: ವಿಜಯ ಕುಮಾರ್ ಕಡಬ
ಕಡಬ: ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅಪರಾಧ ಪ್ರಕರಣಗಳ ತ್ವರಿತ ತನಿಖೆ, ಕಾನೂನು ಸುವ್ಯವಸ್ಥೆ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ರಾಜ್ಯದ 83 ಪೋಲಿಸ್ ಠಾಣೆಗಳನ್ನು ಪಿ.ಐ.ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಈ ಪ್ರಸ್ತಾವನೆಯಲ್ಲಿ ಪುತ್ತೂರು ಗ್ರಾಮಾಂತರ(ಸಂಪ್ಯ), ಕಡಬ ಮತ್ತು ಉಪ್ಪಿನಂಗಡಿ ಪೋಲಿಸ್ ಠಾಣೆಗಳೂ ಮೇಲ್ದರ್ಜೆಗೇರಬೇಕಾದ ಪಟ್ಟಿಯಲ್ಲಿವೆ.
ಪ್ರಸ್ತುತ ಪೋಲಿಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅವರೇ ಎಸ್.ಹೆಚ್.ಒ (ಠಾಣೆಯ ಮುಖ್ಯ ಅಧಿಕಾರಿ)ಗಳಾಗಿದ್ದು ಜಿಲ್ಲಾ ಘಟಕಗಳ ವ್ಯಾಪ್ತಿಯಲ್ಲಿ 83 ಪೋಲಿಸ್ ಠಾಣೆಗಳನ್ನು ಪಿ.ಐ.ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸುವುದು ಅನಿವಾರ್ಯ ಎಂದು ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಹೆಚ್ಚಿನ ಎಲ್ಲಾ ಠಾಣೆಗಳಲ್ಲಿ ಠಾಣೆಯ ಮುಖ್ಯ ಅಧಿಕಾರಿ(ಎಸ್.ಹೆಚ್.ಓ)ಆಗಿ ಎಸ್.ಐ.ಯವರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮೇಲಾಧಿಕಾರಿಯಾಗಿ ವೃತ್ತ ನಿರಿಕ್ಷಕರು(ಪಿ.ಐ.)ಇರುತ್ತಾರೆ. (ಉದಾ:ಪುತ್ತೂರು ಗ್ರಾಮಾಂತರ(ಸಂಪ್ಯ), ಕಡಬ, ಉಪ್ಪಿನಂಗಡಿ ಠಾಣೆಗಳಿಗೆ ಸಂಬಂಽಸಿ ಪುತ್ತೂರು ಗ್ರಾಮಾಂತರ ವೃತ್ತ ನಿರಿಕ್ಷಕರ ಕಛೇರಿ ಇದೆ. ಈ ಮೂರೂ ಠಾಣೆಗಳಲ್ಲಿಯೂ ಎಸ್.ಐ.ಯವರೇ ಎಸ್ಎಚ್ಒಗಳಾಗಿರುತ್ತಾರೆ.). ಒಂದು ವೇಳೆ ಇಲಾಖೆಯ ಪ್ರಸ್ತುತ ಪ್ರಸ್ತಾವನೆಗೆ ಮಂಜೂರಾತಿ ದೊರೆತರೆ ಕಡಬ, ಉಪ್ಪಿನಂಗಡಿ ಮತ್ತು ಪುತ್ತೂರು ಗ್ರಾಮಾಂತರ ಸೇರಿದಂತೆ ರಾಜ್ಯದ 83 ಠಾಣೆಗಳಿಗೂ ಹೊಸದಾಗಿ ಪೋಲಿಸ್ ಇನ್ಸ್ಪೆಕ್ಟರ್ಗಳು ನೇಮಕಗೊಳ್ಳಲಿದ್ದು, ಅವರೇ ಠಾಣಾ ಮುಖ್ಯ ಅಧಿಕಾರಿ(ಎಸ್.ಹೆಚ್.ಒ)ಗಳಾಗುತ್ತಾರೆ. ಅವರ ಕೆಳಗಡೆ ಠಾಣೆಗೆ ಅನುಗುಣವಾಗಿ ಇಬ್ಬರು ಅಥವಾ ಹೆಚ್ಚು ಸಬ್ಇನ್ಸ್ಪೆಕ್ಟರ್ಗಳು ಕಾರ್ಯನಿರ್ವಹಿಸಲಿದ್ದಾರೆ.ಇದರಿಂದ ಅಪರಾಧ ಪ್ರಕರಣಗಳ ತ್ವರಿತ ತನಿಖೆ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿ ಸಾಗಲು ಅನುಕೂಲವಾಗಲಿದೆ ಎನ್ನುವುದು ಇಲಾಖೆಯ ಪ್ರಸ್ತಾವನೆ.
ರಾಜ್ಯದ ವಿವಿಧ ಜಿಲ್ಲಾ ಘಟಕಗಳಲ್ಲಿನ 145 ಪೊಲೀಸ್ ಠಾಣೆಗಳನ್ನು ಪಿ.ಐ,ಎಸ್.ಹೆಚ್.ಒ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸುವುದರ ಜೊತೆಗೆ ಹೊಸದಾಗಿ 3 ಪೊಲೀಸ್ ವೃತ್ತಗಳನ್ನು ಸೃಜಿಸಲಾಗಿರುತ್ತದೆ. ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪ್ರಕರಣಗಳ ತನಿಖೆಯನ್ನು ಪ್ರತ್ಯೇಕಗೊಳಿಸುವ ದೃಷ್ಟಿಯಿಂದ ಹೊಸದಾಗಿ ಪಿ.ಎಸ್.ಐ. ಹುದ್ದೆಗಳನ್ನು ಸೃಜಿಸಿ ಅಪರಾಧ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯದ ವಿವಿಧ ಜಿಲ್ಲಾ ಪೊಲೀಸ್ ಘಟಕಗಳ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ. ಈ ರೀತಿ ಹಂಚಿಕೆ ಮಾಡಲಾದ ನಂತರ ಕೆಲವೊಂದು ಪೊಲೀಸ್ ಠಾಣೆಗಳ ಮೇಲುಸ್ತುವಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಸೃಜಿಸುವ ಅಗತ್ಯವಿದೆ. ಪ್ರಸ್ತುತ, ಪೊಲೀಸ್ ಆಯಕ್ತಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಘಟಕಗಳಲ್ಲಿ ಬರುವ ಪುತ್ತೂರು ಗ್ರಾಮಾಂತರ, ಕಡಬ, ಉಪ್ಪಿನಂಗಡಿ ಸಹಿತ ೮೩ ಪೊಲೀಸ್ ಠಾಣೆಗಳನ್ನು ಪಿ.ಐ.ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸುವುದು ಅನಿವಾರ್ಯವಾಗಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ.
ಮೇಲ್ದರ್ಜೆಗೇರಿಸಲು ಅವಶ್ಯವಿರುವ 83 ಪಿ.ಐ.ಹುದ್ದೆಗಳಲ್ಲಿ 8 ಹುದ್ದೆಗಳನ್ನು ಹಾಲಿ ಇರುವ ಪೊಲೀಸ್ ವೃತ್ತಗಳಿಂದ ಸ್ಥಳಾಂತರಿಸಬಹುದಾಗಿದ್ದು ಉಳಿದ 75 ಪಿ.ಐ.ಹುದ್ದೆಗಳನ್ನು ಹೊಸದಾಗಿ ಸೃಜಿಸಬೇಕಾಗಿದೆ. ಪುತ್ತೂರು ಗ್ರಾಮಾಂತರ, ಕಡಬ ಮತ್ತು ಉಪ್ಪಿನಂಗಡಿಗೆ ಸಂಬಂಽಸಿ ಪ್ರಸ್ತುತ ಓರ್ವ ಇನ್ಸ್ಪೆಕ್ಟರ್ ಇದ್ದು ಇಬ್ಬರು ಇನ್ಸ್ಪೆಕ್ಟರ್ಗಳು ಹೊಸದಾಗಿ ನೇಮಕವಾಗಬೇಕಿದೆ.
ಕಡಬದಲ್ಲಿ ಪೋಲಿಸ್ ವೃತ್ತ ನಿರಿಕ್ಷಕರ ಕಛೇರಿ ಪ್ರಾರಂಭಿಸಿ-ಬೇಡಿಕೆ
ಪ್ರಸ್ತುತ ಕಡಬ ಪೊಲೀಸ್ ಠಾಣೆ ಪುತ್ತೂರು ಗ್ರಾಮಾಂತರ ವೃತ್ತ ನಿರಿಕ್ಷಕರ ಕಛೇರಿಗೆ ಒಳಪಟ್ಟಿದೆ.ಮುಂದೆ ಕಡಬ ಠಾಣೆ ಮೇಲ್ದರ್ಜೆಗೇರಿದರೆ ಠಾಣೆಗೆ ಇನ್ಸ್ಪೆಕ್ಟರ್ ನೇಮಕಗೊಳ್ಳುತ್ತಾರೆ. ಆದರೆ ಇಲ್ಲಿ ಒಂದು ಪ್ರಮುಖವಾದ ವಿಚಾರವೆಂದರೆ,ಈಗಾಗಲೇ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೋಲಿಸ್ ಠಾಣೆ ಸುಳ್ಯ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿದೆ.ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಜನತೆ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಗೆ ಸುಮಾರು 35ರಿಂದ 40 ಕಿ.ಮೀ. ದೂರ ಪ್ರಯಾಣ ಮಾಡಬೇಕಾಗುತ್ತದೆ.ಇತ್ತ ತಾಲೂಕು ಕಛೇರಿ ಕೆಲಸಗಳಿಗೆ ಸಂಬಂಽಸಿ ಅವರು ಕಡಬಕ್ಕೆ ಬರಬೇಕಾಗುತ್ತದೆ.ಈ ಸಮಸ್ಯೆಗಳಿಗೆ ಪರಿಹಾರವೆನ್ನುವಂತೆ ಕಡಬ ತಾಲೂಕು ಕೇಂದ್ರದಲ್ಲಿ ಪೊಲೀಸ್ ವೃತ್ತ ನಿರಿಕ್ಷಕರ ಕಛೇರಿ ಪ್ರಾರಂಭಿಸಿ, ಈಗಾಗಲೇ ಕಡಬ ತಾಲೂಕು ವ್ಯಾಪ್ತಿಯಲ್ಲಿದ್ದು ಉಪ್ಪಿನಂಗಡಿ ಪೋಲಿಸ್ ಠಾಣೆಯ ಹೊರ ಠಾಣೆ ಆಗಿರುವ ನೆಲ್ಯಾಡಿ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೋಲಿಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಕಡಬ ವೃತ್ತ ನಿರಿಕ್ಷಕರ ಕಛೇರಿ ವ್ಯಾಪ್ತಿಗೆ ಸೇರಿಸಬೇಕು ಜೊತೆಗೆ ಸುಬ್ರಹ್ಮಣ್ಯ ಠಾಣೆಯನ್ನು ಸುಳ್ಯ ವೃತ್ತದಿಂದ ಪ್ರತ್ಯೇಕಿಸಿ ಕಡಬ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಗೆ ಸೇರಿಸಬೇಕು.ಕಡಬ ತಾಲೂಕು ಕೇಂದ್ರದಲ್ಲಿಯೇ ಪೋಲಿಸ್ ವೃತ್ತ ನಿರಿಕ್ಷಕರ ಕಛೇರಿಯೂ ಇದ್ದರೆ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂಬುದು ಪ್ರಮುಖರ ಅಭಿಪ್ರಾಯ.ಅಲ್ಲದೆ ರಾಜ್ಯದ ಪ್ರಮುಖ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಪ್ರದೇಶ ರಾಷ್ಟ್ರೀಯ ಹೆದ್ದಾರಿ, ನಕ್ಸಲ್ ಪೀಡಿತ ಪ್ರದೇಶಗಳೂ ಇರುವುದರಿಂದ ತ್ವರಿತ ಕಾರ್ಯಾಚರಣೆಗೆ ಕಡಬದಲ್ಲಿ ವೃತ್ತ ನಿರಿಕ್ಷಕರ ಕಛೇರಿ ಪರಿಹಾರವಾಗಲಿದೆ ಎಂಬುದು ಹಲವರ ಅಭಿಪ್ರಾಯ.ಕಡಬ ಪೋಲಿಸ್ ಠಾಣೆಗೆ ಸ್ವಂತ ಜಾಗವೂ ಇದೆ, ಸರ್ಕಲ್ ಆಫೀಸ್ ನಿರ್ಮಾಣ ಮಾಡಲು ಅನುಕೂಲವಾದ ವ್ಯವಸ್ಥೆಯೂ ಇದೆ.ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿದರೆ ಉತ್ತಮ ಎನ್ನುವುದು ನಾಗರಿಕರ ಅಭಿಪ್ರಾಯ.