ಉಪ್ಪಿನಂಗಡಿ: ಸಾಮಾಜಿಕ ಜಾಲತಾಣದಲ್ಲಿ ಭಜನೆ, ಭಜಕರ ನಿಂದನೆ, ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ಸಾರ್ವಜನಿಕ ಪ್ರಶ್ನೆಗಳಿಗೆ ಉಡಾಫೆಯ ಉತ್ತರ ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಪುತ್ತೂರು ಉಪವಲಯದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಕೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
2022ರ ಅ.29 ರಂದು ನಡೆದ ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಅನುಚಿತವಾಗಿ ಹಾಗೂ ಅಶಿಸ್ತಿನಿಂದ ಮತ್ತು ಉಡಾಫೆಯಿಂದ ಆಕ್ರೋಶವಾಗಿ ಉತ್ತರಿಸಿದ್ದಕ್ಕಾಗಿ ಅರಣ್ಯಾಧಿಕಾರಿ ಸಂಜೀವ ಕೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದರು. 30.10.2022ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಈ ಬಗ್ಗೆ `ಗ್ರಾಮಸ್ಥರ ಪ್ರಶ್ನೆಗೆ ಉಡಾಫೆಯಿಂದ ಉತ್ತರಿಸಿದ ಅಧಿಕಾರಿ: ಆಕ್ರೋಶ- ಕರ್ತವ್ಯದಿಂದ ವಜಾಕ್ಕೆ ಆಗ್ರಹಿಸಿ ನಿರ್ಣಯ’ ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟವಾಗಿತ್ತು.
ಅಲ್ಲದೇ, ಗ್ರಾಮ ಸಭೆಯಲ್ಲಿ ಇವರ ವಿರುದ್ಧ ಲಂಚದ ಆರೋಪ ಕೇಳಿ ಬಂದ ವಿಷಯವಾಗಿ ವಿಚಾರಣೆಗೆ ಆಗಮಿಸಲು ಸಂಜೀವ ಕೆ. ಅವರಿಗೆ ಪುತ್ತೂರು ವಲಯ ಅರಣ್ಯಾಧಿಕಾರಿ ನೋಟೀಸ್ ಜಾರಿಗೊಳಿಸಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರೊಂದಿಗೆ ಸಂಜೀವ ಕೆ. ಅವರು ಭಜನೆ ಹಾಗೂ ಭಜಕರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದು, ಇದರಿಂದಾಗಿ ಪುತ್ತೂರು ವಲಯ ಕಚೇರಿಯ ಆವರಣಕ್ಕೆ ಸಂಘ- ಸಂಸ್ಥೆಗಳವರು ಹಾಗೂ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವಂತಾಗಿತ್ತು.
ಈ ಎಲ್ಲಾ ವರದಿಯನ್ನು ಪುತ್ತೂರು ವಲಯ ಅರಣ್ಯಾಧಿಕಾರಿಯವರು ನೀಡಿದ್ದರು. ಇದಲ್ಲದೆ ಶಾಸಕ ಸಂಜೀವ ಮಠಂದೂರು ಅವರು ಕೂಡಾ ಭಜನೆ ಹಾಗೂ ಭಜಕರನ್ನು ನಿಂದಿಸಿದ ಉಪವಲಯ ಅರಣ್ಯಾಧಿಕಾರಿ ಸಂಜೀವರ ಮೇಲೆ ಶಿಸ್ತು ಕ್ರಮ ಕೈಗೊಂಡು ಬೇರೆ ಜಿಲ್ಲೆಗೆ ವರ್ಗಾಯಿಸಿ ಆದೇಶಿಸುವಂತೆ ಕೋರಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅರಣ್ಯಾಧಿಕಾರಿ ಸಂಜೀವ ಅವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ, ತಕ್ಷಣದಿಂದಲೇ ಅಮಾನತುಗೊಳಿಸಿ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶದಲ್ಲಿ ಸುದ್ದಿ ಬಿಡುಗಡೆ ಪತ್ರಿಯಲ್ಲಿ ಬಂದ ವರದಿಯೂ ಪ್ರಸ್ತಾಪಗೊಂಡಿದೆ.