ಕಡಬ: ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಹಣಕ್ಕೆ ಪೀಡಿಸಿ ಥಳಿಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ ಚಿತ್ರದುರ್ಗದ ಭೀಮಣ್ಣ ಗೌಡ ಎಂಬುವವರನ್ನು ಕಡಬ ಠಾಣೆಗೆ ವರ್ಗಾಯಿಸಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ಕಡಬ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಿನಿತ್ ಮರ್ದಾಳ ಅವರು, ದೂರುದಾರನ ವ್ಯಾಪ್ತಿಗೆ ಪೋಲಿಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದು ಖಂಡನೀಯ, ಇದರಿಂದ ದೂರುದಾರನ ಮೇಲೆ ಪೋಲಿಸ್ ಸಿಬ್ಬಂದಿ ಸೇಡು ತೀರಿಸಿಕೊಳ್ಳುವ ಸಂಭವ ಇದೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಡಬ ಠಾಣೆಗೆ ವರ್ಗಾಯಿಸಿದಲ್ಲಿ ಸಿಬ್ಬಂದಿ ಹಾಜರಾದ ದಿನವೇ ಕಡಬ ಠಾಣೆ ಎದುರು ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಜಾತ್ರೆಯಲ್ಲಿ ಹಣ ನೀಡಿಲ್ಲ ಅನ್ನುವ ಕಾರಣಕ್ಕೆ ವ್ಯಾಪಾರಿ ಯುವಕ ಕಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಅವರಿಗೆ ಭೀಮಣ್ಣ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನುವ ದೂರು ದಾಖಲಾಗಿತ್ತು.