ನಿಡ್ಪಳ್ಳಿ; ಕಿಂಡಿ ಅಣೆಕಟ್ಟಿನಲ್ಲಿ ಮೈದುಂಬಿ ನಿಂತ ನೀರು- ಸ್ಥಳೀಯರ ಮುಖದಲ್ಲಿ ಮಂದಹಾಸ

0

ನಿಡ್ಪಳ್ಳಿ; ಇಲ್ಲಿಯ ಎಂಪೆಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿ ನಿಂತಿದ್ದು ಸ್ಥಳೀಯ ರೈತರ ಮುಖದಲ್ಲಿ ಮಂದಹಾಸ ಕಂಡು ಬಂದಿದೆ. ನೂತನವಾಗಿ ನಿರ್ಮಿಸಿದ ಈ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿದ್ದು ಇದೀಗ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ನೀರು ತುಂಬಿ ನಿಂತಿದೆ. ಇದರಿಂದ ಸುತ್ತಮುತ್ತಲ ತೋಟಗಳಲ್ಲಿ ನೀರು ತುಂಬಿ ನಿಂತಿದ್ದು ಸುಮಾರು 2 ತಿಂಗಳವರೆಗೆ ನೀರು ಹಾಕುವ ಕೆಲಸ ಇಲ್ಲ. ಇದರಿಂದ ಅಂತರ್ಜಲ ವೃದ್ದಿಗೂ ಈ ಕಿಂಡಿ ಅಣೆಕಟ್ಟು ಪೂರಕವಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.

ಸ್ಥಳೀಯರ ಕೆರೆ ಬಾವಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.ಒಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಈ ಭಾಗದ ರೈತರಿಗೆ ವರದಾನವಾಗಿದೆ. ಕಿಂಡಿ ಅಣೆಕಟ್ಟಿನ ಜೊತೆಗೇ ಸೇತುವೆ ನಿರ್ಮಾಣ-ಕಿಂಡಿ ಅಣೆಕಟ್ಟಿನ ಇನ್ನೊಂದು ಬದಿ 12 ಅಡಿ ಅಗಲದ ಸೇತುವೆ ನಿರ್ಮಿಸಿದ್ದು ಈ ಭಾಗದ ಸಾರ್ವಜನಿಕರಿಗೆ ಸರ್ವಋತು ರಸ್ತೆಯಾಗಿ ಪರಿವರ್ತಿತವಾಗಿದೆ. ಮಳೆಗಾಲದಲ್ಲಿ ಇಲ್ಲಿ ಸಂಚಾರಕ್ಕೆ ಅವಕಾಶ ಇಲ್ಲದಿದ್ದು ಕುಕ್ಕುಪುಣಿ, ಜನತಾ ಕಾಲನಿ, ಎಂಪೆಕಲ್ಲು ಭಾಗದವರು ಸುಮಾರು 2 ಕಿ.ಲೋ. ಮೀಟರ್ ಸುತ್ತು ಬಳಸಿ ಬೆಟ್ಟಂಪಾಡಿಗೆ ಹೋಗ ಬೇಕಿತ್ತು. ಆದರೆ ಈಗ ಈ ಸೇತುವೆ ನಿರ್ಮಾಣದಿಂದ ಜನರಿಗೆ ಬಹಳ ಅನುಕೂಲವಾಗಿದೆ.

ಸಣ್ಣ ನೀರಾವರಿ ಇಲಾಖೆಯ 1.5 ಕೋಟಿ ಅನುದಾನ

ಈ ಭಾಗದ ಜನರ ಬೇಡಿಕೆಯನ್ನು ಪರಿಗಣಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ.1.5 ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದರು. ಈ ಅನುದಾನದಲ್ಲಿ ಕಿಂಡಿ ಅಣೆಕಟ್ಟು ಮತ್ತು ಸೇತುವೆ ಅಲ್ಪಕಾಲದಲ್ಲಿ ನಿರ್ಮಾಣವಾಗಿ ಜನರ ಬಹುಕಾಲದ ಬೇಡಿಕೆ ಒಂದು ಈಡೇರಿದಂತಾಗಿದೆ.ಶಾಸಕರ ಪ್ರಯತ್ನಕ್ಕೆ ಈ ಭಾಗದವರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಬಹಳ ಉಪಯುಕ್ತವಾಗಿದೆ

ಹಿಂದೆ ದೇವ ಮಣಿ ಶಂಕರ ಭಟ್ ತನ್ನ ಸ್ವಂತ ಖರ್ಚಿನಲ್ಲಿ ಕಟ್ಟ ಹಾಕಿಸಿ ಹರಿದು ಹೋಗುವ ನೀರನ್ನು ಆ ಭಾಗದವರು ಕೃಷಿಗೆ ಬಳಸುವಂತೆ ಮಾಡುತ್ತಿದ್ದರು.ಅವರ ನಂತರ ನಾನು ಮತ್ತು ನಾರಾಯಣ ಭಟ್ ಹೊಯಿಗೆ ಕಟ್ಟು ಇಟ್ಟು ಕಟ್ಟ ಕಟ್ಟುತ್ತಿದ್ದೆವು. ನಂತರ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ನಾವು ಸಣ್ಣ ನೀರಾವರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆವು.ಇದಕ್ಕೆ ಇಲಾಖೆ ಮತ್ತು ಶಾಸಕ ಸಂಜೀವ ಮಠಂದೂರುರವರು ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಿಸಿದ್ದು ಬಹಳ ಉಪಯುಕ್ತವಾಗಿದೆ.

ಸತೀಶ್ ಭಟ್ ನಡುಸಾರು, ಸ್ಥಳೀಯರು.

ಕಡಿಮೆ ಅವದಿಯಲ್ಲಿ ನಿರ್ಮಾಣ

ಅಧುನಿಕ ಯುಗದಲ್ಲಿ ಅಂತರ್ಜಲ ಕುಸಿತವಾಗುವುದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರಕಾರ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದು ಇಲ್ಲಿ ಅಣೆಕಟ್ಟು ಕಟ್ಟಿದ ಪರಿಣಾಮ ಸುಮಾರು 100 ಮನೆಯವರಿಗೆ ಪ್ರಯೋಜನವಾಗಿದೆ. ಅಂತರ್ಜಲ ಹೆಚ್ಚಲು ಇದು ಬಹಳ ಉಪಯುಕ್ತವಾಗಿದೆ. ಅಲ್ಲದೆ ಅತಿ ಕಡಿಮೆ ಅವದಿಯಲ್ಲಿ ಈ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಿಸಿದ್ದು ಬಹಳ ಪ್ರಯೋಜನವಾಗಿದೆ.

-ಮುರಳೀಕೃಷ್ಣ ಮುಂಡೂರು, ಸದಸ್ಯರು ಗ್ರಾ.ಪಂ.ನಿಡ್ಪಳ್ಳಿ

LEAVE A REPLY

Please enter your comment!
Please enter your name here