ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ) ಯಲ್ಲಿ 2ರಂದು ಶರನ್ನವರಾತ್ರಿ ಪ್ರಯುಕ್ತ ಶಾರದಾ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಶಾಲಾ ಸಂಚಾಲಕ ಭರತ್ ಪೈ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಲಹೆ ಹಾಗೂ ಶಾಲಾ ಮುಖ್ಯೋಪಾಧ್ಯಯಿನಿ ಸಿಂಧು ವಿ. ಜಿ. ಮಾರ್ಗದರ್ಶನದಲ್ಲಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳ ಹಾಗೂ ಪೋಷಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಬಹಳ ಭಕ್ತಿಪೂರ್ವಕವಾಗಿ ಶಾರದಾ ಪೂಜೆಯು ನೆರವೇರಿತು.
ತದನಂತರ, ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯ ವಿಜಯಾನಂದ ಕೈಂತಜೆ ಆಗಮಿಸಿ, ಮಕ್ಕಳಿಗೆ ನವರಾತ್ರಿ, ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಸಲುವಾಗಿ ಸರ್ವರಿಗೂ ಶುಭ ಹಾರೈಸಿದರು.
ದೇಶ ಸೇವೆಗಾಗಿ ನಮ್ಮ ಸಮಯವನ್ನು ಮುಡಿಪಾಗಿಡಬೇಕು ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು. ಶಾಲಾ ಮುಖ್ಯ ಸಂಯೋಜನಾಧಿಕಾರಿ ವಿಶಾಲಾಕ್ಷಿ, ವಾರದಾದ್ಯಂತ ನಡೆಸಲಾದ ಸ್ವಚ್ಛತಾ ಅಭಿಯಾನದ ಬಗ್ಗೆ ತಿಳಿಸಿ, ಆರೋಗ್ಯಯುತ ದೇಶ ನಮ್ಮ ಗುರಿ ಎಂದು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಹ ಶಿಕ್ಷಕಿ ಅಶ್ವಿನಿ ಮಾತನಾಡಿ, ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೀವನದ ಆದರ್ಶ, ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಹ ಶಿಕ್ಷಕಿ ಜ್ಯೋತಿ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಹರ್ಷಿತ ಸ್ವಾಗತಿಸಿ,ಪವಿತ್ರ ವಂದನಾರ್ಪಣೆಗೈದರು. ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರ ಸಮಾಗಮದಲ್ಲಿ ಕಾರ್ಯಕ್ರಮವು ಸುಸಂಪನ್ನಗೊಂಡಿತು.