ಪುತ್ತೂರು:ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಹೋರಾಟಕ್ಕೆ ಇಳಿದಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳದಿಂದ ಹೊರಟ ಒ.ಪಿ.ಎಸ್.(ನಿಶ್ಚಿತ ಪಿಂಚಣಿ)ಸಂಕಲ್ಪ ಯಾತ್ರೆಯನ್ನು ಅ.17ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಸ್ವಾಗತಿಸಲಾಯಿತು. ಹಲವಾರು ಮಂದಿ ಎನ್‌ಪಿಎಸ್ ಸರಕಾರಿ ನೌಕರರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಎನ್‌ಪಿಎಸ್ ನೌಕರರು ಮಾಹಿತಿ ಪತ್ರ ನೀಡಿದರು.
‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಮಾನಸಿಕವಾಗಿ ಸಿದ್ಧರಾಗಿ: ಸಂಕಲ್ಪ ಯಾತ್ರೆ ವಾಹನದಲ್ಲಿ ಆಗಮಿಸಿದ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಎನ್.ಪಿ.ಎಸ್.ನೀತಿಯ ಪ್ರಕಾರ ನಿವೃತ್ತಿ ಆಗುವವರೆಗೆ ಮಾತ್ರ ಸರಕಾರಿ ನೌಕರರು ಎಂದು ಪರಿಗಣಿಸಲಾಗುತ್ತಿದೆ.ನಂತರ ಯಾವುದೇ ಜೀವನ ಭದ್ರತೆ ಭರವಸೆ ನೀಡುತ್ತಿಲ್ಲ. ದೇಶದ ಸರ್ವೋಚ್ಛ ನ್ಯಾಯಾಲಯ ಸರಕಾರಿ ನೌಕರರ ಹಿತಕಾಯುವ ಆದೇಶ ಹೊರಡಿಸಿದ್ದರೂ ಸರಕಾರ ಅದನ್ನು ನಿರಾಕರಿಸಿ ವಂಚನೆ ಮಾಡುತ್ತಿದೆ.ಈ ನಿಟ್ಟಿನಲ್ಲಿ ಪಿಂಚಣಿ ವಿಚಾರವನ್ನು ಮುಖ್ಯವಾಗಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದರು. ಡಿ.19ರಂದು ಸಾವಿರಾರು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಎನ್.ಪಿ.ಎಸ್.ನೌಕರರ ನಿರ್ಣಾಯಕ ಹಂತದ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಹೋರಾಟದಲ್ಲಿ ಎನ್.ಪಿ.ಎಸ್.ನೌಕರರ ಪರ ಆದೇಶವನ್ನು ತೆಗೆದುಕೊಂಡೇ ಬರುತ್ತೇವೆ.ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯಾತ್ರೆ ಈಗಾಗಲೇ 10 ಜಿಲ್ಲೆಗಳಿಗೆ ಸಂಪರ್ಕ ಮಾಡಿದ್ದು, ಇನ್ನೂ ೨೦ ಜಿಲ್ಲೆಗಳಿಗೆ ತೆರಳಲಿದೆ ಎಂದ ಅವರು, ನಮ್ಮ ಹೋರಾಟ ಮಾಡು ಇಲ್ಲವೇ ಮಡಿ, ಈ ನಿಟ್ಟಿನಲ್ಲಿ ಹೋರಾಟಕ್ಕೆ ಮಾನಸಿಕವಾಗಿ ಸಿದ್ದರಾಗಿ ಎಂದರು.
ಎನ್.ಪಿ.ಎಸ್. ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ್ ಮಾತನಾಡಿ ಸರಕಾರಿ ನೌಕರರು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಜವಾಬ್ದಾರಿ ವಹಿಸಿದರೂ ಜನಪ್ರತಿನಿಧಿಗಳಿಗೆ ನೀಡುವ ಆರ್ಥಿಕ ಭದ್ರತೆಯ ಕನಿಷ್ಠ ಸವಲತ್ತನ್ನೂ ಸರಕಾರಿ ನೌಕರರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಣ ಗೌಡ, ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್, ಸಂಘಟನಾ ಕಾರ್ಯದರ್ಶಿ ದಯಾನಂದ್, ಜಿಲ್ಲಾ ಘಟಕದ ಅಧ್ಯಕ್ಷ ವಿಲ್ಪ್ರೆಡ್, ಇಬ್ರಾಹಿಂ, ತಾಲೂಕು ಸಂಘದ ಅಧ್ಯಕ್ಷ ವಿಮಲ್ ಕುಮಾರ್, ರಾಜ್ಯ ಪ್ರತಿನಿಧಿ, ವಿದ್ಯಾಧರ್, ಬೆಳ್ತಂಗಡಿಯ ಸುರೇಶ್, ಪುತ್ತೂರು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ್, ಸುಳ್ಯದ ಚಂದ್ರಶೇಖರ್, ಸಂತೋಷ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಕಾರ್ಯದರ್ಶಿ ವಿಜಯ, ಪುತ್ತೂರು ತಾಲೂಕು ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್, ಕಡಬ ರಾಜ್ಯ ಪರಿಷತ್ ಸದಸ್ಯ ಮಮಾಚ್ಚನ್, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಸುಳ್ಯ ಗ್ರಾಮಕರಣಿಕರ ಸಂಘದ ಅಧ್ಯಕ್ಷ ತಿಪ್ಪೆಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಶ್ ಎಮ್, ಎನ್‌ಪಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲ, ಸುಳ್ಯ ಶಾರದಾ ಕಾಲೇಜಿನ ದಾಮೋದರ್, ಜಗನ್ನಾಥ ಅರಿಯಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಕೆಯ್ಯೂರು ಗ್ರಾ.ಪಂ ನಿವೃತ್ತಿ ಕಾರ್ಯದರ್ಶಿ ಎನ್.ಪಿ.ಎಸ್.ನೌಕರ ಸುಬ್ರಹ್ಮಣ್ಯರವರು ತನ್ನ ನಿವೃತಿಯ ಸಂದರ್ಭ ನಗದು ನೀಡಿದ ಬಳಿಕ ನನಗೆ ತಿಂಗಳಿಗೆ ಕೇವಲ ರೂ.2,411 ಮಾತ್ರ ಬರುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸುಳ್ಯ ಮತ್ತು ಪುತ್ತೂರಿನ ಸಂಘಕ್ಕೆ ಹೋರಾಟದ ಧ್ವಜ ಹಸ್ತಾಂತರ ಮಾಡಲಾಯಿತು.ಎನ್.ಪಿ.ಎಸ್. ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಾಚಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಡಿ.19 ರಂದು ಸಾವಿರಾರು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಎನ್.ಪಿ.ಎಸ್.ನೌಕರರ ನಿರ್ಣಾಯಕ ಹಂತದ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಹೋರಾಟದಲ್ಲಿ ಎನ್.ಪಿ.ಎಸ್.ನೌಕರರ ಪರ ಆದೇಶವನ್ನು ತೆಗೆದುಕೊಂಡೇ ಬರುತ್ತೇವೆ.ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯಾತ್ರೆ ಈಗಾಗಲೇ ೧೦ ಜಿಲ್ಲೆಗಳಿಗೆ ಸಂಪರ್ಕ ಮಾಡಿದ್ದು, ಇನ್ನೂ 20 ಜಿಲ್ಲೆಗಳಿಗೆ ತೆರಳಲಿದೆ
–ಶಾಂತಾರಾಮ್,ರಾಜ್ಯಾಧ್ಯಕ್ಷ
ಎನ್‌ಪಿಎಸ್ ನೌಕರರ ಸಂಘ