ಉತ್ತಮ ಕಾರ್ಯಗಳಿಗೆ ನೆರವಿನ ಹಸ್ತ ಚಾಚುವ ಹೃದಯವಂತರಿದ್ದಾರೆ-ವಿಕ್ರಂ ದತ್ತ
ಪುತ್ತೂರು: ರೋಟರಿ ಸದಸ್ಯರ ಹಾಗೂ ನಾಗರಿಕರ ನಡುವಿನ ಉತ್ತಮ ಸಂಬಂಧದಿಂದ ಇಂದು ಬಾಲಕನಿಗೆ ಕಿವಿಯ ಶ್ರವಣ ಸಾಧನ ನೀಡಲು ಸಾಧ್ಯವಾಗಿರುವುದು ಶ್ಲಾಘನೀಯ. ಒಳ್ಳೆಯ ಕಾರ್ಯಗಳಿಗೆ ನೆರವಿನ ಹಸ್ತ ಚಾಚುವ ಹೃದಯವಂತರು ನಮ್ಮ ನಡುವೆ ಇದ್ದಾರೆ. ಅವರವರ ಕಾರ್ಯಕ್ಷೇತ್ರದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆಯನ್ನು ಹಾಗೂ ಸಮಾಜವನ್ನು ಬೆಳಗಿಸೋಣ ಎಂದು ರೋಟರಿ ಜಿಲ್ಲೆ 3181 ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.

ಅ.14 ರಂದು ಸಂಜೆ ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ ಜರಗಿದ ರೋಟರಿ ಕ್ಲಬ್ ಉಪ್ಪಿನಂಗಡಿಯಿಂದ ಬಾಲಕನಿಗೆ ಉಚಿತ ಶ್ರವಣ ಸಾಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಬಾಲಕಿಗೆ ಶ್ರವಣ ಸಾಧನವನ್ನು ವಿತರಿಸಿ ಮಾತನಾಡಿದರು.
ಕಣ್ಣಿಲ್ಲದವರಿಗೆ ಕಣ್ಣಾಗೋಣ, ಕಿವಿಯಿಲ್ಲದವರಿಗೆ ಕಿವಿಯಾಗೋಣ-ಡಾ.ರಾಜಾರಾಮ್ ಬಿ.ಕೆ
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಂ ಬಿ.ಕೆ ಮಾತನಾಡಿ, ಕಿವಿ ಕೇಳದ ಬಾಲಕನಿಗೆ ಶ್ರವಣ ಸಾಧನ ನೀಡುವ ಮೂಲಕ ಮತ್ತೊಮ್ಮೆ ಒಳಿತಿಗಾಗಿ ಒಂದಾಗೋಣ ಎಂಬ ರೋಟರಿ ಧ್ಯೇಯಕ್ಕೆ ಅರ್ಥ ಬಂದಿದೆ. ಹುಟ್ಟುವಾಗ ಆರೋಗ್ಯವಾಗಿ ಹುಟ್ಟುವುದು ಭಾಗ್ಯ ಆದರೆ ಹುಟ್ಟಿದ ಮೇಲೆ ವಿನಾಕಾರಣ ಆರೋಗ್ಯ ಹಾಳು ಮಾಡಿಕೊಳ್ಳುವುದು ನಮ್ಮ ದೌರ್ಭಾಗ್ಯ. ಸೇವೆ ಮಾಡುವ ಮನಸ್ಸು ನಮ್ಮದಾದರೆ ಪ್ರತೀ ಕ್ಷೇತ್ರದಲ್ಲೂ ಸೇವೆ ಮುಂದುವರೆಯಲಿದೆ. ನಾವೆಲ್ಲಾ ಕಣ್ಣಿಲ್ಲದವರಿಗೆ ಕಣ್ಣಾಗೋಣ, ಕಿವಿಯಿಲ್ಲದವರಿಗೆ ಕಿವಿಯಾಗೋಣ ಎಂದರು.
ರೋಟರಿ ಫೌಂಡೇಶನ್ ಗೆ ದೇಣಿಗೆ ನೀಡಿದಾಗ ಶಾಶ್ವತ ಯೋಜನೆಗಳು ಸಿಗುವುದು-ಡಾ.ಸೂರ್ಯನಾರಾಯಣ
ಅಂತರರಾಷ್ಟ್ರೀಯ ರೋಟರಿ ಟಿ.ಆರ್.ಎಫ್ ಜಿಲ್ಲಾ ಚೇರ್ಮನ್ ಡಾ.ಸೂರ್ಯನಾರಾಯಣ ಮಾತನಾಡಿ, ರೋಟರಿ ಉಪ್ಪಿನಂಗಡಿರವರ ನೇತೃತ್ವದಲ್ಲಿ ಕ್ಲಬ್ ಸದಸ್ಯರೊಂದಿಗೆ ಅವರ ಮಿತ್ರರು ಒಗ್ಗೂಡಿ ಬಾಲಕನಿಗೆ ಶ್ರವಣ ಸಾಧನದ ನೆರವು ನೀಡಿರುವುದು ಶ್ಲಾಘನೀಯ. ರೋಟರಿ ಮುಖೇನ ಸಮಾಜದ ದಾನಿಗಳು ಕೈಜೋಡಿಸಿದಾಗ ಅದು ಉತ್ತಮ ರೀತಿಯಲ್ಲಿ ಸಮಾಜದಲ್ಲಿ ಬಳಸಲ್ಪಡುತ್ತದೆ. ರೋಟರಿ ಫೌಂಡೇಶನ್ ಬೆಳೆಯಬೇಕಾದರೆ ರೊಟೇರಿಯನ್ಸ್ ಗಳ ಸಂಖ್ಯೆ ಹೆಚ್ಚಳವಾಗಬೇಕು. ಆ ಮೂಲಕ ರೋಟರಿ ಫೌಂಡೇಶನ್ ಗೆ ದೇಣಿಗೆ ನೀಡಿದಾಗ ಊರಿಗೆ ಬ್ಲಡ್ ಬ್ಯಾಂಕ್, ಕಣ್ಣಿನ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರದಂತಹ ಶಾಶ್ವತ ಯೋಜನೆಗಳು ಬರಲು ಸಾಧ್ಯವಾಗುವುದು ಎಂದರು.
ಒಳ್ಳೆಯ ಕಾರ್ಯಗಳಿಗೆ ದಾನಿಗಳಿಂದ ಸದಾ ಪ್ರೋತ್ಸಾಹ-ಜೋನ್ ಕೆನ್ಯೂಟ್ ಮಸ್ಕರೇನ್ಹಸ್
ಅಧ್ಯಕ್ಷತೆ ವಹಿಸಿದ ರೋಟರಿ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸ್ವಾಗತಿಸಿ ಮಾತನಾಡಿ, ನಾವು ಮಾಡುವ ಯಾವುದೇ ಒಳ್ಳೆಯ ಕಾರ್ಯಕ್ರಮವಿರಲಿ ಅಲ್ಲಿ ಸಾರ್ವಜನಿಕರಿಂದ ಪ್ರೋತ್ಸಾಹ ಖಂಡಿತಾ ಸಿಗುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಕಿವಿ ಕೇಳಿಸದ ಬಾಲಕನಿಗೆ ಕಿವಿ ಕೇಳಿಸುವ ಶ್ರವಣ ಸಾಧನ ನೀಡಲು ನೆರವಾದ ದಾನಿಗಳಿಗೆ ನಾವು ಸದಾ ಋಣಿಗಳಾಗಿದ್ದೇವೆ. ಮುಂದಿನ ದಿನಗಳಲ್ಲೂ ಕ್ಲಬ್ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ಇದೇ ರೀತಿಯ ಪ್ರೋತ್ಸಾಹವಿರಲಿ ಎಂದರು.
ಅಭಿನಂದನೆ
ಇತ್ತೀಚಿಗೆ ಸಿದ್ಧಕಟ್ಟೆ ಎಂಬಲ್ಲಿ ರೋಟರಿ ಕಂಬಳವನ್ನು ರೋಟರಿ ಸಂಸ್ಥೆಯವರು ಹಮ್ಮಿಕೊಂಡಿದ್ದು, ಈ ರೋಟರಿ ಕಂಬಳಕ್ಕೆ ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ಎರಡು ಜೊತೆ ಕೋಣಗಳು ಭಾಗವಹಿಸಿ ಕ್ವಾರ್ಟರ್ ಫೈನಲ್ ತನಕ ಸ್ಪರ್ಧಿಸಿತ್ತು. ಈ ಎರಡು ಜೊತೆ ಕೋಣಗಳ ಪ್ರಾಯೋಜಕತ್ವ ವಹಿಸಿದ ಕ್ಲಬ್ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಹಾಗೂ ಪೂರ್ವಾಧ್ಯಕ್ಷ ಡಾ.ರಾಜಾರಾಂ ಬಿ.ಕೆರವರುಗಳನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀಣಾ ಕೆನ್ಯೂಟ್ ಮಸ್ಕರೇನ್ಹಸ್ ಹಾಗೂ ಲವೀನಾ ಪಿಂಟೊ ಪ್ರಾರ್ಥಿಸಿದರು. ಕ್ಲಬ್ ಸ್ಥಾಪಕ ಸದಸ್ಯ ಅಝೀಝ್ ಬಸ್ತಿಕ್ಕಾರ್, ಪೂರ್ವಾಧ್ಯಕ್ಷ ಜಗದೀಶ್ ನಾಯಕ್, ಇಸ್ಮಾಯಿಲ್ ಇಕ್ಬಾಲ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಶ್ರೀಕಾಂತ್ ಪಡ್ರೆ ವಂದಿಸಿದರು. ಕ್ಲಬ್ ಪೂರ್ವಾಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್ ಕಾರ್ಯಕ್ರಮ ನಿರೂಪಿಸಿದರು.
ಹುಟ್ಟಿನಿಂದಲೇ ಬಲ ಕಿವಿ 90%, ಎಡ ಕಿವಿ 80% ಕೇಳಿಸದ 31ನೇ ನೆಕ್ಕಿಲಾಡಿ ಶಾಂತಿನಗರ ನಿವಾಸಿ ದಾವೂದ್ ಹಾಗೂ ನೌರೀನ್ ದಂಪತಿ ಪುತ್ರ, ಸರಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅನಾನ್ ರವರ ಕಿವಿಗಳಿಗೆ ಅತಿಥಿಗಳು ರೂ.62 ಸಾವಿರ ವೆಚ್ಚದ ಶ್ರವಣ ಸಾಧನವನ್ನು ಜೋಡಿಸಿ ಬಾಲಕನಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಫಲಾನುಭವಿ ಬಾಲಕ ಅನಾನ್ ರವರ ತಾಯಿ ಉಪಸ್ಥಿತರಿದ್ದರು.
ದಾನಿಗಳಿಗೆ ಅಭಿನಂದನೆ
ಶ್ರವಣ ಸಾಧನಗೆ ಸುಮಾರು ರೂ.62 ಸಾವಿರ ವೆಚ್ಚವಾಗಿದ್ದು, ಈ ವೆಚ್ಚವನ್ನು ಪೂರೈಸಲು ಸಹಕರಿಸಿದ ದಾನಿಗಳಾದ ಉಪ್ಪಿನಂಗಡಿ ಅನುಗ್ರಹ ಸೊಸೈಟಿಯ ಅಧ್ಯಕ್ಷ ರಾಬರ್ಟ್ ಡಿ’ಸೋಜ, ಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೆಡ್ ಡಿ’ಸೋಜ, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ, ಕರ್ನಾಟಕ ಬ್ಯಾಂಕ್ ಪ್ರಬಂಧಕ ಹರೀಶ್ ಪೂಜಾರಿ, ರೋಟರಿ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ರವರ ಸಹೋದರ ಜೋಸೆಫ್ ಮಸ್ಕರೇನ್ಹಸ್, ರೋಟರಿ ಮಾಜಿ ವಲಯ ಸೇನಾನಿ ಜೆರೋಮಿಯಸ್ ಪಾಯಿಸ್, ಸಹಕರಿಸಿದ ಕ್ಲಬ್ ಪೂರ್ವಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಶೇಶಪ್ಪ, ಖಲಂದರ್ ಶಾಫಿರವರುಗಳನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.