ಕಡಬ: ಸರ್ವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಮರ್ದಾಳದ ನ್ಯಾಯ ಬೆಲೆ ಅಂಗಡಿ ಎದುರು ಪಡಿತರ ಚೀಟಿದಾರರು ಹಲವು ಗಂಟೆಗಳ ಕಾಲ ಕಾದು ಮತ್ತೆ ಮನೆ ದಾರಿ ಹಿಡಿದ ಘಟನೆ ವರದಿಯಾಗಿದೆ.
ಬೆಳಗ್ಗಿನಿಂದಲೇ ಸರ್ವರ್ ಸಮಸ್ಯೆ ಉಂಟಾಗಿ ಪಡಿತರ ಚೀಟಿದಾರರ ಅಸಮಧಾನಕ್ಕೆ ಕಾರಣವಾಯಿತು. ಮದ್ಯಾಹ್ನದ ವೇಳೆ ಕೆಲ ಹೊತ್ತು ಸರ್ವರ್ ಸಮಸ್ಯೆಯಿಂದ ಮುಕ್ತಿ ಸಿಕ್ಕಿದೆ ಎನ್ನಲಾಗಿದ್ದು ಕೆಲವರಿಗೆ ಪಡಿತರ ಅಕ್ಕಿ ಸಿಕ್ಕಿದೆ. ಇನ್ನು ಕೆಲವರು ಮನೆಯತ್ತ ಮುಖ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆವೈ) ಹಾಗೂ ರಾಜ್ಯ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (ಎನ್ಎಸ್ಎಫ್ಎ) ಅಡಿಯಲ್ಲಿ ಪಡಿತರ ಧಾನ್ಯ ಪಡೆದುಕೊಳ್ಳಲು ಪಡಿತರ ಚೀಟಿದಾರರು ಏಕಕಾಲಕ್ಕೆ ಎರಡೆರಡು ಬಾರಿ ಬಯೋಮೆಟ್ರಿಕ್ ಕೊಡಬೇಕು. ಪರಿಣಾಮ ಸರ್ವರ್ ದೋಷವಿದ್ದ ಕಾರಣ ಪಡಿತರ ಚೀಟಿದಾರರು ರೇಷನ್ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿಯೇ ಪಡೆಯಬೇಕು. ಇಲ್ಲದೆ ಹೋದಲ್ಲಿ ಪಡಿತರದಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಪಡಿತರ ಚೀಟಿದಾರರು ಧಾನ್ಯ ಪಡೆದುಕೊಳ್ಳಲು ಬೆಳಗ್ಗೆಯಿಂದ ಸಂಜೆಯವರೆಗೆ ಕಾಯುವುದು ಅನಿವಾರ್ಯವಾಗಿದೆ.