ಉಪ್ಪಿನಂಗಡಿ: ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವ ಫೆ.18ರಿಂದ ಮಾ.24ರವರೆಗೆ ನಡೆಯಲಿದ್ದು, ಜಾತ್ರೋತ್ಸವವು ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ಪೂರ್ವಭಾವಿ ಸಭೆ ಕರೆದು ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸುದೀರ್ಘ ಕಾಲದ ಜಾತ್ರೆಯ ಸಂಭ್ರಮವಿರುವುದು ಇಲ್ಲಿ ಮಾತ್ರವಾಗಿದ್ದು, ಈ ಸಂದರ್ಭ ಭಗವಂತ ಗರ್ಭಗುಡಿಯಿಂದ ನಮ್ಮ ಮುಂದೆ ಬರುವ ಈ ಅಮೂಲ್ಯ ಕ್ಷಣವನ್ನು ನಾವೆಲ್ಲಾ ಸಂಭ್ರಮದಿಂದ ಆಚರಿಸಬೇಕಿದೆ. ಭಕ್ತಾದಿಗಳು ರಸ್ತೆಯುದ್ದಕ್ಕೂ ವಿದ್ಯುದ್ದೀಪಾಲಂಕಾರ ಮಾಡಬೇಕು. ಈ ಬಾರಿ ಮಖೆ ಜಾತ್ರೆಗೆ ‘ಉಬಾರ್ ಉತ್ಸವ’ ಇನ್ನಷ್ಟು ಮೆರುಗು ನೀಡಲಿದೆ ಎಂದು ಹೇಳಿದರಲ್ಲದೆ, ಸ್ವಚ್ಛತೆಯ ಬಗ್ಗೆ ನಿಗಾ ಇಡುವಂತೆ ಗ್ರಾ.ಪಂ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಕಾನೂನು- ಸುವ್ಯವಸ್ಥೆ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಗೆ, ನದಿ ತೀರದಲ್ಲಿ ಜನರ ಸುರಕ್ಷತೆ ಹಾಗೂ ಬೆಡಿ ಪ್ರದರ್ಶನದ ದಿನ ಸುರಕ್ಷತೆ ಕಾಪಾಡಲು ಅಗ್ನಿಶಾಮಕ, ಮೆಸ್ಕಾಂ ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಉಪ್ಪಿನಂಗಡಿ ಸೂಕ್ಷ್ಮ ಪ್ರದೇಶವಾದ್ದರಿಂದ ಬೇರೆ ಬೇರೆ ಕೋಮಿನ ನಡುವೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ವಿಶೇಷ ನಿಗಾ ವಹಿಸಲು ಹಾಗೂ ಜಾತ್ರೆಯ ಸಂದರ್ಭದಲ್ಲಿ ಇಲ್ಲೊಂದು ಔಟ್‌ಪೋಸ್ಟ್ ನಿರ್ಮಿಸಲು ಪೊಲೀಸ್ ಇಲಾಖೆಗೆ ಶಾಸಕರು ಸೂಚಿಸಿದರು. ತುರ್ತು ಸೇವೆಗಳಿಗೆ ಕೌಂಟರ್‌ಗಳ ವ್ಯವಸ್ಥೆ, ಸ್ವಯಂ ಸೇವಕರ ನಿಯೋಜನೆ, ಮಾಹಿತಿ ಫಲಕಗಳನ್ನು ಅಳವಡಿಸಲು ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿದರು.
ಜಾತ್ರಾ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹ ಕೇಳಿ ಬಂದಾಗ ಪುತ್ತೂರು- ಉಪ್ಪಿನಂಗಡಿಗೆ ಈಗಾಗಲೇ ಬಸ್ ವ್ಯವಸ್ಥೆ ಇದೆ. ಕಡಬ ಭಾಗದತ್ತ ಬೇಕಾದರೆ ಹೇಳಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪೊಲೀಸ್ ಇಲಾಖೆಯ ಬೇಡಿಕೆಗೆ ಸ್ಪಂದಿಸಿದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ದೇವಾಲಯದ ವಠಾರ ಹಾಗೂ ನದಿ ಬದಿಗಳಲ್ಲಿ ತಾತ್ಕಾಲಿಕವಾಗಿ ಸಿಸಿ ಕ್ಯಾಮರಾಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ವೇ.ಮೂ. ಹರೀಶ್ ಉಪಾಧ್ಯಾಯ, ಸುನೀಲ್ ಎ., ಶ್ರೀಮತಿ ಪ್ರೇಮಲತಾ, ಬಿಎಸ್‌ಎಫ್‌ನ ನಿವೃತ್ತ ಕಮಾಂಡರ್ ಚಂದಪ್ಪ ಮೂಲ್ಯ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಡಾ. ರಾಜಾರಾಮ್ ಕೆ.ಬಿ., ರಾಧಾಕೃಷ್ಣ ನಾಯಕ್, ಪ್ರಮುಖರಾದ ಎನ್. ಗೋಪಾಲ ಹೆಗ್ಡೆ, ಎಂ. ಸುದರ್ಶನ್, ಹರಿರಾಮಚಂದ್ರ, ಯು.ಜಿ.ರಾಧಾ, ಪ್ರತಾಪ್ ಪೆರಿಯಡ್ಕ, ಧನಂಜಯ ನಟ್ಟಿಬೈಲ್, ಸುನೀಲ್ ಕುಮಾರ್ ದಡ್ಡು, ರಾಜಗೋಪಾಲ ಭಟ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ವಿದ್ಯಾಧರ ಜೈನ್, ಕೆ. ಜಗದೀಶ್ ಶೆಟ್ಟಿ, ಪ್ರಸನ್ನ ಪೆರಿಯಡ್ಕ, ಸುಜಾತಕೃಷ್ಣ ಆಚಾರ್ಯ, ರವಿ ಇಳಂತಿಲ, ಗುಣಕರ ಅಗ್ನಾಡಿ, ಚಂದ್ರಶೇಖರ ಶೆಟ್ಟಿ, ಮೆಸ್ಕಾಂ ಇಲಾಖೆಯ ಎಇ ರಾಜೇಶ್, ಅಗ್ನಿಶಾಮಕದಳದ ವಿ. ಸುಂದರ, ಆರೋಗ್ಯ ಇಲಾಖೆಯ ಭರತೇಶ್, ಅರಣ್ಯ ಇಲಾಖೆಯ ಪುಟ್ಟಪ್ಪ ಬಿರಾದಾರ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಲಾರೆನ್ಸ್ ವಿಲ್ರೆಡ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಸ್ವಾಗತಿಸಿದರು. ಸದಸ್ಯ ಹರಿರಾಮಚಂದ್ರ ವಂದಿಸಿದರು. ಜಯಂತ ಪೊರೋಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ದಿವಾಕರ, ಪದ್ಮನಾಭ ಕುಲಾಲ್ ಸಹಕರಿಸಿದರು.