ಬೆಂಗಳೂರು ಕೃಷಿ ವಿವಿಯಲ್ಲಿ ಉಪಕುಲಪತಿ ಡಾ| ನಾರಾಯಣ ಸ್ವಾಮಿ
ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನವೆಂಬರಿನಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಕೃಷಿಯಲ್ಲಿ ನವೋದ್ಯಮ ಎನ್ನುವ ಧ್ಯೇಯವಾಕ್ಯದಡಿ ಈ ಬಾರಿ ಮೇಳ ನಡೆಯಲಿದೆ ಎಂದು ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ. ನಾರಾಯಣ ಸ್ವಾಮಿ ಮಾಹಿತಿ ನೀಡಿದರು.
ಬೆಂಗಳೂರು ಕೃಷಿ ವಿವಿ ಸಭಾಂಗಣದಲ್ಲಿ ಅ. 11ರಂದು ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿ.ಕೆ.ವಿ.ಕೆ.)ದ 57ನೇ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವೆಂಬರ್ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಕೃಷಿ ಮೇಳ ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ. ಕೃಷಿಯನ್ನು ಉದ್ಯಮದತ್ತ ಕೊಂಡೊಯ್ಯುವ ದೃಷ್ಟಿಯಿಂದ ಕೃಷಿಯಲ್ಲಿ ನವೋದ್ಯಮ ಎನ್ನುವ ಧ್ಯೇಯವಾಕ್ಯ ನೀಡಲಾಗಿದೆ ಎಂದು ವಿವರಿಸಿದರು.
ಹೈದ್ರಾಬಾದ್ ಇನ್ ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್’ಟೆನ್ಷನ್ ಮ್ಯಾನೇಜ್ಮೆಂಟಿನ ಪ್ರಧಾನ ನಿರ್ದೇಶಕ ಡಾ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿದ್ದರು.
ವಿವಿಧ ಯೋಜನೆಗಳಡಿ ಅನುದಾನ ತರಿಸಿಕೊಂಡ ಪ್ರಾಧ್ಯಾಪಕರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸುದ್ದಿ ಕೃಷಿ ಕೇಂದ್ರಕ್ಕೆ ವಿವಿ, ಕೆವಿಕೆ, ಇಲಾಖೆಗಳು ಸಾಥ್
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮಂಗಳೂರು ಕೆವಿಕೆ ಹಾಗೂ ಸರಕಾರಿ ಇಲಾಖೆಗಳು ಸುದ್ದಿ ಕೃಷಿ ಕೇಂದ್ರದ ವಿವಿಧ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಅ. 11ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸುದ್ದಿ ಪ್ರತಿನಿಧಿಗಳ ಜೊತೆ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವೈಸ್ ಚಾನ್ಸಿಲರ್ ಡಾ. ನಾರಾಯಣ ಸ್ವಾಮಿ, ಸುದ್ದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಕಾರ್ಯಚಟುವಟಿಕೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮುಂದೆ ಇದರ ಬಗ್ಗೆ ವಿವರವಾಗಿ ಮಾಹಿತಿ ಪಡೆದುಕೊಂಡು, ಕೃಷಿ ವಿವಿ ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಎನ್ನುವುದನ್ನು ಯೋಚಿಸಿ, ಮುಂದಡಿ ಇಡುವ ಎಂದು ತಿಳಿಸಿದರು.
ದಕ್ಷಿಣ ಕನ್ನಡದ ಕೃಷಿಕರ ಮನೆ ಬಾಗಿಲಿಗೇ ಕೃಷಿ ಸಂಬಂಧಿತ ಮಾಹಿತಿ ಹಾಗೂ ಸೌಲಭ್ಯಗಳನ್ನು ತಲುಪಿಸುವ ಹಿನ್ನೆಲೆಯಲ್ಲಿ ಸುದ್ದಿ ಕೃಷಿ ಕೇಂದ್ರ ಮುಂದಡಿ ಇಟ್ಟಿದ್ದು, ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ನೆರವು ಅಗತ್ಯವಿದೆ. ವಿಶ್ವವಿದ್ಯಾಲಯದ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಸಹಕಾರ ನೀಡಿದರೆ ಉತ್ತಮ ಎಂದು ಡಾ| ನಾರಾಯಣ ಸ್ವಾಮಿ ಅವರಲ್ಲಿ ಕೇಳಿಕೊಳ್ಳಲಾಯಿತು. ಸುದ್ದಿ ಕೃಷಿ ಕೇಂದ್ರದ ಕನ್ಸಲ್ಟಿಂಗ್ ಅಡ್ವೈಸರ್ ಚೇತನ್ ಶರ್ಮಾ ಹಾಗೂ ಗಣೇಶ್ ಎನ್. ಕಲ್ಲರ್ಪೆ ಉಪಸ್ಥಿತರಿದ್ದರು.