ಕಡಬದಲ್ಲಿ ಕಟ್ಟಡ ಕಾರ್ಮಿಕರಿಂದ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ

0

ಕೂಡಲೇ ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಆದೇಶ ನೀಡಿ-ಕೆ.ಪಿ.ಮೋಹನ್

ಕಡಬ: ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಕೂಡಲೇ ಆದೇಶ ನೀಡಬೇಕು ಎಂದು ಆಗ್ರಹಿಸಿ ಕಡಬ ಭಾಗದ ನೂರಾರು ಕಟ್ಟಡ ಕಾರ್ಮಿಕರು ಕಡಬ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ಸಲ್ಲಿಸಿದ ಘಟನೆ ಡಿ.12ರಂದು ನಡೆದಿದೆ.

ಪ್ರಾರಂಭದಲ್ಲಿ ಕಡಬ ಪೇಟೆಯಲ್ಲಿ ಜಾಥಾ ನಡೆಸಿ ಆಗಮಿಸಿದ ನೂರಾರು ಪ್ರತಿಭಟನಾಕಾರು ಕಡಬ ತಹಸೀಲ್ದಾರ್ ಕಛೇರಿ ಎದುರು ಜಮಾಯಿಸಿ ಕಾರ್ಮಿಕ ಇಲಾಖೆಗೆ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಪಿ.ಮೋಹನ್ ಅವರು ಮಾತನಾಡಿ, 2020-21ನೇ ಸಾಲಿನಲ್ಲಿ 114557 ವಿದ್ಯಾರ್ಥಿಗಳಿಗೆ ರೂಪಾಯಿ 861110660ಶೈಕ್ಷಣಿಕ ಧನ ಸಹಾಯ ನೀಡಲಾಗಿತ್ತು, ಆದರೆ 2021-22ನೇ ಸಾಲಿನಲ್ಲಿ ಅರ್ಜಿ ಸಲ್ಲಿಕೆಯಾದ ಅರ್ಧದಷ್ಟು ಮಕ್ಕಳಿಗೆ ಹಣ ಪಾವತಿಯಾಗಿರುವುದಿಲ್ಲ, ವಿವಿಧ ಕ್ಷುಲ್ಲಕ ಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಾಗಿಲ್ಲ. ಅರ್ಜಿ ಸಲ್ಲಿಸಲು ಮಂಜೂರಾತಿಯಾಗಿದ್ದರೂ ಬ್ಯಾಂಕ್‌ಗಳಿಗೆ ಹಣ ಜಮೆಯಾಗಿರುವುದಿಲ್ಲ. ಈ ಎಲ್ಲಾ ಗೊಂದಲಗಳು ಇನ್ನೂ ಜೀವಂತವಾಗಿ ಇದೆ. ಈ ಮಧ್ಯೆ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ, ಇನ್ನೂ ಅರ್ಜಿ ಸಲ್ಲಿಸಲು ಆದೇಶ ನೀಡಿರುವುದಿಲ್ಲ, ಇದರಿಂದ ಸುಮಾರು ಒಂದೂವರೆ ಲಕ್ಷ ಬಡ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟ ಉಂಟಾಗಿರುತ್ತದೆ, ಆದುದರಿಂದ ಕೂಡಲೇ ಮುಖ್ಯ ಮಂತ್ರಿಗಳು ಮಧ್ಯಪ್ರವೇಶಿಸಿ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಮಂಡಳಿಗೆ ಆದೇಶ ನೀಡಬೇಕೆಂದು ಕೆ.ಪಿ.ಮೋಹನ್ ಆಗ್ರಹಿಸಿದರು. ಬಳಿಕ ಉಪತಹಸೀಲ್ದಾರ್ ಮನೋಹರ್ ಕೆ.ಟಿ. ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಶಿವಶಂಕರ್ ಬಿಳಿನೆಲೆ, ಕಾರ್ಯದರ್ಶಿ ಪುರುಷೋತ್ತಮ ಸಣ್ಣಾರ, ಖಜಾಂಜಿ ಗಿರಿಯಪ್ಪ ಗೌಡ, ಸದಸ್ಯರುಗಳಾದ ಹರಿಶ್ಚಂದ್ರ ಸುಬ್ರಹ್ಮಣ್ಯ, ವಿನೋದ್ ಕುಮಾರ್ ಮರ್ದಾಳ, ಅನಿಲ್ ಕುಮಾರ್ ನೆಟ್ಟಣ, ರುಕ್ಮಿಣಿ ಪುರುಷೋತ್ತಮ, ಮಹೇಶ ಕೆಳಗಿನಕೇರಿ, ಪುರುಷೋತ್ತಮ ತೆಕ್ಕಡ್ಕ, ಕೃಷ್ಣಪ್ಪ ಕುಂಬಾರ, ವಿಶ್ವನಾಥ ಗೌಡ ಕುದ್ಮಾರು, ಮಹಮ್ಮದ್ ರಫೀಕ್, ಅಬ್ದುಲ್ ಗಪೂರ್ ಬಂಟ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here