ಉಪ್ಪಿನಂಗಡಿ: ಅನಧಿಕೃತ ವ್ಯಾಪಾರಸ್ಥರ ಮೇಲೆ ಶಿಸ್ತು ಕ್ರಮ ಜರಗಿಸುವ ಉಪ್ಪಿನಂಗಡಿ ಗ್ರಾ.ಪಂ. ಇಲ್ಲಿ ಯಾವುದೇ ತಾರತಮ್ಯ ಮಾಡದೇ ಸಮಾನತೆಯ ನೀತಿ ಅನುಸರಿಸಬೇಕು ಎಂದು ರಸ್ತೆ ಬದಿಯಲ್ಲಿ ಹಣ್ಣು ಹಂಪಲು ವ್ಯಾಪಾರ ನಡೆಸುವವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿರುವ ಅವರು, ಉಪ್ಪಿನಂಗಡಿಯಲ್ಲಿ ಹಣ್ಣು ಹಂಪಲು ವ್ಯಾಪಾರ ಮಾತ್ರ ಅನಧಿಕೃತವಾಗಿ ನಡೆಯುವುದಲ್ಲ. ಇಲ್ಲಿನ ಹೆಚ್ಚಿನ ಹೂವಿನ ಅಂಗಡಿ, ಪಾನ್ ಸ್ಟಾಲ್ಗಳು, ಪಾನಿಪುರಿ ಅಂಗಡಿ, ತರಕಾರಿ ವ್ಯಾಪಾರ, ಬಟ್ಟೆ ವ್ಯಾಪಾರ ಸೇರಿದಂತೆ ಇನ್ನಿತರ ವ್ಯಾಪಾರಗಳು ಗ್ರಾ.ಪಂ.ನ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಡೆಯುತ್ತವೆ. ಕೆಲವರು ರಸ್ತೆ ಬದಿ ಕೂಡಾ ವ್ಯಾಪಾರ ನಡೆಸುತ್ತಾರೆ. ಅನಧಿಕೃತ ಕಟ್ಟಡಗಳೂ ಇವೆ. ಆದರೆ ಇದಕ್ಕೆಲ್ಲಾ ಉಪ್ಪಿನಂಗಡಿ ಗ್ರಾ.ಪಂ. ಆಸ್ಪದ ಕೊಡುತ್ತಿದೆ. ಆದರೆ ಗ್ರಾ.ಪಂ. ಅಧ್ಯಕ್ಷರ ಆದೇಶವಿದೆಯೆಂದು ಇಲ್ಲಿ ರಸ್ತೆ ಬದಿಯಲ್ಲಿ ಹಣ್ಣು ಹಂಪಲುಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಮಾತ್ರ ಗ್ರಾ.ಪಂ. ಶಿಸ್ತು ಕ್ರಮ ಜರಗಿಸುತ್ತಿದೆ. ಜ.31ರಂದು ಕೂಡಾ ಇಲ್ಲಿ ಹಣ್ಣು ಹಂಪಲು ವ್ಯಾಪಾರ ಮಾಡುತ್ತಿದ್ದ ಆಪೆ ರಿಕ್ಷಾಗಳ ಚಕ್ರಕ್ಕೆ ಗ್ರಾ.ಪಂ.ನವರು ಲಾಕ್ಗಳನ್ನು ಹಾಕಿ ಹೋಗಿದ್ದಾರೆ. ಇದರಿಂದಾಗಿ ವಾಹನದಲ್ಲಿದ್ದ ಹಣ್ಣು – ಹಂಪಲುಗಳು ಅಲ್ಲೇ ಕೊಳೆಯುವಂತಾಗಿದೆ. ಶಿಸ್ತು ಕ್ರಮ ಜರಗಿಸುವುದಾದರೆ ಯಾವುದೇ ತಾರತಮ್ಯ ಮಾಡದೇ ಎಲ್ಲಾ ಅನಧಿಕೃತ ವ್ಯಾಪಾರಸ್ಥರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು. ಅದು ಬಿಟ್ಟು ಕೇವಲ ರಸ್ತೆ ಬದಿಯಲ್ಲಿ ವಾಹನದಲ್ಲಿಟ್ಟುಕೊಂಡು ಹಣ್ಣು ಹಂಪಲನ್ನು ಮಾರಾಟ ಮಾಡುವವರ ಮೇಲಲ್ಲ. ಬಾಕಿ ಅನಧಿಕೃತ ವ್ಯಾಪಾರಗಳಿಗೆ ಅವಕಾಶ ನೀಡುವುದಾದರೆ ನಮಗೂ ಮಾರಾಟಕ್ಕೆ ಅವಕಾಶ ಸಮಾನ ನೀಡಬೇಕೆಂದು ರಸ್ತೆ ಬದಿಯಲ್ಲಿ ಹಣ್ಣು ಹಂಪಲು ವ್ಯಾಪಾರ ನಡೆಸುವವರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡಿದ ನಿಯೋಗದಲ್ಲಿ ರಸ್ತೆ ಬದಿಯಲ್ಲಿ ಹಣ್ಣು ಹಂಪಲು ವ್ಯಾಪಾರ ನಡೆಸುವ ಉಬೈದ್, ಯೂಸುಫ್, ಉಬೈದುಲ್ಲಾ, ಅಬ್ದುಲ್ ಬಶೀರ್, ಅಬ್ದುರ್ರಹ್ಮಾನ್, ಮಹಮ್ಮದ್ ತಶ್ರೀಫ್, ಸಲಾಂ ಮತ್ತಿತರರು ಇದ್ದರು.
ಪೋಟೋ: ೧ಯುಪಿಪಿಲಾಕ್: ಉಪ್ಪಿನಂಗಡಿಯಲ್ಲಿ ರಸ್ತೆ ಬದಿ ಹಣ್ಣು ಹಂಪಲು ವ್ಯಾಪಾರ ನಡೆಸುತ್ತಿರುವ ವಾಹನಕ್ಕೆ ಮಾತ್ರ ಲಾಕ್ ಹಾಕಿರುವುದು.