ಉಪ್ಪಿನಂಗಡಿ: ಶನಿವಾರ ಸಂಜೆ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಚರಂಡಿಯಲ್ಲಿ ನೀರು ಉಕ್ಕಿ ತಗ್ಗು ಪ್ರದೇಶಕ್ಕೆ ನುಗ್ಗಿದ ಘಟನೆ ನಡೆದಿದೆ.
ಸಾಯಂಕಾಲವಾದಂತೆಯೇ ಆಕಾಶದಲ್ಲಿ ಕಾಣಿಸಿಕೊಂಡ ಕಾರ್ಮೋಡ ಮಳೆಯಾಗಿ ಸುರಿಯತೊಡಗಿದ್ದು, ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ನೀರು ಸರಾಗವಾಗಿ ಹರಿಯಲಾಗದೆ ಹಲವೆಡೆ ತಗ್ಗು ಪ್ರದೇಶಗಳನ್ನಾವರಿಸಿ ಹಾನಿಯನ್ನುಂಟು ಮಾಡಿತ್ತು. 34ನೇ ನೆಕ್ಕಿಲಾಡಿಯ ಲೋಕಯ್ಯ ಎಂಬವರ ಕ್ಯಾಂಟೀನ್ ಗೆ ಮಳೆ ನೀರು ನುಗ್ಗಿ ಸಮಸ್ಯೆಯನ್ನು ಸೃಷ್ಟಿಸಿತು. ಇದೇ ಪರಿಸರದಲ್ಲಿ ಹೋಟೆಲೊಂದಕ್ಕೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಚರಂಡಿ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಸರಿಯಾಗಿ ಚರಂಡಿಯಲ್ಲಿ ನೀರು ಹರಿಯದೇ ಇವೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಯಂಕಾಲದ ವೇಳೆ ಸುರಿಯುವ ಭಾರೀ ಮಳೆ ಹಲವು ಸಮಸ್ಯೆಗಳನ್ನು ಮೂಡಿಸುತ್ತಿದ್ದು, ಮುಂಬರುವ ದೀಪಾವಳಿ ಹಬ್ಬಕ್ಕೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆ ಎದುರಾಗಿದೆ.