ಕಾಣಿಯೂರು: ಬೆಳಂದೂರು ಗ್ರಾಮದ ಅಂಕಜಾಲು ಎಂಬಲ್ಲಿದ್ದ ರಝಾಕ್ ಎಂಬವರ ಗೂಡಂಗಡಿಯನ್ನು ಸ್ಥಳೀಯಾಡಳಿತದ ನಿರ್ಣಯದಂತೆ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿಯವರ ಉಪಸ್ಥಿತಿಯಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಜೆಸಿಬಿ ಮೂಲಕ ಬುಧವಾರ ತೆರವುಗೊಳಿಸಲಾಯಿತು.
ರಝಾಕ್ ಅವರು ಪುತ್ತೂರು-ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅಂಕಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸಲು ಸ್ಥಳೀಯಾಡಳಿತದಿಂದ ತಾತ್ಕಾಲಿಕ ಪರವಾನಿಗೆ ಪಡೆದು ವ್ಯಾಪಾರ ನಡೆಸುತ್ತಿದ್ದರು. ಇದಾದ ಬಳಿಕ ತಳ್ಳುಗಾಡಿಯನ್ನು ಗೂಡಂಗಡಿಯಾಗಿ ಪರಿವರ್ತಿಸಿ ವ್ಯಾಪಾರ ನಡೆಸುತ್ತಿದ್ದರು. ಆದರೆ ಇದಕ್ಕೆ ಪರವಾನಿಗೆ ಪಡೆದಿರಲಿಲ್ಲ. ಅಲ್ಲದೆ ರಸ್ತೆಯಂಚಿನಲ್ಲಿದ್ದ ಕಾರಣದಿಂದ ಈ ಅಂಗಡಿಯನ್ನು ತೆರವುಗೊಳಿಸುವಂತೆ ಪುಷ್ಪಾವತಿ ಕಳುವಾಜೆ ಅವರು ದೂರು ಅರ್ಜಿ ಸಲ್ಲಿಸಿದ್ದರು. ಗ್ರಾಮ ಸಭೆಯಲ್ಲಿಯೂ ಪ್ರಸ್ತಾಪಿಸಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಈ ವಿಚಾರದ ಬಗ್ಗೆ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಅವರಿಗೆ ಗ್ರಾ.ಪಂ ವತಿಯಿಂದ ಪತ್ರಬರೆಯಲಾಗಿತ್ತು. ಬಳಿಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಅಂಗಡಿಯನ್ನು ತೆರವುಗೊಳಿಸಲು ರಝಾಕ್ ಅವರಿಗೆ ನೋಟೀಸು ನೀಡಲಾಯಿತು. ಇದಕ್ಕೆ ರಝಾಕ್ ಅವರಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದುದರಿಂದ ತೆರವುಗೊಳಿಸಲಾಗಿದೆ ಎಂದು ಗ್ರಾ.ಪಂ. ಮೂಲಗಳು ತಿಳಿಸಿವೆ. ತೆರವುಗೊಳಿಸುವ ಸಂದರ್ಭ ಪಿಡಿಓ ನಾರಾಯಣ ಉಪಸ್ಥಿತರಿದ್ದರು. ಬೆಳ್ಳಾರೆ ಪೊಲೀಸರು ರಕ್ಷಣೆ ನೀಡಿದರು.