ಪಕ್ಷದ ಋಣ ತೀರಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ: ಎಂ.ಎಸ್. ಮಹಮ್ಮದ್
ಬಡವರ ಸೇವೆಗಾಗಿ ನನ್ನ ಈ ನಿರ್ಧಾರ: ಅಶೋಕ್ ಕುಮಾರ್ ರೈ
ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟುವ ಕೆಲಸ ಮಾಡೋಣ: ದಿವ್ಯಪ್ರಭಾ ಗೌಡ ಚಿಲ್ತಡ್ಕ
ವಿಟ್ಲ: ಚುನಾವಣೆಯ ಹೊಸ್ತಿಲಲ್ಲಿ ನಾವಿರುವ ಕಾರಣ ನಾವೆಲ್ಲರೂ ಕಟಿಬದ್ಧರಾಗಿ ಸನ್ನದ್ದರಾಗಬೇಕಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲಿನ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕಿದೆ. ನಮ್ಮ ಕಾರ್ಯಕರ್ತರಿಗೆ ತೊಂದರೆಯಾದಾಗ ಅವರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೆವೆ. ನಮ್ಮ ಸಿದ್ದಾಂತವನ್ನು ಒಪ್ಪಿಕೊಂಡು ಹಲವರು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ. ಅವರೆಲ್ಲರನ್ನು ಜೊತೆಯಾಗಿ ಸೇರಿಸಿಕೊಂಡು ಪಕ್ಷಕಟ್ಟೋಣ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ.ರವರು ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿರುವ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ಋಣ ತೀರಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ:
ಕೆ.ಪಿ.ಸಿ.ಸಿ.ಸದಸ್ಯ ಎಂ.ಎಸ್. ಮಹಮ್ಮದ್ ರವರು ಮಾತನಾಡಿ ಜಾತ್ಯಾತೀತ ಸಿದ್ದಾಂತದಲ್ಲಿ ನಂಬಿಕೆ ಇದ್ದವರಿಗೆ ಬಿಜೆಪಿಯಲ್ಲಿ ಸಲ್ಲದು. ಬಿಜೆಪಿಗೆ ಜಾತಿವಾದಿ, ಕೋಮುವಾದಿಗಳು ಬೇಕು. ಅಶೋಕ್ ಕುಮಾರ್ ರೈರವರು ತನ್ನ ಟ್ರಸ್ಟ್ ಮೂಲಕ ಜಾತಿ ಧರ್ಮ ತೊರೆದು ಸಹಕಾರ ಮಾಡಿದವರು. ಅಭ್ಯರ್ಥಿ ಯಾರೇ ಆದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ಮಾಡೋಣ. ನಮಗೆ ವಿಶ್ವಾಸ ಇದೆ. ಪುತ್ತೂರಿನಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪಕ್ಷದ ಋಣ ತೀರಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಈ ಭಾಗದಲ್ಲಿ ಪಕ್ಷಕ್ಕೆ ಬಲತುಂಬುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಾವೆಲ್ಲರೂ ಜಾತಿ ಭೇದ ಮರೆತು ಬದುಕಲು ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.
ಬಡವರ ಸೇವೆಗಾಗಿ ನನ್ನ ಈ ನಿರ್ಧಾರ:
ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈರವರು ಮಾತನಾಡಿ ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಇದೇ ನನ್ನ ಮೊದಲ ಕಾರ್ಯಕರ್ತರ ಸಭೆ. ಪಕ್ಷದ ಹೈಕಮಾಂಡ್ನ ಮಾತಿಗೆ ನಾನು ಬದ್ದನಾಗಿದ್ದೆನೆ. ರಾಜಕೀಯ ಎಂದರೆ ಹಾಗೆ ಓರ್ವ ವ್ಯಕ್ತಿ ಮೇಲೆ ಬರುವಾಗ ಕಾಲೆಳೆಯುವುದು ಸಹಜ. ನಾನಿಲ್ಲಿಗೆ ಎಂಎಲ್ಎ ಅಭ್ಯರ್ಥಿಯಾಗಿ ಬಂದಿಲ್ಲ. ಪಕ್ಷದಲ್ಲಿ ಇಪ್ಪತ್ತೆರಡು ವರುಷ ನನ್ನನ್ನು ಎಲ್ಲಾ ರೀತಿಯಲ್ಲಿಯೂ ದುಡಿಸಿಕೊಂಡಿದ್ದಾರೆ. ನಾನು ಯಾವುದೇ ಧರ್ಮ ವ್ಯಕ್ತಿಯ ಬಗ್ಗೆ ಕೆಲಸ ಮಾಡಿಲ್ಲ. ಸುಮಾರು 22ಸಾವಿರ ಕುಟುಂಬಗಳಿಗೆ ನಮ್ಮ ಟ್ರಸ್ಟ್ ನ ಮುಖಾಂತರ ಸ್ಪಂಧನೆ ಮಾಡುವ ಕೆಲಸವನ್ನು ಹತ್ತು ವರುಷಗಳಿಂದ ಮಾಡಿಕೊಂಡು ಬರುತ್ತಿದ್ದೆನೆ. ಸಮಾಜದಿಂದ ಬಂದ ಲಾಭದ ಒಂದಂಶವನ್ನು ಸಮಾಜಕ್ಕೆ ಕೊಡುವ ಕೆಲಸವನ್ನು ಮಾಡುತ್ತಿದ್ದೆನೆ. ದುಡ್ಡು ಸಂಪಾದನೆ ಉದ್ದೆಶದಿಂದ ನಾನು ಶಾಸಕನಾಗಬೇಕು ಎಂದು ಬಯಸುತ್ತಿಲ್ಲ. ಬಡವರ ಸೇವೆ ಮಾಡುವ ಉದ್ದೆಶದಿಂದ ಈ ನಿರ್ಧಾರಕ್ಕೆ ಬಂದಿದ್ದೆನೆ ಎಂದರು.
ಕಾರ್ಯಕರ್ತರೆಲ್ಲರೂ ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ. ಯಾವುದೇ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಬಾರದು. ಕಾರ್ಯಕರ್ತನಾಗಿ ನಿಮ್ಮೊಂದಿಗೆ ನಾನು ಬರುತ್ತೇನೆ ಪ್ರತೀ ವಾರ್ಡ್ ಗಳಿಗೆ ತೆರಳಿ ಅವರ ಕಷ್ಟವನ್ನು ಅರಿಯುವ ಪ್ರಯತ್ನ ಮಾಡೋಣ. ಈ ಭಾಗದ ಎಲ್ಲಾ ಕಾರ್ಯಕರ್ತರು ಸಹಕಾರ ನೀಡಿ. ಎಷ್ಟು ಸಮಯ ಪಕ್ಷಕ್ಕಾಗಿ ನೀಡುತ್ತೀರೋ ಅದರ ಮೇಲೆ ನಮ್ಮ ಯಶಸ್ಸು ನಿಂತಿದೆ. ನಮ್ಮ ಪಕ್ಷದ ಬಗ್ಗೆ ನಾವು ಕೀಳಾಗಿ ಮಾತನಾಡುವುದನ್ನು ಬಿಟ್ಟು ಎಲ್ಲರೂ ಒಂದಾಗಿ ಹೋರಾಡೋಣ. ಇನ್ನಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರುವವರಿದ್ದಾರೆ. ಅವರೆಲ್ಲರನ್ನು ಸೇರಿಸಿಕೊಂಡು ಮುನ್ನಡೆಯೋಣ. ನಮ್ಮ ಜವಾಬ್ದಾರಿಯನ್ನು ತೆಗದುಕೊಂಡ ಮೇಲೆ ಅದಕ್ಕಾಗಿ ನಾವು ಸಮಯಕೊಡುವ ಪ್ರಯತ್ನವಾಗಬೇಕು. ಎಲ್ಲರ ಸಹಕಾರ ಅಗತ್ಯವಿದೆ. ನಮ್ಮ ಪಕ್ಷದ ಶಾಸಕರನ್ನು ಚುನಾವಣೆಯಲ್ಲಿ ಗೆಲ್ಲಿಸೋಣ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟುವ ಕೆಲಸ ಮಾಡೋಣ:
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷ ದಿವ್ಯಪ್ರಭಾ ಗೌಡ ಚಿಲ್ತಡ್ಕ ರವರು ಮಾತನಾಡಿ, ಬಹಳ ಸಂತೋಷ ಆಗ್ತಾ ಇದೆ. ನಾವು ಮಾಡಿದ ಅಭಿವೃದ್ಧಿಯನ್ನು ಹೇಳಿ ಮತ ಕೇಳುವ ಕೆಲಸವಾಗಬೇಕು. ಪಕ್ಷದ ಹಿರಿಯರ ಸಲಹೆ ಸೂಚನೆಯಂತೆ ಮುಂದುವರಿಯೋಣ. ಸಾಮಾನ್ಯರಿಗೂ ಕಾಂಗ್ರೆಸ್ ಪಕ್ಷ ಬೇಕು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೆವೆ. ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡೋಣ. ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟುವ ಕೆಲಸ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ನೆಲ್ಲಿಗುಡ್ಡೆ ಮೀನಾಕ್ಷಿ, ವಿಜಯ ಚಂದಳಿಕೆರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಪಕ್ಷದ ಮುಖಂಡರು ಧ್ವಜನೀಡಿ ಬರಮಾಡಿಕೊಂಡರು.
ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಎಸ್.ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಅಲ್ಪಸಂಖ್ಯಾತ ಅಧ್ಯಕ್ಷ ಕರೀಂ ಕುದ್ದುಪದವು, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಸೇಸಪ್ಪ ನೆಕ್ಕಿಲು, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಳಾ ಕುಲಾಲ್, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ನಗರ ಕಾಂಗ್ರೆಸ್ ಅಧ್ಯಕ್ಷ ವಿಟ್ಲ ಶ್ರೀನಿವಾಸ ಶೆಟ್ಟಿ ಕೊಲ್ಯ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ವಿಕೆಎಂ ಆಶ್ರಫ್, ಪೆರುವಾಯಿ ಗ್ರಾ.ಪಂ. ಉಪಾಧ್ಯಕ್ಷೆ ನಪೀಸಾ ಪೆರುವಾಯಿ ಮೊದಲಾದವರು ತಮ್ಮ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ಚಂದ್ರ ಆಳ್ವ, ಮುರಳೀಧರ ರೈ ಕೋಡಿಂಬಾಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರುಕ್ ಪೆರ್ನೆ, ವಿಟ್ಲ – ಉಪ್ಪಿಂಗಡಿ ಬ್ಲಾಕ್ ಉಪಾಧ್ಯಕ್ಷ ಮಿತ್ರದಾಸ್ ರೈ ಪೆರ್ನೆ, ಅಳಿಕೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಪೂಜಾರಿ ಸಣ್ಣಗುತ್ತು. ಕೊಡಿಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ ಹಣಿಯೂರು, ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಡಿಕಯ್ಯ ನಲಿಕೆ, ಮಾಣಿಲ ಗ್ರಾ.ಪಂ.ಸದಸ್ಯ ಶ್ರೀಧರ ಬಾಳೆಕಲ್ಲು, ಜಗದೀಶ್ ಶೆಟ್ಟಿ ಅಳಿಕೆ, ಉಮಾನಾಥ ಶೆಟ್ಟಿ ಪೆರ್ನೆ, ಚಂದಪ್ಪ ಪೂಜಾರಿ ಬಲ್ನಾಡು, ಸೀತಾರಾಮ ಶೆಟ್ಟಿ ಅಳಿಕೆ, ಸದಾಶಿವ ಶೆಟ್ಟಿ ಅಳಿಕೆ, ಎಂ.ಕೆ.ಮೂಸ, ಒಸೋಲ್ಡ್ ಪಿಂಟೊ, ರವೀಂದ್ರ ಗೌಡ, ಶೌಕತ್ ಕೆಮ್ಮಾರ, ಬಾಬು ಅಗರಿ, ಸುಂದರ ಮಲ್ಲಡ್ಕ, ಶ್ರೀಧರ ಶೆಟ್ಟಿ ಪುಣಚ, ಸಿರಾಜ್ ಪುಣಚ, ಆದಂ ಕೆದುವಡ್ಕ, ದಾಮೋದರ ಮುರ, ಪ್ರವೀಣ್ ಚಂದ್ರ ಶೆಟ್ಟಿ ಕೆದಿಲ, ಸುಲೈಮಾನ್ ಸರೋಳಿ, ಬೀಪಾತುಮ್ಮ ಕೆದಿಲ, ರೋಲ್ಪಿ ಡಿಸೋಜ ಪೆರುವಾಯಿ, ರಾಜೇಂದ್ರ ರೈ ಪೆರುವಾಯಿ, ಜಯರಾಮ್ ಬಳ್ಳಾಲ್ ಮಾಣಿಲ, ವಿಷ್ಣು ಭಟ್ ಮಾಣಿಲ, ಬಾತಿಷ್ ಅಳಕೆಮಜಲು, ಇಕ್ಬಾಲ್ ಹಾನೆಸ್ಟ್, ಎಸ್.ಕೆ.ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ವಿ.ಎ. ರಶೀದ್ ಸ್ವಾಗತಿಸಿದರು. ಜಗನ್ನಾಥ ಶೆಟ್ಟಿ ಕೋಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು. ವಕ್ತಾರ ರಮಾನಾಥ ವಿಟ್ಲ ವಂದಿಸಿದರು.
ನಾನು ಯಾವತ್ತೂ ಯಾರಿಂದಲೂ ಲಂಚಸ್ವೀಕರಿಸಿಲ್ಲ, ಯಾವುದೇ ಹಣ ಪಡೆದಿಲ್ಲ ಎಂದು ಎದೆತಟ್ಟಿ ಹೇಳುವ ತಾಕತ್ತು ನನಗಿದೆ: ಶಕುಂತಳಾ ಟಿ ಶೆಟ್ಟಿ
ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿಯವರು ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯ ಎಂ.ಎಲ್.ಎ ಸೀಟ್ ನ ವಿಚಾರವಾಗಿ ನಾನು ಅಶೋಕ್ ಕುಮಾರ್ ರೈರವರಿಂದ ಹಣ ಪಡೆದಿರುವುದಾಗಿ ಆರೋಪಗಳು ಕೇಳಿ ಬರುತ್ತಿರುವುದಾಗಿ ಸಭೆಯಲ್ಲಿ ಪ್ರಸ್ತಾಪ ಮಾಡಿದರು. ನಾನು ಯಾವತ್ತೂ ಯಾರಿಂದಲೂ ಲಂಚಸ್ವೀಕರಿಸಿಲ್ಲ, ಯಾವುದೇ ಹಣ ಪಡೆದಿಲ್ಲ ಎಂದು ಎದೆತಟ್ಟಿ ಹೇಳುವ ತಾಕತ್ತು ನನಗಿದೆ. ಸುಳ್ಳು ಅಪಪ್ರಚಾರಕ್ಕೆ ಯಾರೂ ಕಿವಿಕೊಡಬಾರದು. ನಮ್ಮಲ್ಲಿಯೂ ಕೆಲವರಿದ್ದಾರೆ ಒಬ್ಬರ ವಿರುದ್ದ ಇನ್ಮೊಬ್ಬರನ್ನು ಎತ್ತಿಕಟ್ಟುವವರು. ಯಾರು ಎನ್ನುವುದು ಈಗ ಬೇಡ. ಎಲ್ಲರೂ ಸೇರಿ ಪಕ್ಷ ಕಟ್ಟಿ ಬೆಳೆಸಿ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ. ಅವರಿಗೆ ದಿಟ್ಟ ಉತ್ತರ ನೀಡೋಣ ಎಂದು ಶಕುಂತಳಾ ಟಿ. ಶೆಟ್ಟಿ ಹೇಳಿದರು.
ನಾನು ಯಾರಿಗೂ ದುಡ್ಡು ಕೊಟ್ಟಿಲ್ಲ-ಅಶೋಕ್ ಕುಮಾರ್ ರೈ
ನಾನು ಯಾರಿಗೂ ದುಡ್ಡು ಕೊಟ್ಟಿಲ್ಲ. ಅಲ್ಲಿ ಅಷ್ಟು ಕೊಟ್ಟಿದ್ದೆನೆ ಇಲ್ಲಿ ಇಷ್ಟು ಕೊಟ್ಟಿದ್ದೆನೆ ಎನ್ನುವುದು ಕೇವಲ ಅಪಪ್ರಚಾರ ಎಂದು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಸಭೆಯಲ್ಲಿ ಪ್ರಸ್ತಾಪ ಮಾಡಿದ ವಿಚಾರಕ್ಕೆ ಅಶೋಕ್ ಕುಮಾರ್ ರೈಯವರು ತನ್ನ ಭಾಷಣದಲ್ಲಿ ಉತ್ತರ ನೀಡಿದರು.