ಸಲಾಂ ಶಬ್ದದಂತೆ ದೇಗುಲದಲ್ಲಿ ಬಳಕೆಯಲ್ಲಿರುವ ಇನ್ನಿತರ ಪದಗಳನ್ನೂ ಬದಲಾಯಿಸುವುದು ಸೂಕ್ತ- ಪಿ.ಜಿ.ಚಂದ್ರಶೇಖರ್ ರಾವ್

0

ಪುತ್ತೂರು:ಯಾವುದೇ ದೇಗುಲದಲ್ಲಿ ಯಾವ ವ್ಯಕ್ತಿಯ ಹೆಸರಲ್ಲೂ ಆರತಿ ನಡೆಯುತ್ತಿಲ್ಲ. ಸಲಾಂ ಮತ್ತು ದೇಗುಲದಲ್ಲಿ ಬಳಕೆಯಲ್ಲಿರುವ ಇನ್ನಿತರ ಕನ್ನಡವಲ್ಲದ ಪದಗಳನ್ನೂ ಬದಲಾಯಿಸುವುದು ಮಾತ್ರ ಸೂಕ್ತ ಎಂದು ದೇವಾಲಯಗಳ ಅಧ್ಯಯನಕಾರ ಪಿ.ಜಿ.ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ.

ಹಿಂದೆ ಅರಸೊತ್ತಿಗೆ ಕಾಲದಲ್ಲಿ ರಾಜಾಶ್ರಯದಲ್ಲೇ ದೇಗುಲಗಳ ನಿರ್ವಹಣೆಯಾಗುತ್ತಿತ್ತು. ರಾಜರು ಅಥವಾ ಅವರ ಅಧಿಕೃತ ಪ್ರತಿನಿಧಿಗಳು ವಾರಕ್ಕೊಮ್ಮೆ ಅಥವಾ ಜಾತ್ರೆ, ಹಬ್ಬ ಹರಿದಿನಗಳ ವಿಶೇಷ ದಿನಗಳಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ, ದೇಗುಲಕ್ಕೆ ಆಗಮಿಸಿ ಲೋಕಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ದೇಗುಲದ ಆಗುಹೋಗುಗಳ ಮಾಹಿತಿ ಗ್ರಾಹ್ಯಮಾಡಿ ಸಲಹೆ ನೀಡುತ್ತಿದ್ದರು. ಅರಸರು ಅಥವಾ ಪ್ರತಿನಿಧಿಗಳು ದೇಗುಲಕ್ಕೆ ಆಗಮಿಸುವ ಹೊತ್ತಿನಲ್ಲಿ ವಿದ್ಯುತ್ ದೀಪ ಎಂಬ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ದೀವಟಿಗೆಯ ಬೆಳಕಿನಲ್ಲಿ ವಾದ್ಯ ಘೋಷದೊಂದಿಗೆ ಅವರನ್ನು ಬರಮಾಡಿಕೊಳ್ಳುವ ಕ್ರಮ ಜಾರಿಯಲ್ಲಿತ್ತು. ಅವರು ದೇಗುಲದ ಗುಡಿಗಳಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸುವ ಸಂದರ್ಭದಲ್ಲಿ ಪ್ರಧಾನ ಗುಡಿಗೂ, ಪರಿವಾರಗುಡಿಗಳ ದೇವರಿಗೂ ಆರತಿಯನ್ನು ಬೆಳಗುವ ಸಂಪ್ರದಾಯ ಬಂತು. ಈ ಕ್ರಮವೇ ಇಂದೂ ಹಲವು ದೇಗುಲಗಳಲ್ಲಿ ಪಾಲನೆಯಲ್ಲಿದೆ. ನಂತರದಲ್ಲಿ ಮೊಕ್ತೇಸರರು ಅಥವಾ ಕಾರ್ಯನಿರ್ವಹಣಾಧಿಕಾರಿಗಳು ಈ ದೀವಟಿಗೆ ನಮಸ್ಕಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ದೀವಟಿಗೆ (ಕೈಬೆಳಕು)ಎಂಬುದು ಬೆಳಕಿಗಾಗಿ ಮಾತ್ರ ಬಳಸಲ್ಪಡುವುದು. ನಮಸ್ಕಾರ ದೇವರಿಗೆ ಸಲ್ಲುವಂತದ್ದು ಹೊರತು ವ್ಯಕ್ತಿಗಲ್ಲ ಎಂಬುವುದು ಅತ್ಯಂತ ಸ್ಪಷ್ಟ ಆಚರಣೆ. ಗ್ಯಾಸ್ ಲೈಟ್, ವಿದ್ಯುತ್ ಸಂಪರ್ಕ ಬಂದ ನಂತರವೂ ತುಳುನಾಡಿನಲ್ಲಿ ಜಾತ್ರೆ, ಭೂತಾರಾಧನೆಯಲ್ಲಿ ದೀವಟಿಗೆ, ಪಂಚ ದೀವಟಿಗೆ, ದೊಂದಿ, ತೆಂಗಿನಗರಿಗಳ ತೂಟೆಗಳು ಇಂದಿಗೂ ಸಂಪ್ರದಾಯದ ಪಾಲನೆಗಾಗಿ ಬಳಸಲ್ಪಡುತ್ತಿದೆ. ದೇಗುಲದಲ್ಲಿ ಮುಜರಾಯಿ,  ಪಾಳಿ, ಪಾರುಪಥ್ಯಗಾರ, ಮಣೆಗಾರ, ಸರ್ತಿ, ಪೌಳಿ , ದಂಡು ಸಿಲಾಲು, ಮೊಕ್ತೇಸರ, ತಸ್ತೀಕು, ಏಲಂ, ಖಾಯಸ್, ಸಲಾಂ, ಮುಂತಾದ ಶಬ್ದಗಳೊಂದಿಗೆ ಅರೇಬಿಕ್ ಉರ್ದು ಶಬ್ದಗಳು ಮಧ್ಯದಲ್ಲಿ ಕೆಲಕಾಲ ಆಡಳಿತ ನಡೆಸಿದ ಮುಸ್ಲಿಮ್‌ರ ಅವಧಿಯಲ್ಲಿ ನುಸುಳಿಕೊಂಡು ಚಾಕರಿಯವರ ಮೂಲಕ ಅದೇ ಶಬ್ದಗಳು ಆಡುಭಾಷೆಯಲ್ಲಿ ಮುಂದುವರಿಯಿತು ಅಷ್ಟೇ ..ಯಾವುದೇ ದೇಗುಲದಲ್ಲಿ ಯಾವ ವ್ಯಕ್ತಿಯ ಹೆಸರಲ್ಲೂ ಆರತಿ ನಡೆಯುತ್ತಿಲ್ಲ. ಸಲಾಂ ಮತ್ತು ದೇಗುಲದಲ್ಲಿ ಬಳಕೆಯಲ್ಲಿರುವ ಇನ್ನಿತರ ಕನ್ನಡವಲ್ಲದ ಪದಗಳನ್ನು ಬದಲಾಯಿಸುವುದು ಮಾತ್ರ ಸೂಕ್ತ ಎಂದು ಪಿ.ಜಿ.ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಪುತ್ತೂರು ದೇಗುಲದಲ್ಲಿರುವ ಪುರಾತನ ಶಾಸನವೊಂದರಲ್ಲಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ.
ವಿಜಯನಗರ ರಾಜರು 1336ರಿಂದ 1565 ರ ವರೆಗೆ ಮೈಸೂರು ಯದುವಂಶದವರು 1399 ರಿಂದ 1761 ರವರಿಗೆ ರಾಜ್ಯಭಾರ ನಡೆಸಿದ್ದರು.ಆದಿಲ್ ಶಾ , ಸ್ವಲ್ಪ ಕಾಲ, ಹೈದರಾಲಿ, ಟಿಪ್ಪು 1761 ರಿಂದ 1799 ರವರೆಗೆ ಆಳಿದ್ದರು. ನಂತರದಲ್ಲಿ ಮೈಸೂರು ರಾಜ್ಯ ಉದಯವಾಗುವವರೆಗೂ ಮೈಸೂರು ಒಡೆಯರ ವಂಶದವರೇ ಆಳಿರುತ್ತಾರೆ. ಅಂದರೆ ಟಿಪ್ಪುವಿಗಿಂತ ಎಷ್ಟೋ ಕಾಲದ ಮೊದಲೇ ಹಿಂದೂ ರಾಜರುಗಳ ಅರಸೊತ್ತಿಗೆಯ ಕಾಲದಲ್ಲಿ ಈ ಆರತಿ ನಡೆಯುತ್ತಿತ್ತು. ಪ್ರದೋಷ ಪೂಜೆಯೇ ಬೇರೆ ಈ ಆರತಿಯೇ ಬೇರೆ. ಪ್ರದೋಷಪೂಜೆಯು ಆಗಮೋಕ್ತ ಪದ್ಧತಿಯಲ್ಲೇ ಜರಗುವುದು. ದೇವೀ ಜಗನ್ಮಾತೆ ಭಜನೆಯಲ್ಲಿ ಜಯಚಾಮರಾಜನಿಗೆ ಜಯಭಾಗ್ಯಗಳನೀವ ನಯಭರಿತೆ ಶ್ರೀನೇತ್ರೆ ಶಿವಯೋಗಿ ವಾಗ್ದೇವಿ… ಎಂದೂ ಮತ್ತು ಅಮ್ಮಾ ಬಾರಮ್ಮಾ …ಭಜನೆಯಲ್ಲಿ ರಾಜ ರಾಜರಿಂದ ಪೂಜಿಸಲ್ಪಡುವ ರಾಜೇಶ್ವರೀ ನೀ ಬಾರಮ್ಮಾ ಎಂದೂ ಪೊಗಳಿದ್ದಾರೆ .. ಪೂರ್ವಶಿಷ್ಟ ಪದ್ಧತಿಯಂತೆ ಈ ಆರತಿಯನ್ನು ಸ್ಥಗಿತಗೊಳಿಸುವುದು ಪ್ರಸಕ್ತ ಕಾಲಕ್ಕೂ ಮುಂದಿನ ಪೀಳಿಗೆಗೂ ಪ್ರಶಸ್ತವಲ್ಲ .. ಲೋಕಕ್ಕೆ ಶ್ರೇಯಸ್ಕರವಲ್ಲ
ಆರತಿ ಬೆಳಗಲಿ ಲೋಕಕಲ್ಯಾಣವಾಗಲಿ..

ಪಿ.ಜಿ.ಚಂದ್ರಶೇಖರ್ ರಾವ್

LEAVE A REPLY

Please enter your comment!
Please enter your name here