- ಸುಂದರ ವಾತಾವರಣದಲ್ಲಿ ನಿರ್ಮಾಣವಾಗಿರುವ ಈ ಶಾಲೆಗೆ ಉತ್ತಮ ಭವಿಷ್ಯವಿದೆ: ವಿನಯಕುಮಾರ್ ಸೊರಕೆ
- ಶಿಕ್ಷಣ ಸಂಸ್ಥೆಯ ಹುಟ್ಟು ದೇಶಪ್ರೇಮದ ಪ್ರತೀಕ: ಯು.ಟಿ. ಖಾದರ್
ವಿಟ್ಲ : ಸುಂದರ ವಾತಾವರಣದಲ್ಲಿ ನಿರ್ಮಾಣವಾಗಿರುವ ಈ ಶಾಲೆಗೆ ಉತ್ತಮ ಭವಿಷ್ಯವಿದೆ. ವೃತ್ತಿಯಲ್ಲಿ ವೈದ್ಯರಾದರೂ ತನ್ನ ಹುಟ್ಟೂರಿನ ಮಕ್ಕಳಿಗೆ ವಿದ್ಯಾಭ್ಯಾಸದ ಬೆಳಕನ್ನು ಚೆಲ್ಲಲು ಹೊರಟ ಬಶೀರ್ ರವರ ಪ್ರಯತ್ನ ಅಭಿನಂದನೀಯ. ಮುಂದಕ್ಕೆ ಇದೊಂದು ಯುನಿವರ್ಸಿಟಿ ಆಗಿ ಈ ಭಾಗದ ಮಕ್ಕಳ ಬಾಳಿನ ಆಶಾಕಿರಣವಾಗಲಿ. ಪ್ರಯತ್ನ ಪಟ್ಟರೆ ಗುರಿ ಮುಟ್ಟಲು ಸಾಧ್ಯ ಎನ್ನುವುದಕ್ಕೆ ಕಂಬಳಬೆಟ್ಟುವಿನ ಜನಪ್ರೀಯ ಕ್ಯಾಂಪಸ್ ನಲ್ಲಿ ಎರಡು ವರುಷದಲ್ಲಿ ಆದ ಬದಲಾವಣೆಯೇ ಸಾಕ್ಷಿ ಎಂದು ಕರ್ನಾಟಕ ನಗರಾಭಿವೃದ್ಧಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ರವರು ಹೇಳಿದರು ಅವರು
ಅವರು ಜ.೨೮ರಂದು ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ‘NABHA 2023’ ರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ರವರು ಮಾತನಾಡಿ ಈ ಪ್ರದೇಶದಲ್ಲಿರುವ ಜನರಿಗೆ ಇದೊಂದು ಸುವರ್ಣಾವಕಾಶ. ನಮ್ಮ ಊರಿನ ಹೆಸರನ್ನು ಹಾಸನದಲ್ಲಿ ಪಸರಿಸಿದ ಕೀರ್ತಿ ಡಾ. ಅಬ್ದುಲ್ ಬಶೀರ್ ರದ್ದಾಗಿದೆ. ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಲು ಈ ಕ್ಯಾಂಪಸ್ ಪೂರಕ. ಶಿಕ್ಷಣ ಸಂಸ್ಥೆಯ ಹುಟ್ಟು ದೇಶಪ್ರೇಮದ ಪ್ರತೀಕ. ಭಾರತ ದೇಶ ಬಲಿಷ್ಟವಾಗಲು ಗ್ರಾಮೀಣ ಮಟ್ಟದ ಮಕ್ಕಳು ಬಲಿಷ್ಟವಾಗಬೇಕು. ಅದಕ್ಕೆ ಪೂರಕ ಶಿಕ್ಷಣ ಈ ಕ್ಯಾಂಪಸ್ ನಿಂದ ಆಗುತ್ತಿದೆ. ಮಕ್ಕಳನ್ನು ಸತ್ ಪ್ರಜೆಯನ್ನಾಗಿ ಮಾಡುವ ಕರ್ತವ್ಯ ಹೆತ್ತವರದ್ದಾಗಿದೆ. ಮಕ್ಕಳಿಗಾಗಿ ಸಮಯ ಇಡುವ ಕೆಲಸ ಪೋಷಕರಿಂದ ಆಗಬೇಕಿದೆ. ಶಿಕ್ಷಣದ ಮಹತ್ವ ಅಪಾರವಾಗಿದೆ. ಅದನ್ನು ಅರ್ಥ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.
ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ.ರವರು ಪ್ರಾಸ್ತವಿಕ ಮಾತುಗಳನ್ನಾಡಿ ಬಾಲ್ಯದಲ್ಲಿ ನಾನು ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಈಗಿನ ಮಕ್ಕಳು ಪಡಬಾರದು ಎನ್ನುವ ಉದ್ದೇಶದಿಂದ ಈ ಶಾಲೆಯ ಹುಟ್ಟುಹಾಕಲಾಗಿದೆ. ಈ ಶಾಲೆಯಿಂದಾಗಿ ನನ್ನ ತಂದೆ ತಾಯಿಯ ಹೆಸರು ಅಮರವಾಗಿರುತ್ತದೆ. ಈ ಭಾಗದ ಜನರ ಸಹಕಾರಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈರವರು ಆಗಮಿಸಿ ಶುಭಹಾರೈಸಿದರು.
ವಿಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್, ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮೊಹಮ್ಮದ್ ಕುಂಞಿ, ಸೈಂಟ್ ರೀಟಾ ಪ್ರೌಢಶಾಲಾ ಪ್ರಾಂಶುಪಾಲ ಫಾ| ಸುನಿಲ್ ಪ್ರವೀಣ್ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್, ಜೆಸಿ ಶಾಲಾ ಉಪಾಧ್ಯಕ್ಷ ಶ್ರೀಧರ ಶಟ್ಟಿ, ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಮಹಾಬಲೇಶ್ವರ ಭಟ್, ಮಂಗಳೂರು ಭಾರತ್ ಕನ್ಸ್ ಸ್ಟ್ರೆಕ್ಷನ್ ನ ಮಾಲಕರಾದ ಮುಸ್ತಫ, ಹಾಸನ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಟಿ.ಬಿ ಅಬ್ದುಲ್ ರೆಹಮಾನ್ ಹಾಜಿ, ವಿಟ್ಲ ಮುಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ., ಜನಪ್ರಿಯ ಪೌಂಡೇಶನ್‌ನ ಅಧ್ಯಕ್ಷೆ ಫಾತಿಮ ನಸ್ರೀನ್ ಬಶೀರ್, , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಕೀರ್ ಅಳಕೆಮಜಲು, ಶಾಲಾ ಪ್ರಾಂಶುಪಾಲರಾದ ಪ್ರಿಯಾ ದೊರೈರಾಜ್, ಶಾಲಾ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಳ, ಜನಪ್ರೀಯ ಫೌಂಡೇಶನ್ ನ ಅಡ್ವೈಸರ್ ಕಿರಾಶ್ ಪರ್ತಿಪ್ಪಾಡಿ, ಜನಪ್ರೀಯ ಸೆಂಟ್ರಲ್ ಸ್ಕೂಲ್ ನ ಅಡ್ವೈಸರ್ ನೌಶೀನ್, ನಫ್ಸಿರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ತೆರೆದ ವೇದಿಕೆಯಲ್ಲಿ ಶಾಲಾ ಮಕ್ಕಳ ವಾರ್ಷಿಕೋತ್ಸವ ‘NABHA 2023’ ನಡೆಯಿತು.