ಮಾನವ ಧರ್ಮ, ವೃತ್ತಿ ಧರ್ಮ ಪಾಲನೆಯಾದಾಗ ಪ್ರಜಾಪ್ರಭುತ್ವಕ್ಕೆ ಗೌರವ – ಸಂಜೀವ ಮಠಂದೂರು
* ತೆರೆದ ವಾಹನದಲ್ಲಿ ಎ.ಸಿ ಗೌರವ ಸ್ವೀಕಾರ
* ಪೊಲೀಸ್ ಸಹಿತ ವಿದ್ಯಾರ್ಥಿಗಳಿಂದ ಅಕರ್ಷಕ ಪಥ ಸಂಚಲನ
* ರಾಷ್ಟ್ರೀಯ ಈಜುಪಟುವಿಗೆ ಸನ್ಮಾನ
* ಎಸ್ಎಸ್ಎಲ್ಸಿ ಅತಿ ಹೆಚ್ಚು ಅಂಕಪಡೆದವರಿಗೆ ಲ್ಯಾಪ್ವಿತರಣೆ
* ಗ್ರಾಮ ಒನ್ನಲ್ಲಿ ಅತ್ಯಧಿಕ ಅರ್ಜಿ ವಿಲೇವಾರಿ ಮಾಡಿದವರಿಗೆ ಸನ್ಮಾನ
* ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
* 5 ಶಾಲೆಗಳ ನೂರಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು: ನಮ್ಮ ದೇಶ ಜಗತ್ತಿನಲ್ಲಿ ಇತರ ರಾಷ್ಟ್ರಗಳಿಗಿಂತ ಬಹಳ ವೇಗವಾಗಿ ಮುಂದುವರಿಯುತ್ತಿದೆ. ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನ ಕ್ರೀಡೆ, ಮಾಹಿತಿ ತಂತ್ರಜ್ಞಾನ, ಹೀಗೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ನಾವು ನಮ್ಮ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಶ್ರಮಿಸಬೇಕಾಗಿದೆ ಎಂದು ಸಹಾಯಕ ಕಮೀಷನರ್ ಗಿರೀಶ್ನಂದನ್ ಅವರು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜ.26ರಂದು ನಡೆದ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥ ಸಂಚಲನದಲ್ಲಿ ಗೌರವ ಸ್ವೀಕರಿಸಿ, ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಮತ್ತು ಮಹತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬಳಿಕ ಅವರು ಸಂದೇಶ ನೀಡಿದರು. ಗಣರಾಜ್ಯೋತ್ಸವ ಒಂದು ಐತಿಹಾಸಿಕ ದಿನ, ಭಾರತ ಪರಕೀಯರ ಆಳ್ವಿಕೆಯಿಂದ ಸಂಪೂರ್ಣ ಮುಕ್ತಿಗೊಂಡು ತನ್ನದೆ ಆದ ಸಂವಿಧಾನ ರಚಿಸಿ ತನಗೆ ಅರ್ಪಿಸಿಕೊಂಡ ದಿನ.
1947ರಲ್ಲಿ ನಮಗೆ ಸ್ವಾತಂತ್ರ್ಯ ಲಭಿಸಿದಾಗ ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಒಂದು ಗೂಡಿಸುವಲ್ಲಿ ನಮಗೆ ಎದುರಾದ ದೊಡ್ಡ ಸವಾಲಾಗಿತ್ತು. ಹಲವಾರು ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳನ್ನು ಒಟ್ಟಾಗಿಸಿ, ಜನರ ಆಶೋತರಗಳನ್ನು ಬಿಂಬಿಸುವ ಸಂವಿಧಾನವನ್ನು ರಚಿಸುವಲ್ಲಿ ಮೊದಲನೆ ಮಹಾಕಾರ್ಯವನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನೆರವೇರಿಸಿದರು. ಬಳಿಕ ಸಂವಿಧಾನ ನಿರ್ಮಾಣ ಜವಾಬ್ದಾರಿಯನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ನೆರವೇರಿಸಿದರು. ಸುಮಾರು 2 ವರ್ಷ 11 ತಿಂಗಳು ಪರಿಶ್ರಮದಿಂದ ಸಂವಿಧಾನದ ಕರಡು ಸಮಿತಿ ರಚನೆ ಆಯಿತು. ಅದಾದ ಬಳಿಕ ಸಂವಿಧಾನವನ್ನು ನಾವೆಲ್ಲ ಸೇರಿ ನಮಗೆ ಅರ್ಪಿಸಿಕೊಂಡಿದ್ದೇವೆ. ಎಲ್ಲ ಜನರ ಆಶೋತ್ತರಗಳನ್ನು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಈಡೇರಿಸಲು ಸಂವಿಧಾನ ಅಗತ್ಯ. ಈ ನಿಟ್ಟಿನಲ್ಲಿ ನಾವು ನಮ್ಮ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಶ್ರಮಿಸಬೇಕಾಗಿದೆ. ದೇಶವ ಒಳಿತಿಗಾಗಿ ನಾವೆಲ್ಲ ಕೈಜೋಡಿಸೋಣ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲಾ ಪೂರ್ವಜರನ್ನು ಸ್ಮರಿಸೋಣ ಎಂದು ಹೇಳಿದರು.
ಗೌರವ ಸ್ವೀಕಾರ: ಸಹಾಯಕ ಕಮೀಷನರ್ ಗಿರೀಶ್ನಂದನ್ ತೆರೆದ ಜೀಪಿನಲ್ಲಿ ಪೊಲೀಸ್, ಎನ್.ಸಿ.ಸಿ ನೇವಿ, ಕೆಡೆಟ್, ಸ್ಟುಡೆಂಟ್ ಆಂಡ್ ಪೊಲೀಸ್, ಸ್ಕೌಟ್ಸ್, ಗೈಡ್ಸ್. ಭಾರತ್ ಸೇವಾದಳದವರಿಂದ ಗೌರವ ಸ್ವೀಕರಿಸಿ ಪಥ ಸಂಚಲನ ವೀಕ್ಷಣೆ ಮಾಡಿದರು. ಆಕರ್ಷಕ ಬ್ಯಾಂಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಮಾನವ ಧರ್ಮ, ವೃತ್ತಿ ಧರ್ಮ ಪಾಲನೆಯಾದಾಗ ಪ್ರಜಾಪ್ರಭುತ್ವಕ್ಕೆ ಗೌರವ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ 1947 ರ ಸ್ವಾತಂತ್ರ್ಯ ಪುಕ್ಕಟೆಯಾಗಿ ಬಂದಿಲ್ಲ, ರಕ್ತಸಿಗ್ದ ಹೋರಾಟದಿಂದ ಬಂತು. ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮ ನಮ್ಮದೇ ಮಣ್ಣಿನ ನೆಲದ ಸುಳ್ಯದಿಂದ ಕೆದಂಬಾಡಿ ರಾಮಯ್ಯ ಗೌಡರು ಆರಂಭಿಸಿದ್ದರು. ಅದೇ ರೀತಿ ಮೊಳಹಳ್ಳಿ ಶಿವರಾಯ, ಎನ್ ಎಸ್ ಕಿಲ್ಲೆ ಇಂತಹ ಹಲವಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಕಣ್ಣ ಮುಂದೆ ಇದ್ದಾರೆ. ಇವರು ದೇಶ ಮತ್ತು ಸಮಾಜಕ್ಕಾಗಿ ಹೇಗೆ ಬದುಕಬೇಕೆಂದು ಸಂದೇಶ ಕೊಟ್ಟವರಾಗಿದ್ದಾರೆ. ರಕ್ಷಣಾ ವ್ಯವಸ್ಥೆಯಲ್ಲಿ ಪ್ರಬಲ ರಾಷ್ಟ್ರವಾಗಿ, ಶೈಕ್ಷಣಿಕ ಕ್ಷೇತ್ರದಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ರಾಜ್ಯ ಸರಕಾರ ಬದುಕಿಗೆ ಪೂರಕವಾಗಿ ವಿಚಾರ ನೀಡುತ್ತಿದೆ. ನಾವು ನಮ್ಮ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಚಿಂತನೆ ಮಾಡಬೇಕು. ಮಾನವ ಧರ್ಮ ಮತ್ತು ವೃತ್ತಿ ಧರ್ಮ ಯಾವಾಗ ಪಾಲನೆ ಆಗುತ್ತದೋ ಆಗ ಈ ಪ್ರಜಾಪ್ರಭುತ್ವಕ್ಕೆ ಗೌರವ ಬರುತ್ತದೆ. ಎಲ್ಲರಿಗೂ ಸಮಾನತೆ ನೀಡುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಒಂದಷ್ಟು ಅವಕಾಶ ಮಾಡಿಕೊಟ್ಟಿದೆ ಎಂದರು.
ಪ್ರಜೆಗಳೇ ಪ್ರಭುಗಳು:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಹಿರಿಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಕಳೆದ ವರ್ಷ 75ನೇ ವರ್ಷದ ಸ್ವಾತಂತ್ರ್ಯವನ್ನು ಮನೆ ಮನೆ ಧ್ವಜ ಹಾರಿಸಿ ಸಂಭ್ರಮಿಸಿದ್ದೇವೆ. ಇದೀಗೆ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಜನರಿಗೆ ಜನರಿಗಾಗಿ ಜನರಿಗೋಸ್ಕರ ಆಡಳಿತ ವ್ಯವಸ್ಥೆ ಗಣರಾಜ್ಯ. ಇಲ್ಲಿ ಪ್ರಜೆಗಳೇ ಪ್ರಭುಗಳು ಎಂದರು.
ಸಂವಿಧಾನ ನಮ್ಮ ಕರ್ತವ್ಯ ಹೇಳಿಕೊಟ್ಟಿದೆ:
ಡಿವೈಎಸ್ಪಿ ವೀರಯ್ಯ ಹಿರೇಮಠ್ ಅವರು ಮಾತನಾಡಿ ಸಂವಿಧಾನ ನಮ್ಮ ಕರ್ತವ್ಯವನ್ನು ಹೇಳಿಕೊಟ್ಟಿದೆ. ಈ ನಿಟ್ಟಿನಲ್ಲಿ ಸದೃಢ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಜೊತೆಯಾಗಬೇಕೆಂದು ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ನಿಸರ್ಗಪ್ರಿಯ ಜೆ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ನಿವೃತ್ತ ಎಸ್ಪಿ ರಾಮದಾಸ್ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜರಾಮ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಉಪತಹಸೀಲ್ದಾರ್ಗಳಾದ ಸುಲೋಚನಾ, ಚೆನ್ನಪ್ಪ ಗೌಡ, ಸಮಾಜ ಕಲ್ಯಾಣಾಧಿಕಾರಿ ರಾಜಶೇಖರ್, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ಅಮೃತಕಲಾ ಅತಿಥಿಗಳನ್ನು ಗೌರವಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಸ್ವಾಗತಿಸಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮಕೃಷ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.