ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕೋಟಿ-ಚೆನ್ನಯ ಯಕ್ಷಾಭಿಮಾನಿ ಬಳಗ ಪುತ್ತೂರು ಅರ್ಪಿಸುವ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವು ಜ.4 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಾತ್ರಿ 7 ಗಂಟೆಯಿಂದ 12 ಗಂಟೆಯವರೆಗೆ ಜರಗಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಗಂಡು ಕಲೆ ಎಂಬುದು ಜನಜನಿತವಾಗಿದೆ. ಯಕ್ಷಗಾನಕ್ಕೂ ಅದರದ್ದೇ ಆದ ವೈವಿಧ್ಯತೆಯಿದೆ, ಸ್ಥಾನಮಾನವಿದೆ, ಗೌರವವಿದೆ. ಯಕ್ಷಗಾನದಿಂದ ದೇಶದ ಶ್ರೀಮಂತಿಕೆಯನ್ನು ಹೆಚ್ಚಿಸುವಂತೆ ಮಾಡಿದೆ ಮತ್ತು ದೇಶದ ಸಂಸ್ಕೃತಿಯನ್ನು ಪ್ರಚುರಪಡಿಸುವಂತೆ ಮಾಡಿದೆ. ದೇಯಿ ಬೈದೆತಿ, ಕೋಟಿ-ಚೆನ್ನಯರ ಕ್ಷೇತ್ರವೆನಿಸಿದ ಗೆಜ್ಜೆಗಿರಿ ಮಣ್ಣಿನಲ್ಲಿ ದೇಶವೇ ಹೊಗಳುವಂತಹ ಯಕ್ಷಗಾನ ಮೇಳವನ್ನು ನಾವೀನ್ಯತೆಯಿಂದ ಕಟ್ಟಿಕೊಂಡು ಹೊರಡಿರುವುದು ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಪೌರಾಣಿಕ ನಾಟಕಗಳಾದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ, ವಿಶ್ವವ್ಯಾಪಕ ನಾಮ ಶ್ರೀರಾಮ, ಬ್ರಹ್ಮಕಲಶ ಹಾಗೂ ಶ್ರೀದೇವಿ ಮಹಾತ್ಮೆ ಯಕ್ಷಗಾನದ ಸಹಿತ ಎಲ್ಲಾ ಪೌರಾಣಿಕ ನಾಟಕಗಳನ್ನು ಆಡಿ ತೋರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ವರ ಪ್ರೋತ್ಸಾಹ ಅಗತ್ಯವಾಗಿ ಬೇಕಾಗಿದೆ ಎಂದರು.
ಪುತ್ತೂರು ಬಿಲ್ಲವ ಸಂಘದ ನಗರ ಸಮಿತಿ ಅಧ್ಯಕ್ಷ ಅವಿನಾಶ್ ಹಾರಾಡಿ, ಕೋಟಿ-ಚೆನ್ನಯ ಯಕ್ಷಾಭಿಮಾನಿ ಬಳಗ ಪುತ್ತೂರು ಇದರ ಸಂಚಾಲಕ ಮೋಹನ್ ತೆಂಕಿಲ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವು ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಯಕ್ಷಗಾನ ಅಭಿಮಾನಿಗಳು ಯಕ್ಷಗಾನವನ್ನು ವೀಕ್ಷಿಸಿ ಸಂಭ್ರಮಪಟ್ಟರು.
ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈಯವರಿಗೆ ಸನ್ಮಾನ..
ಯಕ್ಷಗಾನ ರಂಗದಲ್ಲಿ ಸಾವಿರಕ್ಕೂ ಮಿಕ್ಕಿ ಅಭಿನಯದ ಮೂಲಕ ನಟನಾ ಚಾತುರ್ಯತೆ ಮೆರೆದಿರುವ, ಯಕ್ಷಗಾನವೇ ತನ್ನ ಮನೆ ಎಂಬುದಾಗಿ ತಿಳಿದಿರುವ, ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿರುವ ಓರ್ವ ಅಪ್ರತಿಮ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈಯವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಚ್ ದಾಸಪ್ಪ ರೈಯವರು, ಯಕ್ಷಗಾನವು ತುಳುನಾಡಿನ ಒಂದು ಭಾಗ. ದಕ್ಷಿಣ ಕನ್ನಡದಿಂದ ತುಳುನಾಡು ಪ್ರದೇಶದ ಕಾಸರಗೋಡಿನವರೆಗೆ ಯಕ್ಷಗಾನದ ರೂಪವನ್ನು ತೆಂಕು ತಿಟ್ಟು ಎಂದು, ಉತ್ತರದಿಂದ ಉತ್ತರ ಕನ್ನಡದವರೆಗೆ ಬಡಗ ತಿಟ್ಟು ಎಂದು ಕರೆಯಲಾಗುತ್ತದೆ. ಹಿರಿಯ ಕಲಾವಿದನಾಗಿರುವ ನನ್ನನ್ನು ನೀವು ಗುರುತಿಸಿ ಸನ್ಮಾನ ಮಾಡಿ ಗೌರವ ಕೊಟ್ಟಿರುವಿರಿ. ನೂತನ ಗೆಜ್ಜೆಗಿರಿ ಮೇಳವು ಯಶಸ್ವಿಯಾಗಿ ಮುನ್ನೆಡೆಯಲಿ ಎಂದರು.