* ಕೃಷಿ ಟೂರಿಸಂ ಅಭಿವೃದ್ಧಿಗೆ ಯೋಚನೆ: ಡಾ.ಯು.ಪಿ. ಶಿವಾನಂದ್
ಪುತ್ತೂರು: ಸುದ್ದಿ ಕೃಷಿ ಕೇಂದ್ರದ ಆಶ್ರಯದಲ್ಲಿ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳೊಂದಿಗೆ ಸಮಾಲೋಚನೆ, ಸಂವಾದ ಕಾರ್ಯಕ್ರಮ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಬಿಲ್ಡಿಂಗ್‌ನ ಕೇಂದ್ರದ ಕಚೇರಿಯಲ್ಲಿ ಅ. 9ರಂದು ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಸುದ್ದಿ ಕೃಷಿ ಕೇಂದ್ರದ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ್, ಕೃಷಿಕರಿಗೆ ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆಯಲ್ಲಿ ಸುದ್ದಿ ಕೃಷಿ ಕೇಂದ್ರದಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಮಾಹಿತಿ ಸರಿಯಾಗಿ ಸಿಕ್ಕಿದಾಗ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡುವ ಕೆಲಸವನ್ನು ಸುದ್ದಿ ಮಾಡುತ್ತಿದೆ. ಇದರೊಂದಿಗೆ ಕೃಷಿಕರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಮಾರುಕಟ್ಟೆ ಸಹಾಯವನ್ನು ನೀಡಲಿದ್ದೇವೆ ಎಂದರು.
ಕೃಷಿ ಟೂರಿಸಂ ಎನ್ನುವ ಪರಿಕಲ್ಪನೆಯನ್ನು ಸುದ್ದಿ ಕೃಷಿ ಕೇಂದ್ರ ಪರಿಚಯಿಸುತ್ತಿದೆ. ಆಸಕ್ತರು ಸುದ್ದಿ ಕೃಷಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಿದರೆ, ಅವರನ್ನು ನಿಗದಿಪಡಿಸಿದ ದಿನದಂದು ಕೃಷಿ ತೋಟಕ್ಕೆ ಕರೆದೊಯ್ಯುವ ಕೆಲಸ ಇದಾಗಿರಲಿದೆ. ಈ ಮೂಲಕ ಪ್ರಗತಿಪರ ಕೃಷಿಕರು ಮಾಡಿರುವ ಕೆಲಸವನ್ನು ಕಣ್ಣಾರೆ ಕಂಡು, ಅದನ್ನು ತಮ್ಮ ತೋಟದಲ್ಲಿ ಬೆಳೆಸುವಂತಾಗಲು ಇದು ಸ್ಫೂರ್ತಿಯಾಗಲಿದೆ. ಇದರಿಂದ ಕೃಷಿಕರು ತಮ್ಮ ಕೃಷಿಯನ್ನು ಅಭಿವೃದ್ಧಪಡಿಸಬಹುದು. ಅಲ್ಲದೇ, ಯುವಕರು ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಕೃಷಿ ಕಾರ್ಯಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಮೋಕ್ಷ ಕೃಷ್ಣ ತ್ಯಾಗರಾಜನಗರ, ರವೀಂದ್ರ ಕೆ. ಕೆಮ್ಮಿಂಜೆ, ಗಣಪತಿ ಭಟ್ ಕೌಡಿಚ್ಚಾರ್, ಸಾಹಿಝ್ ಸಾಮೆತಡ್ಕ, ಚೇತನ್ ಪುತ್ತೂರು, ರಾಮಚಂದ್ರ ಮುಂಡೂರು, ಸುಬ್ರಹ್ಮಣ್ಯ ಪುತ್ತೂರು, ರಾಜೀವ್ ಶೆಟ್ಟಿ ಕೇದಗೆ ಪೆರ್ನೆ, ಕಿರಣ್ ಅಳಸಂಡೆಮಜಲು, ಲಿಖಿತ್ ಅಳಸಂಡೆಮಜಲು, ಗೀತಾ ಪುಂಡರಿಕ್ ಅಡ್ಪಂಗಾಯ, ಶೋಭಾ ಶಿವಾನಂದ್, ಕಮಲ ಮುಡೂರು, ರತ್ನಾಕರ ಪ್ರಭು, ಮೀನಾಕ್ಷಿ ಡಿ. ಗೌಡ, ನವೀನ ಬಿ.ಡಿ. ಬಂದ್ಯಡ್ಕ ಕಾವು, ರಾಮಚಂದ್ರ ಜೋಯಿಸ ಶಾಂತಿಗೋಡು, ಮೋನಪ್ಪ ಪುರುಷ ನರಿಮೊಗ್ರು, ರವಿಶಂಕರ್ ಭಟ್ ನೆಹರುನಗರ, ರಾಮಚಂದ್ರ ಕೊಂಬಾರು, ದೇವಣ್ಣ ರೈ ಕಾವು, ಜಯಶ್ರೀ ಕೊಂಬಾರು, ಬಾಲಕೃಷ್ಣ ಮುಂಗ್ಲಿಮನೆ, ಡಾ. ಎಸ್. ಭಟ್ ಸರ್ವೆ, ಪ್ರೇಮ ಬೊಳುವಾರು, ಕೃಷ್ಣ ಪ್ರಸಾದ್ ಶಿಬರ ಪಂಜಳ, ವಿಶ್ವನಾಥ ಮಾಡಾವು, ರಾಮಕೃಷ್ಣ ಭಟ್, ದಿನೇಶ್ ಸಿ ಹೆಚ್ ಮರಿಲ್, ಹರೀಶ್ ರಾಮಕುಂಜ, ಡಾ. ಕೆ. ಎಸ್.ಭಟ್ ಕಲ್ಲಮ, ಚಂದ್ರಶೇಖರ ಉರ್ಲಾಂಡಿ, ಸಂದೀಪ್ ನಗರ ಮೊದಲಾದ ಆಸಕ್ತರು ಭಾಗವಹಿಸಿದ್ದರು.
ಗೇರು ಕೃಷಿಯ ಬಗ್ಗೆ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಗಂಗಾಧರ್ ನಾಯಕ್ ಅವರು ಮಾಹಿತಿ ನೀಡಿದರು.
– ಗೋಡಂಬಿಗೆ ಸಾಕಷ್ಟು ಬೇಡಿಕೆ ಇದೆ. ಅದನ್ನು ಪೂರೈಸುವಷ್ಟು ಬೆಳೆ ನಮ್ಮಲ್ಲಿಲ್ಲ. ಆದ್ದರಿಂದ ಗೇರು ಬೆಳೆಗೆ ಪ್ರೋತ್ಸಾಹ ಅಗತ್ಯ.
– ಗೇರು ಬೀಜಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ.
– ಇತರ ಕೃಷಿಗೆ ಹೋಲಿಸಿದರೆ ಗೇರಿಗೆ ರೋಗ ರುಜಿನ ಕಡಿಮೆ.
– ನೀರಿನ ಪ್ರಮಾಣ ಕಡಿಮೆ ಸಾಕು.
– ಬೀಜದ ಗಾತ್ರ 13 ಗ್ರಾಂ ಇದ್ದರೆ, ಗೋಡಂಬಿ ಗಾತ್ರ5 ಗ್ರಾಂ ಇರುತ್ತದೆ.
– ಗೇರು ಗಿಡ ನೆಟ್ಟ 2ನೇ ವರ್ಷದಿಂದಲೇ ಫಸಲು ಸಾಧ್ಯ.
– ಗೇರು ಗಿಡಕ್ಕೆ ಬಿಸಿಲು ಬಿದ್ದಷ್ಟು ಬೆಳೆ ಜಾಸ್ತಿ.
– ಗೇರು ಹಣ್ಣನ್ನು ಫೆನ್ನಿ ಎಂಬ ಆಲ್ಕೋಹಾಲ್ ತಯಾರಿಕೆಗೆ ಬಳಸುತ್ತಾರೆ.
– ಗಿಡ ಬೆಳವಣಿಗೆಯ ಪ್ರಾರಂಭದಿಂದಲೇ ಕತ್ತರಿಸುತ್ತಾ, ಶೇಪ್ ಕೊಡುತ್ತಾ ಬರಬೇಕು. ಯಾವುದೇ ಗಿಡವೂ ಮರದಂತೆ ದೊಡ್ಡದಾಗಿ ಬೆಳೆಯಬಾರದು.
– ಗಿಡಗಳ ನಡುವೆ ಸಾಕಷ್ಟು ಅಂತರ ಕಾಪಾಡಿಕೊಳ್ಳಬೇಕು. ಗಿಡಕ್ಕೆ ಬಿಸಿಲು ಕಡಿಮೆಯಾದರೆ, ಫಸಲು ಕಡಿಮೆ ಸಾಧ್ಯತೆ.
ಗೇರು ಹಾಗೂ ಕೊಕ್ಕೋದ ಬಗ್ಗೆ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಆಡಳಿತ ಮಂಡಳಿ ಸದಸ್ಯ ಕಡಮಜಲು ಸುಭಾಷ್ ರೈ ಮಾಹಿತಿ ನೀಡಿದರು.
– 14 ಎಕರೆಯಲ್ಲಿ ಗೇರು ಕೃಷಿ ಬೆಳೆಸಿದ್ದೇನೆ. ಉತ್ತಮ ಇಳುವರಿ ಪಡೆಯುತ್ತಿದ್ದೇನೆ.
– ಗೇರಿನ ಜೊತೆಗೆ ಸಮಗ್ರ ಕೃಷಿ ಮಾಡುತ್ತಿದ್ದೇನೆ.
– ವಾಣಿಜ್ಯ ಬೆಳೆಯಾಗಿ ಅಡಿಕೆ ವರದಾನ ನಿಜ. ಆದರೆ ಅಡಿಕೆಯನ್ನೇ ಅವಲಂಭಿಸಿರುವುದು ತಪ್ಪು. ಪರ್ಯಾಯ ಬೆಳೆಗಳ ಕಡೆಗೆ ವಾಲುವುದು ಅನಿವಾರ್ಯ.
– ಬರಡು ಭೂಮಿಯಲ್ಲಿ ಗೇರು ಬೀಜ ನೆಟ್ಟು ಬೆಳೆಸಿದೆ. ಆ ತೋಟಕ್ಕೆ ಸ್ವೇದಬಿಂಧು ಎಂದು ಹೆಸರಿಟ್ಟಿದ್ದೇನೆ.
– ಇಂದು ಬರಡು ಭೂಮಿಯಲ್ಲಿ ಗೇರು ಉತ್ತಮ ಇಳುವರಿ ನೀಡುತ್ತಿದೆ.
– ಗೇರಿಗೆ ರೋಗಬಾಧೆ ಇಲ್ಲ. ಕೀಟಬಾಧೆ ಮಾತ್ರ. ಕಾಂಡ ಕೊರೆತ ಹುಳ. ಹಸಿರು ಎಲೆ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುವುದೇ ಇದರ ಲಕ್ಷಣ. ಆ ಸಂದರ್ಭ ಕಾಂಡ ಕೊರೆತ ಹುಳವನ್ನು ನಿಯಂತ್ರಿಸಲು ಬೋರ್ಡೊ ದ್ರಾವಣ ಸಿಂಪಡಿಸಬೇಕು.
– ಗೇರು ಚಿಗುರುವ ಹಾಗೂ ಹೂ ಬಿಡುವ ಸಂದರ್ಭ ಟೀ ಸೊಳ್ಳೆ ಬಾಧೆ ಇರುತ್ತದೆ. ಎಲೆ ಕರಚುವುದು, ಚಿಗುರಿದ ಎಲೆಯ ಭಾಗದಲ್ಲಿ ಚಿರುಟುವುದು ಇದರ ಲಕ್ಷಣ. ನಿಯಂತ್ರಣಕ್ಕೆ 200 ಲೀಟರ್ ನೀರಿಗೆ 200 ಮಿ.ಲಿ. ಲೀಟರ್ ಕರಾಟೆ ಔಷಧಿಯನ್ನು ಮಿಶ್ರಮಾಡಿ ಸಿಂಪಡಿಸಬೇಕು. ಟೀ ಸೊಳ್ಳೆ ಬಾಧೆಯನ್ನು ಖಾತ್ರಿಪಡಿಸಿಕೊಂಡು, ಬಳಿಕ 30 ದಿನಗಳಿಗೊಮ್ಮೆ 3 ಸಲ ಸಿಂಪಡಿಸಿದರೆ ಉತ್ತಮ.
– ಅತಿಸಾಂಧ್ರ ಪದ್ಧತಿ, ಸಾಂಧ್ರ ಪದ್ಧತಿ, ಸಾಮಾನ್ಯ ಪದ್ಧತಿಯಲ್ಲಿ ಗೇರು ಕೃಷಿ ಮಾಡುತ್ತಿದ್ದೇನೆ.
– ತೋಟದ ನಡುವೆ ಕೊಕ್ಕೋ ಗಿಡ ನೆಟ್ಟಿದ್ದು, ಉಪಉತ್ಪನ್ನವಾಗಿ ಸಹಾಯವಾಗುತ್ತಿದೆ.
– ಹೆಚ್ಚಾಗಿ ಜನರು ಕೊಕ್ಕೋ ಗಿಡವನ್ನು ಕಡಿದು ಬಿಸಾಡುವುದೇ ಜಾಸ್ತಿ. ಹೀಗೆ ಮಾಡುವುದು ಸರಿಯಲ್ಲ.
– ಗೇರಿನಂತೆ ಕೊಕ್ಕೋ ಬೀಜಕ್ಕೂ ಉತ್ತಮ ಬೇಡಿಕೆ ಇದೆ. ನಮ್ಮ ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಕೊಕ್ಕೋ ಪೂರೈಕೆ ಆಗುತ್ತಿಲ್ಲ.
– ಕೊಕ್ಕೋವನ್ನು ಸರಿಯಾದ ಸಮಯಕ್ಕೆ ಪ್ರೂನಿಂಗ್ ಮಾಡಬೇಕು.
ಬಡಗನ್ನೂರು ದುರ್ಗಾಗಿರಿಯ ಮಂಜುನಾಥ್ ಫಾರ್ಮ್ಸ್‌ನ ಹರಿಕೃಷ್ಣ ಕಾಮತ್ ಅವರು ಮನೆಯಲ್ಲಿ ಸಾವಯವ ಕೈತೋಟ ತರಕಾರಿ, ಹಣ್ಣಿನ ಕೃಷಿ, ತಾರಸಿ ಗಾರ್ಡನ್ ಬಗ್ಗೆ ಮಾಹಿತಿ ನೀಡಿದರು.
– ತರಕಾರಿ, ಹಣ್ಣು, ಹೂ, ಔಷಧೀಯ ಗಿಡಗಳನ್ನು ನಮ್ಮ ಮನೆಯ ಆವರಣ, ಬಾಲ್ಕನಿ, ತಾರಸಿಯಲ್ಲಿ ಬೆಳೆಯಬಹುದು.
– ಕೈತೋಟ ಪ್ರಾರಂಭಿಸಲು ನಿರ್ದಿಷ್ಟವಾದ ಸಮಯವೆಂಬುದಿಲ್ಲ.
– 4 ಗೋ ಬ್ಯಾಗ್, ಹಳೆಯ ಬಕೆಟ್, ಗೋಣಿ-ಚೀಲ, ಮಣ್ಣಿನ / ಪ್ಲಾಸ್ಟಿಕ್ / ಸಿಮೆಂಟು ಚಟ್ಟೆಗಳು ಹಾಗೂ ಹಳೆಯ ಪಾತ್ರೆಗಳಲ್ಲಿ ಮತ್ತು ನೆಲದಲ್ಲಿಯೂ ಕೈತೋಟ ಮಾಡಬಹುದು.
– ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನದ ಮೂಲಕ ಇಂದಿನ ಒತ್ತಡದ ಜೀವನ ಶೈಲಿಯಿಂದ ಬರುವ ಅನೇಕ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಂದ ದೂರವಿರಬಹುದು. ಮನೆಯಲ್ಲಿ ತಯಾರಾಗುವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತನೆ ಮಾಡುವುದರಿಂದ ಪರಿಸರ ರಕ್ಷಣೆಗೆ ಸಹಕಾರಿಯಾಗುವುದು.
– ವಿವಿಧ ಜಾತಿಯ ಹೂವಿನ, ಅಲಂಕಾರಿಕ, ಔಷಧ, ತರಕಾರಿ, ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಮನೆಯ ಅಂದ ಹೆಚ್ಚಿಸಬಹುದು. ಆಮ್ಲಜನಕಯುಕ್ತ ಶುದ್ಧ ಗಾಳಿ ಸೇವನೆ ಮಾಡಬಹುದು.
– ನಮ್ಮ ಕೈತೋಟದಲ್ಲಿ ವರ್ಷವಿಡೀ ವಿಷರಹಿತ, ತಾಜಾ ತರಕಾರಿ, ಹಣ್ಣು, ಹೂ ದೊರೆತರೆ ಖರ್ಚು ಕಡಿಮೆಯಾಗಿ ಸ್ವಾಭಿಮಾನಿ, ಸ್ವಾವಲಂಬಿ ಜೀವನ ನಮ್ಮದಾಗುತ್ತದೆ.
– ನಮ್ಮ ಮನೆಯ ಪರಿಸರದ ಉಳಿಕೆ ಜಾಗದ ಸದ್ಭಳಕೆ ಮಾಡಿದಂತಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣು, ತರಕಾರಿಗಳನ್ನು ರಸಗೊಬ್ಬರ, ಹಾಕಿ ಬೆಳೆದಿರುತ್ತಾರೆ. ಇದರ ಸೇವನೆಯಿಂದ ದೇಹಕ್ಕೆ ಬರಬಹುದಾದ ಅನೇಕ ರೋಗಗಳನ್ನು ತಪ್ಪಿಸಬಹುದು.
– ಮಕ್ಕಳಿಗೆ ಉತ್ತಮವಾದ ಪೋಷಕಾಂಶವುಳ್ಳ ವಿಷರಹಿತ ತಾಜಾ ತರಕಾರಿ, ಹಣ್ಣು ನೀಡುವುದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ.
– ಯಾವುದೇ ತರಕಾರಿ ಬೀಜಗಳನ್ನು ಆಯ್ಕೆ ಮಾಡುವಾಗ ಪ್ರಥಮ ಹಂತದ ಹೂವಿನಿಂದ ಬಂದ ಕಾಯಿಯನ್ನು ಬಿಟ್ಟು ೨-೩ನೇ ಹಂತದ ಹೂವಿನಿಂದ ದೊರೆಯುವ ಕಾಯಿಯನ್ನು ಆರಿಸುವುದು ಉತ್ತಮ.
– ಬೀಜಕ್ಕೆ ಆಯ್ಕೆ ಮಾಡುವ ತರಕಾರಿಯು ಸಂಪೂರ್ಣವಾಗಿ ಗಿಡದಲ್ಲಿ ಬೆಳೆದು ಹಣ್ಣಾದ ನಂತರ ಕೊಯ್ದು ಮಾಡುವುದು ಸೂಕ್ತ. ಕೊಯ್ದು ಮಾಡಿದ ನಂತರ ಕಾಯಿಯನ್ನು ಮೂರು ಸಮಾನ ಭಾಗಗಳಾಗಿ ತುಂಡರಿಸಿ.
– ಬೀಜಗಳನ್ನು ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸಲೇಬಾರದು. ಆಯಾಯ ಋತುಮಾನದ ತರಕಾರಿ ಬೀಜವನ್ನು ಆಯಾಯ ಋತುಮಾನಕ್ಕೆ ಉಪಯೋಗಿಸುವುದು.
– ಕಟ್ಟಿಗೆ ಬೂದಿಯಲ್ಲಿ ಬೀಜಗಳನ್ನು ಮಿಶ್ರಣಮಾಡಿ ಡಬ್ಬದಲ್ಲಿ ಶೇಖರಿಸಿಡಬಹುದು. ಗಾಳಿಯಾಡದ ಡಬ್ಬದೊಳಗೆ ತೇವಾಂಶ ಇರದಂತೆ ಬೀಜಗಳನ್ನು ಶೇಖರಿಸಿಡಬಹುದು.
– ಗೆಡ್ಡೆಗಳ ಬೀಜಗಳನ್ನು ಕುಂಡಗಳಲ್ಲಿ ಮಣ್ಣು ತುಂಬಿ ನೀರು ಬೀಳದಂತೆ ಇಟ್ಟಲ್ಲಿ ಸುರಕ್ಷಿತವಾಗಿರುವುದು.
– ಒಂದು ಬಾರಿ, ಚಟ್ಟೆಯಲ್ಲಿ ತರಕಾರಿ ಬೆಳೆಸಿದ ಮಣ್ಣಿಗೆ ಕಾಡಿನ ಮಣ್ಣು ಮಿಶ್ರಣ ಮಾಡಿ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ತಾರಸಿಯಲ್ಲಿ ಬಾಲ್ಕನಿಗಳಲ್ಲಿ ಚಟ್ಟೆಯನ್ನು ಇಟ್ಟು ಕೈತೋಟ ಮಾಡುವವರು ರಬ್ಬರ್, ಶಿಟಿನ ಹೊದಿಕೆ ಹಾಕಿಕೊಳ್ಳುವುದು ಉತ್ತಮ.
– ಹೂ ಬಿಟ್ಟು, ಕಾಯಿ ಕಟ್ಟಿದ ದಿನವೇ ಕಾಗದದ ಲಕೋಟೆ ಅಥವಾ ಪಾಲಿಥಿನ್ ಚೀಲವನ್ನು ಕಟ್ಟುವುದರಿಂದ ಉತ್ತಮ ಗುಣಮಟ್ಟದ ತರಕಾರಿ ಪಡೆಯಬಹುದು.
– ಯಾವುದೇ ತರಕಾರಿ ಗಿಡದ ಸುತ್ತಲೂ ತೆಂಗಿನ ಗರಿಯ ಕಡ್ಡಿಗಳನ್ನು ಇಡುವುದರಿಂದ ಕೀಟಗಳ ಉಪಟಳದಿಂದ ತಪ್ಪಿಸಬಹುದು. ಯಾಕೆಂದರೆ ಕೆಲವು ಕೀಟಗಳು ಹಲ್ಲು ಹರಿತ ಮಾಡುವುದಕ್ಕೋಸ್ಕರ ಗಿಡಗಳನ್ನು ಕತ್ತರಿಸುತ್ತವೆ. ತೆಂಗಿನ ಗರಿಯ ಕಡ್ಡಿ ಸಿಕ್ಕಾಗ ಅವುಗಳನ್ನು ಮಾತ್ರ ತುಂಡರಿಸಿ ಗಿಡಕ್ಕೆ ತೊಂದರೆ ಮಾಡುವುದಿಲ್ಲ.
– ಹರಿದುಹೋಗುವ ನೀರು ಅಥವಾ ಕೆರೆಯ ನೀರು ಬಳಕೆ ಉತ್ತಮ. ಕೊಳವೆ ಬಾವಿಯ ನೀರು ಆಗಿದ್ದಲ್ಲಿ ೨-೩ ದಿನಗಳ ಕಾಲ ಶೇಖರಿಸಿ ನಂತರ ಬಳಸುವುದು.
ಬಸಳೆ ತರಕಾರಿ ಬಗ್ಗೆ ಬಲ್ನಾಡಿನ ಸತೀಶ್ ಗೌಡ ಅವರು ಮಾಹಿತಿ ನೀಡಿದರು.
– ವಿವಿಧ ರೀತಿಯಲ್ಲಿ ಬಸಳೆಯನ್ನು ಬೆಳೆಸುತ್ತಾರೆ. ತಾನು 3.5 ಅಡಿ ಎತ್ತರಕ್ಕೆ ಚಪ್ಪರ ಹಾಕಿ, ಅದಕ್ಕೆ ಬಸಳೆ ಬಳ್ಳಿಯನ್ನು ಬಿಡುತ್ತೇನೆ.
– ಸಾವಯವದಲ್ಲಿ ಬಸಳೆ ಕೃಷಿ ಮಾಡಬಹುದು. ನೆಲಗಡಲೆ ಹಿಂಡಿಯನ್ನು ಗೊಬ್ಬರವಾಗಿ ಬಳಸಿದರೆ, ಬಸಳೆ ಹೊಸ ರುಚಿಯಿಂದ ಕೂಡಿದ್ದು, ದಂಡ ಅಗಲವಾಗಿರುತ್ತದೆ.
– ಬಸಳೆಯಲ್ಲಿ 2 ರೀತಿಯ ಬಸಳೆ ಇದೆ. ದಂಡು ಸಪೂರ ಇರುವ ಬಸಳೆ. ಇನ್ನೊಂದು ದಂಡ ತೋರ ಆದರೆ ಎಲೆ ಸಪೂರ.
– ಬಸಳೆಗೆ ಶೇ. 50ರಷ್ಟು ಬಿಸಿಲು ಬೇಕು. ಮಧ್ಯಾಹ್ನದ ನಂತರ ಬಿಸಿಲು ಇಲ್ಲದಿದ್ದರೆ ಉತ್ತಮ. ಅದರಲ್ಲೂ ತೆಂಕಣ ಬಿಸಿಲು ಕಡಿಮೆ ಇದ್ದರೆ ಬಸಳೆಗೆ ಒಳ್ಳೆಯದು.
– ಬಸಳೆಗೆ ಪ್ರತಿದಿನ ನೀರನ್ನು ಸಿಂಪಡಿಸಬೇಕು.
– ಬಸಳೆ ನೆಡುವಾಗ 2 ಗಂಟು ಮಣ್ಣಿನ ಅಡಿಯಲ್ಲಿರಲಿ.
– ಬಸಳೆ ನೆಟ್ಟು ಒಂದೂವರೆ ತಿಂಗಳಿಗೆ ಕಟಾವಿಗೆ ಬರುತ್ತದೆ. ದಿನಕ್ಕೆ ೫೦ ಕಟ್ಟಿನಷ್ಟು ಬಸಳೆಯನ್ನು ಕೊಯ್ಲು ಮಾಡಿದ್ದು ಇದೆ.
– ಊರಿನ ತರಕಾರಿಗಳಿಗೆ ಬೇಡಿಕೆ ಇದೆ.