ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯ ವಾರ್ಷಿಕೋತ್ಸವ

0

ಸಾಧನೆಗೆ ಪರಿಶ್ರಮ, ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ ಮುನ್ನುಡಿ-ಸಿಸ್ಟರ್ ಫ್ಲಾವಿಯಾ ವಿಲ್ಮಾ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ವಿದ್ಯಾರ್ಥಿಯು ತಮ್ಮ ಮುಂದಿನ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು, ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಸೋತರೂ ಎದೆಗುಂದದೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಸಾಧನೆಯ ಶಿಖರವೇರಲು ಸಾಧ್ಯ ಎಂದು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರೊಕ್ಯೂರೇಟರ್ ಸಿಸ್ಟರ್ ಫ್ಲಾವಿಯಾ ವಿಲ್ಮಾ ಬಿ.ಎಸ್‌ರವರು ಹೇಳಿದರು.

ಡಿ.9 ರಂದು ದರ್ಬೆ-ಬೆಥನಿ ವಿದ್ಯಾಸಂಸ್ಥೆಯ ಪ್ರಾಂಗಣದಲ್ಲಿ ಜರಗಿದ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಹೆತ್ತವರು ಬೆಥನಿ ವಿದ್ಯಾಸಂಸ್ಥೆಯ ಗುಣಮಟ್ಟದ ಶಿಕ್ಷಣ ಅರಿತು ತಮ್ಮ ಮಕ್ಕಳನ್ನು ಸೇರಿಸಿದಿರಿ. ವಿದ್ಯಾರ್ಥಿಗಳು ನಮ್ಮೀ ವಿದ್ಯಾಸಂಸ್ಥೆಯ ಸವಲತ್ತುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಸಮಾಜದಲ್ಲಿ ಉತ್ತಮ ಭವಿಷ್ಯ ಕಟ್ಟುವಲ್ಲಿ ಹೆಜ್ಜೆಯಿಡಬೇಕು. ಎಲ್ಲರಲ್ಲೂ ಪ್ರತಿಭೆ ಇದೆ. ಪ್ರತಿಯೋರ್ವ ವಿದ್ಯಾರ್ಥಿಯೂ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಶೋಭಿಸುವಂತಾಗಬೇಕು ಮಾತ್ರವಲ್ಲ ಇತಿಹಾಸದ ಪುಟದಲ್ಲಿ ರಾರಾಜಿಸುವಂತಾಗಬೇಕು ಎಂದರು.

ಜಿಲ್ಲಾ ಟಿ.ಬಿ ಆಫೀಸರ್ ಡಾ.ಬದ್ರುದ್ದೀನ್ ಎಂ.ಎನ್ ಮಾತನಾಡಿ, ಕೋವಿಡ್ ಸಮಯದಲ್ಲಿ ಜನರ ಕ್ಷೇಮ ವಿಚಾರಿಸಲು ವೈದ್ಯರು ಮತ್ತು ಪೊಲೀಸ್ ಇಲಾಖೆ ಕಾರ್ಯೋನ್ಮುಖರಾಗಿದ್ದೆವು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಎಲ್ಲಾ ಅನುಕೂಲತೆಗಳನ್ನು ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮುಂದಕ್ಕೆ ಹೋಗಬೇಕಾದರೆ ತಾನು ಏನು ಮಾಡಬೇಕು ಎಂಬುದರ ಅರಿವಿರಬೇಕು ಜೊತೆಗೆ ಜೀವನದ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿನ ದುಶ್ಚಟಗಳಿಗೆ ದಾಸರಾಗದೆ ಪಾಠ, ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿನ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಿ ಎಂದರು.

ಶಾಲಾ ಹಿರಿಯ ವಿದ್ಯಾರ್ಥಿ ಪ್ರಸ್ತುತ ಮಂಗಳೂರು ಕಾಪಿಕಾಡ್ ಮುಕುಂದ್ ಎಂಜಿಎಂ ರಿಯಾಲ್ಟಿ ಇದರ ಪ್ರೋಸೆಸಸ್ ಮತ್ತು ಐಟಿ ಮ್ಯಾನೇಜರ್ ಆಗಿರುವ ಶ್ರವಣ್ ಕುಮಾರ್ ಶೆಟ್ಟಿ ಎನ್ ಮಾತನಾಡಿ, ಎಸೆಸ್ಸೆಲ್ಸಿ ಬಳಿಕ ತಮ್ಮ ಸಾಧನೆಗೆ ಉತ್ತಮ ಕಲಿಕಾ ಪರಿಸರವುಳ್ಳ ಕಾಲೇಜನ್ನು ಆರಿಸಿದಾಗ ಸಾಧನೆಗೆ ಪೂರಕವಾಗಿ ಪರಿಣಮಿಸತಕ್ಕದ್ದು. ಅಂಕಗಳನ್ನು ಗಳಿಸುವುದು ಮುಖ್ಯವಲ್ಲ ಆದರೆ ಪೂರ್ವ ತಯಾರಿ ಮುಖ್ಯ. ಕಾಲೇಜು ಹಂತದ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯುವ ಮುನ್ನ ಕಾಲೇಜು ಹಂತದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಯಾವ ಕೋರ್ಸ್ ಆರಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ತಿಳಿಯುವವರಾಗಿ ಎಂದರು.

ಶಾಲಾ ಸಂಚಾಲಕಿ ಸಿಸ್ಟರ್ ಪ್ರಶಾಂತಿ ಬಿ.ಎಸ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ನಾಯಕ್, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಪ್ರೊ|ಎಡ್ವಿನ್ ಡಿ’ಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಿಸ್ಟರ್ ಆಗ್ನೇಸ್ ಶಾಂತಿ ಸ್ವಾಗತಿಸಿ, ಶಿಕ್ಷಕಿ ಹೇಮಲತಾ ವಂದಿಸಿದರು. ಪಾಠ, ಪಾಠ್ಯೇತರ, ಕ್ರೀಡೆ, ಸ್ಕೌಟ್ಸ್-ಗೈಡ್ಸ್ ಚಟುವಟಿಕೆಗಳಲ್ಲಿನ ವಿಜೇತ ಸಾಧಕರ ಹೆಸರನ್ನು ಶಿಕ್ಷಕಿಯರಾದ ಪ್ರಜೋತಿ, ಝರೀನಾ, ಪವಿತ್ರಾರವರು ಓದಿದರು. ಶಾಲಾ ನಾಯಕರಾದ ಅಮ್ರ ಫಾತಿಮ, ಎರೋಲ್ ಶಮನ್ ಡಿ’ಸೋಜರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶಾಲಾ ವರದಿಯನ್ನು ವಾಚಿಸಿದರು. ಶಾಲಾ ಶಿಕ್ಷಕಿಯರಾದ ಸಿಸ್ಟರ್ ಪವಿತ್ರಾ ಎಫ್.ಸಿ.ಸಿ ಹಾಗೂ ಬೃಂದಾ ಕೆ.ಎಂ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಪ್ರತಿಭಾವಂತರಿಗೆ ಸನ್ಮಾನ…

2021-22ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ಶಾಲಾ ವಿದ್ಯಾರ್ಥಿಗಳಾದ ಕೆ.ಪ್ರಮೀತ್ ರೈ, ಹಲೀಮತ್ ಶೈಮಾ(ತಲಾ 623 ಅಂಕ), ಹರ್ಷಿತಾ ರೈ(622 ಅಂಕ), ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೃಣಾಲ್ ಮಸ್ಕರೇನ್ಹಸ್, ತ್ರೋಬಾಲ್ ಪಂದ್ಯಾಟದಲ್ಲಿ ಅವನಿ ರೈ(ನಾಯಕಿ), ವೈಶಾಲಿ, ವೈಷ್ಣವಿ, ಡಿಯೋರಾ ಐನಿಶ್ ರೆಬೆಲ್ಲೊ, ಸೊಹಾನಿ ಕುಟಿನ್ಹಾ, ತ್ರೋಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಿಯಾ ಜೆ.ರೈ, ಫಾತಿಮತ್ ಅಫೀದಾ, ಈಜು ಸ್ಪರ್ಧೆಯಲ್ಲಿ ಪ್ರತೀಕ್ಷಾ ಎನ್.ಶೆಣೈ ಹಾಗೂ ಪ್ರಾಧಿ ಕ್ಲೇರಾ ಪಿಂಟೋ, ಕ್ರೀಡಾ ಪ್ರತಿಭೆಗಳ ಸಾಧನೆಗೆ ಕಾರಣಕರ್ತರಾದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್, ಅಕ್ಷಯ್ ಕುಮಾರ್, ಹರೀಶ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ಲಾಟಿನಂ ಜ್ಯುಬಿಲಿ ಉದ್ಘಾಟನೆ..

ಮಾನವ ಭ್ರಾತೃತ್ವದ ಕಡೆಗೆ ಜೀವನದ ಪರಿಪೂರ್ಣತೆಗಾಗಿ ಶಿಕ್ಷಣ ಎಂಬ ಧ್ಯೇಯದೊಂದಿಗೆ ಆರಂಭಿಸಿದ ಬೆಥನಿ ವಿದ್ಯಾಸಂಸ್ಥೆಗೆ ಪ್ರಸ್ತುತ ಪ್ಲಾಟಿನಂ(75) ಜ್ಯುಬಿಲಿ ಸಂಭ್ರಮ. ಈ ಬೆಥನಿ ವಿದ್ಯಾಸಂಸ್ಥೆಯು ಎಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಪುತ್ತೂರಿನಲ್ಲಿಯೂ ಯಶಸ್ವಿಯಾಗಿ ಶಿಕ್ಷಣ ನೀಡುತ್ತಿದೆ. ಈ ಸಂಭ್ರಮದ ಆಚರಣೆಯ ಅಂಗವಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರೊಕ್ಯೂರೇಟರ್ ಸಿಸ್ಟರ್ ಫ್ಲಾವಿಯಾ ವಿಲ್ಮಾ ಬಿ.ಎಸ್‌ರವರು ಕ್ಯಾಂಡಲ್‌ಗಳನ್ನು ಉರಿಸಿ ಪ್ಲಾಟಿನಂ ಸಂಭ್ರಮಕ್ಕೆ ಚಾಲನೆಯಿತ್ತರು.

LEAVE A REPLY

Please enter your comment!
Please enter your name here